ನವದೆಹಲಿ[ಮಾ.15]: 53 ಜನರ ಬಲಿ ಪಡೆದ ಇತ್ತೀಚಿನ ದೆಹಲಿಯ ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧಿ ಹೋರಾಟಗಾರರ ಹಿಂಸಾಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡದ ಕುರಿತು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಂಶಯ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಸಿಎಎ ವಿರೋಧಿಗಳ ನೆರವಿಗೆ ಇಂಡೋನೇಷ್ಯಾ ಮೂಲದ ಸರ್ಕಾರೇತರ ಸಂಸ್ಥೆಯೊಂದು ಧನ ಸಹಾಯ ಮಾಡಿರುವ ಆಘಾತಕಾರಿ ವಿಷಯವನ್ನು ಕೇಂದ್ರಿಯ ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿವೆ.

ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾದ ಅಂಗಸಂಸ್ಥೆಯಾಗಿರುವ ‘ಫಲ್ಹಾ ಎ ಇನ್ಸಾನಿಯತ್‌ ಫೌಂಡೇಷನ್‌’ ಜೊತೆ ನಂಟು ಹೊಂದಿರುವ ಇಂಡೋನೇಷ್ಯಾ ಮೂಲದ ಸರ್ಕಾರೇತರ ಸಂಘಟನೆಯೊಂದು, ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲೇ ಹಣ ಸಂಗ್ರಹಿಸುತ್ತಿದೆ ಎಂಬ ಮಾಹಿತಿಯನ್ನು ಭದ್ರತಾ ಸಂಸ್ಥೆಗಳು ಕಲೆ ಹಾಕಿವೆ. ಹೀಗೆ ವಿದೇಶಗಳಿಂದ ಆನ್‌ಲೈನ್‌ ಮೂಲಕವೇ ಸಂಗ್ರಹಿಸಿದ ಹಣವನ್ನು ದುಬೈನಿಂದ ಹವಾಲಾ ಜಾಲದ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿದೆ. ಹೀಗೆ ಬಂದ ಹಣವನ್ನು ದೆಹಲಿ ಹಿಂಸಾಚಾರದಲ್ಲಿ ಮಡಿದ ಸಿಎಎ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ನಿರ್ದಿಷ್ಟ ಸಮುದಾಯದ ಕುಟುಂಬಗಳಿಗೆ, ಆಸ್ತಿ ಕಳೆದುಕೊಂಡ ಕುಟುಂಬಗಳಿಗೆ, ಗಾಯಾಳು ಕುಟುಂಬಗಳಿಗೆ ವಿತರಿಸಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.

'ದೆಹಲಿ ಹಿಂಸೆ ಭೀಕರತೆಗೆ ಯಮನೂ ರಾಜೀನಾಮೆ ನೀಡುತ್ತಿದ್ದ'

ಟ್ವೀಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಖಾತೆ ಹೊಂದಿರುವ ಇಂಡೋನೇಷ್ಯಾ ಮೂಲದ ಈ ಎನ್‌ಜಿಒ, ಪಾಕ್‌ನಲ್ಲಿರುವ ಭಾರತ ವಿರೋಧಿ ಸೈಬರ್‌ ಹೋರಾಟಗಾರರ ಜೊತೆ ಕೈಜೋಡಿಸಿ, ಅಮೆರಿಕ, ಬ್ರಿಟನ್‌, ಕೆನಡಾ, ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದೆ. ಇದರ ಜೊತೆಜೊತೆಗೇ ದೆಹಲಿ ಹಿಂಸಾಚಾರದ ಆಯ್ದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ನೊಂದವರಿಗೆ ನೆರವು ನೀಡುವ ನಿಟ್ಟಿನಲ್ಲಿ ಭಾರೀ ಪ್ರಮಾಣದಲ್ಲಿ ಹಣವನ್ನೂ ಸಂಗ್ರಹಿಸಿದೆ ಎಂದು ಭದ್ರತಾ ಸಂಸ್ಥೆಗಳು ಪತ್ತೆ ಮಾಡಿವೆ.