ಬಿಜೆಪಿಯಲ್ಲಿ ಇದೀಗ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಅಂತಿಮ ಹಂತ ತಲುಪಿದೆ. ಆದರೆ ಘೋಷಣೆಗೂ ಮೊದಲೇ ಬಿಜೆಪಿಗೆ ಶಾಕ್ ಎದುರಾಗಿದೆ. ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಬೆನ್ನಲ್ಲೇ ಪ್ರಮುಖ ನಾಯಕ, ಶಾಸಕ ಟಿ ರಾಜ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ನವದೆಹಲಿ (ಜೂ.30) ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಭರ್ಜರಿಯಾಗಿ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದ ಅಕಾಂಕ್ಷಿಗಳು ದೆಹಲಿ ವರಿಷ್ಠರ ಗಮನ ಸೆಳೆಯಲು ಹಲವು ಪ್ರಯತ್ನ ನಡಸುತ್ತಿದ್ದಾರೆ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಬಿಜೆಪಿಗೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳ ರಾಜ್ಯಾಧ್ಯಕ್ಷ ಆಯ್ಕೆ ಕಗ್ಗಂಟಾಗುತ್ತಿದೆ. ರಾಜ್ಯಾಧ್ಯಕ್ಷರ ಅಧಿಕೃತ ಘೋಷಣೆ ಹೊರಬೀಳುವ ಮೊದಲೇ ಬಿಜೆಪಿಗೆ ಆಘಾತ ಎದುರಾಗಿದೆ. ತೆಲಂಗಾಣ ಬಿಜೆಪಿಯ ಪ್ರಮುಖ ನಾಯಕ, ಶಾಸಕ ಟಿ ರಾಜಾ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ರಾಮಚಂದ್ರ ರಾವ್ ಪಾಲಾಗುತ್ತಿದೆ ಅನ್ನೋ ಮಾಹಿತಿ ಹೊರಬೀಳುತ್ತಿದ್ದಂತೆ ರಾಜಾ ಸಿಂಗ್ ಬಿಜೆಪಿ ಪಕ್ಷದಿಂದ ಹೊರಬಂದಿದ್ದಾರೆ.
ರಾಮಚಂದ್ರ ರಾವ್‌ಗೆ ರಾಜ್ಯಾಧ್ಯಕ್ಷ ಪಟ್ಟ ಸಾಧ್ಯತೆ
ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಆಕಾಂಕ್ಷಿಗಳ ಸಾಲಿನಲ್ಲಿ ಟಿ ರಾಜಾ ಸಿಂಗ್ ಮುಂಚೂಣಿಯಲ್ಲಿದ್ದರು. ಇಷ್ಟೇ ಅಲ್ಲ ಬಿಜೆಪಿ ಕಾರ್ಯಕರ್ತರು, ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಟಿ ರಾಜಾ ಸಿಂಗ್ ಆಯ್ಕೆಗೆ ಒಲವು ತೋರಿದ್ದರು ಎನ್ನಲಾಗಿದೆ. ಹೀಗಾಗಿ ರಾಜಾ ಸಿಂಗ್ ಬಿಜೆಪಿ ರಾಜ್ಯಾಧ್ಯಕ್ಷರಾಗುವುದು ಖಚಿತ ಎಂದು ಹೇಳಲಾಗುತ್ತಿತ್ತು. ಆದರೆ ಹೈಕಮಾಂಡ್ ರಾಮಚಂದ್ರ ರಾವ್‌ಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಪಟ್ಟ ಕಟ್ಟಲು ಸಜ್ಜಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಆಕ್ರೋಶಗೊಂಡ ಟಿ ರಾಜಾ ಸಿಂಗ್, ಬಿಜೆಪಿ ಪಕ್ಷಕ್ಕೆ ಗಗುಡ್ ಬೈ ಹೇಳಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಕಾರಣ ಬಿಚ್ಚಿಟ್ಟ ಟಿ ರಾಜಾ ಸಿಂಗ್
ಮಾಧ್ಯಮಗಳ ವರದಿಯಲ್ಲಿ ರಾಮಚಂದ್ರ ರಾವ್‌ಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದು ನನಗೆ ಮಾತ್ರವಲ್ಲ ಲಕ್ಷಾಂತರ ಕಾರ್ಯಕರ್ತರನ್ನು ಘಾಸಿಗೊಳಿಸಿದೆ. ಕಾರ್ಯಕರ್ತು ಬಿಜೆಪಿ ಜೊತೆಗೆ ಎಲ್ಲಾ ಸಂದರ್ಭದಲ್ಲೂ ಜೊತೆಯಾಗಿ ನಿಂತಿದ್ದಾರೆ. ಇದೀಗ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿದೆ. ಹೀಗಿರುವಾಗ ಈ ನಾಯಕರ ಆಯ್ಕೆ ತೆಲಂಗಾಣ ಬಿಜೆಪಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋದು ಪ್ರಶ್ನಿಸುವಂತಾಗಿದೆ. ಹಲವು ಶಾಸಕರ, ಸಂಸದರು ಬಿಜೆಪಿಗೆ ದುಡಿದ್ದಾರೆ. ಪಕ್ಷ ಕಟ್ಟಿದ್ದಾರೆ. ಆದರೆ ಕೆಲವರ ಹಿತಾಸಕ್ತಿಗೆ ಮಣಿದು ನಾಯಕರ ಆಯ್ಕೆ ಮಾಡುವಂತಾಗಿದೆ ಎಂದರೆ ಶೋಚನೀಯ. ಇದು ತಳಹಂತದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿದಂತೆ ಎಂದು ಟಿ ರಾಜಾ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು 3 ಬಾರಿ ನನಗೆ ಶಾಸಕ ಸ್ಥಾನ ನೀಡಿದ್ದಾರೆ. ಆದರೆ ಈ ಬಾರಿಯ ನಾನು ಮೂಕನಾಗಿದ್ದರೆ ಕಾರ್ಯಕರ್ತರಿಗೆ ಮೋಸ ಮಾಡಿದಂತೆ. ಅತೀವ ದುಃಖ ಹಾಗೂ ನೋವಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಟಿ ರಾಜಾ ಸಿಂಗ್ ಹೇಳಿದ್ದಾರೆ. ಹೀಗಾಗಿ ನಾನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಟಿ ರಾಜಾ ಸಿಂಗ್ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಲು ಉತ್ತಮ ಅವಕಾಶ
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಉತ್ತಮ ಅವಕಾಶವಿದೆ. ಆದರೆ ಇಂತಹ ಸಂದರ್ಭದಲ್ಲಿ ಪಕ್ಷ ತೆಗೆದುಕೊಂಡ ನಿರ್ಧಾರ ಹಿನ್ನಡೆಗೆ ಕಾರಣವಾಗಲಿದೆ. ಪಕ್ಷದ ಪ್ರಮುಖ ನಾಯಕರು, ಪಕ್ಷಕ್ಕಾಗಿ ದುಡಿದ ನಾಯಕರನ್ನು ಕಡೆಗಣಿಸಲಾಗಿದೆ ಅನ್ನೋ ನೋವು ಕಾಡುತ್ತಿದೆ. ಹೀಗಾಗಿ ಪಕ್ಷದಿಂದ ಹೊರನಡೆಯುತ್ತಿದ್ದೇನೆ ಎಂದು ಟಿ ರಾಜಾ ಸಿಂಗ್ ಹೇಳಿದ್ದಾರೆ.
ಟಿ ರಾಜಾ ಸಿಂಗ್ ರಾಜೀನಾಮೆ ಇದೀಗ ವರಿಷ್ಠರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ಬಿಜೆಪಿಯಲ್ಲೂ ಬಣ ರಾಜಕೀಯ, ಗುಂಪುಗಳು ತೀವ್ರಗೊಂಡಿದೆ. ಹೀಗಾಗಿ ಇದೇ ಪರಿಸ್ಥಿತಿ ಕರ್ನಾಟಕದಲ್ಲೂ ಎದುರಾಗುವ ಸಾಧ್ಯತೆ ಇದೆ. ಟಿ ರಾಜಾ ಸಿಂಗ್ ಇದೀಗ ರಾಜೀನಾಮೆ ನೀಡಿದ ಬೆಳವಣಿಗೆ ಬಿಜೆಪಿ ರಾಜೀಕಯ ವಲದಲ್ಲಿ ಭಾರಿ ಸಂಚಲನ ಸಷ್ಟಿಸಿದೆ.
