ನವದೆಹಲಿ(ಜೂ.03)  ಭಾರತರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  2 ಲಕ್ಷ ಗಡಿ ದಾಟಿದೆ.  ನಿರಂತರ ಮೂರನೇ ದಿನ 8 ಸಾವಿರಕ್ಕೂ ಅಧಿಕ ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ.  ಆದರೆ ಒಂದು ನೆಮ್ಮದಿಯ ಸಂಗತಿ ಎಂದರೆ ಅರ್ಧದಷ್ಟು ಕೊರೋನಾ ಸೋಂಕಿತರು ಗುಣಮುಖವಾಗುತ್ತಿದ್ದಾರೆ.  ಇದೆಲ್ಲದರ ನಡುವೆ ಮತ್ತೆ ದೆಹಲಿ ಗಲಭೆ ವಿಚಾರ ಸುದ್ದಿಗೆ ಬಂದಿದೆ.

ವಿಶ್ವದ ಕೊರೋನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ.  ಆದರೆ ಇದೆಲ್ಲದರ ನಡುವೆ ಸಿಎಎ ವಿರುದ್ಧ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣ ಮತ್ತೆ ಸುದ್ದಿಗೆ ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಗಲಭೆ ಆಗಲು ಕಾರಣ ಏನು? ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿ ನೀಡಿದ ಸಂದರ್ಭ ಆಗಿದ್ದೇನು? ಒಂದೊಂದೆ ಮಾಹಿತಿಗಳು ಹೊರಗೆ ಬರುತ್ತಿವೆ.

ದೆಹಲಿ ಗಲಭೆ ಸಂತ್ರಸ್ತರಿಗೆ ಇಂಡೋನೇಷ್ಯಾ ಹಣ

ದೆಹಲಿಯಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಎಂಬುದಕ್ಕೆ ದಾಖಲೆಗಳು ಲಭ್ಯವಾಗಿವೆ. ತುಕ್ಡೆ ತುಕ್ಡೆ ಗ್ಯಾಂಗ್ ಮತ್ತು ತಾಹೀರ್ ಹುಸೇನ್ ಎಂಬ ಎರಡು ಹೆಸರುಗಳು ನಿಮಗೆ ಇಲ್ಲಿ ಕಾಣುತ್ತವೆ. ದೆಹಲಿ ಪೊಲೀಸರು ದಾಖಲು ಮಾಡಿರುವ ಚಾರ್ಜ್ ಶೀಟ್  ಹೇಳಿರುವ ಅಂಶಗಳು ಭಯಾನಕವಾಗಿವೆ.

ದೆಹಲಿಯ ಚಾಂದ್ ಬಾಗ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದಿಂದ ಅಮಾನತುಗೊಂಡ ಕೌನ್ಸಿಲರ್ ತಾಹೀರ್ ಹುಸೇನ್ ಸೇರಿದಂತೆ 14 ಮಂದಿ ವಿರುದ್ಧ ದೆಹಲಿ ಪೊಲೀಸರು  ಚಾರ್ಜ್ ಶೀಟ್ ಸಲ್ಲಿಸಿದ್ದರು.

ದೆಹಲಿ ಹಿಂಸಾರಾಚಾರ ಪೂರ್ವನಿಯೋಜಿತ,  ಹುಸೇನ್ ಹಿಂಸಾಚಾರಕ್ಕಾಗಿ ಸುಮಾರು 1.30 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದಿರುವ ಪೊಲೀಸರು ಈ ಸಂಬಂಧ ತಾಹೀರ್ ಹುಸೇನ್ ಅವರ ಸಹೋದರ ಮತ್ತು ಇತರ 15 ಮಂದಿಯನ್ನು ಸಹ ಆರೋಪಿಗಳನ್ನಾಗಿ ಮಾಡಿದ್ದಾರೆ.  ಜೆಎನ್ ಯು ವಿದ್ಯಾರ್ಥಿಗಳನ್ನು ಗಲಭೆಗೆ ಪ್ರಚೋದಿಸಿದ್ದರು ಎಂಬ ಆರೋಪ  ಪೊಲೀಸರದ್ದು.

ಹುಸೇನ್ ಅವರು ಚಾಂದ್ ಬಾಗ್ ನಲ್ಲಿ ಹಿಂಸಾಚಾರ ನಡೆಯುವ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಹಾಗೂ ಇತರರನ್ನು ಭೇಟಿ ಮಾಡಿದ್ದರು ಎಂಬ ಅಂಶವು ಬಹಿರಂಗವಾಗಿದೆ. 

ಇಲ್ಲಿ ಹೇಳಿರುವ ಅಂಶಗಳೆಲ್ಲ ಆಘಾತಕಾರಿಯಾಗಿದೆ. ಮತ್ತೊಮ್ಮೆ ಮೂಲಭೂತವಾದಿಗಳ ಅಸಲಿತನ ಬಹಿರಂಗವಾಗಿದೆ.  ಈ  ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬದ ನಷ್ಟ ತುಂಬಿಕೊಡುವವರು ಯಾರು? ಎಂದು  ಬಿಜೆಪಿ ವಕ್ತಾರ ನಳೀನ್ ಕೊಹ್ಲಿ ಪ್ರಶ್ನೆ ಮಾಡಿದ್ದಾರೆ.