Asianet Suvarna News Asianet Suvarna News

ಇದು ಮೋದಿ ಸರ್ಕಾರದ ವೈಫಲ್ಯ, ವ್ಯವಸ್ಥೆಯದ್ದಲ್ಲ: ಸೋನಿಯಾ!

ಇದು ಮೋದಿ ಸರ್ಕಾರದ ವೈಫಲ್ಯ, ವ್ಯವಸ್ಥೆಯದ್ದಲ್ಲ: ಸೋನಿಯಾ| ಕೋವಿಡ್‌ ಕುರಿತು ಕೂಡಲೇ ಸರ್ವಪಕ್ಷ ಸಭೆ ಕರೆಯಿರಿ| ಸಹಾನುಭೂತಿಯಿಲ್ಲದ ರಾಜಕೀಯ ನಾಯಕತ್ವ ದೇಶದಲ್ಲಿದೆ| ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಆಕ್ರೋಶ

System has not failed Modi government has Sonia Gandhi on Covid 19 crisis pod
Author
Bangalore, First Published May 8, 2021, 9:56 AM IST

ನವದೆಹಲಿ(ಮೇ.08): ಕೊರೋನಾ ನಿರ್ವಹಣೆ ವಿಚಾರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ವ್ಯವಸ್ಥೆ ವೈಫಲ್ಯ ಅನುಭವಿಸಿಲ್ಲ. ಮೋದಿ ಸರ್ಕಾರ ಜನತೆಯನ್ನು ವೈಫಲ್ಯಕ್ಕೆ ದೂಡಿದೆ. ಹೀಗಾಗಿ ಕೋವಿಡ್‌ ಬಗ್ಗೆ ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

ವಿಡಿಯೋ ಕಾನ್ಛರೆನ್ಸ್‌ ಮೂಲಕ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಜನತೆಯ ಬಗ್ಗೆ ಸಹಾನುಭೂತಿ ಇಲ್ಲದ ರಾಜಕೀಯ ನಾಯಕತ್ವದಿಂದ ಭಾರತ ಬಳಲುತ್ತಿದೆ ಎಂದು ದೂಷಿಸಿದರು. ಕೋವಿಡ್‌ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಗ್ರಹಿಸಲು ಸಂಸದೀಯ ಸ್ಥಾಯಿ ಸಮಿತಿಗಳ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಭಾರತದ ಹಲವು ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಮೋದಿ ಸರ್ಕಾರ ವಿಫಲವಾಗಿದೆ. ಈ ಸಾಂಕ್ರಾಮಿಕ ವ್ಯಾಧಿಯ ಹೋರಾಟ ಎಂಬುದು ಸರ್ಕಾರ ಹಾಗೂ ನಮ್ಮ ನಡುವಣ ತಿಕ್ಕಾಟ ಅಲ್ಲ. ನಮ್ಮ ಹಾಗೂ ಕೊರೋನಾ ವಿರುದ್ಧದ ಸಮರ. ರಾಜಕೀಯ ಭಿನ್ನಾಭಿಪ್ರಾಯಗಳೆಲ್ಲವನ್ನೂ ಮೀರಿಸಿದ್ದಾಗಿದೆ ಎಂದು ಬಣ್ಣಿಸಿದರು.

ಒಂದು ರಾಷ್ಟ್ರವಾಗಿ ನಾವೆಲ್ಲರೂ ಈ ರೋಗದ ವಿರುದ್ಧ ಹೋರಾಡಬೇಕು. ಇದಕ್ಕಾಗಿ ತಕ್ಷಣವೇ ಮೋದಿ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಈ ಬಿಕ್ಕಟ್ಟನ್ನು ನಿಯಂತ್ರಿಸಲು ಸಮರ್ಥ, ಶಾಂತ ಹಾಗೂ ದೂರದೃಷ್ಟಿಯ ನಾಯಕತ್ವದ ಅಗತ್ಯವಿದೆ. ಮೋದಿ ಸರ್ಕಾರದ ಅಸಮರ್ಥತೆ, ಭಿನ್ನಾಭಿಪ್ರಾಯಗಳ ಭಾರದಿಂದ ದೇಶ ಮುಳುಗುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಲಸಿಕಾ ನೀತಿ ಅಸಮಾನತೆಯಿಂದ ಕೂಡಿದೆ. ದಲಿತರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳ ಜತೆಗೆ ಬಡವರು ಹಾಗೂ ತುಳಿತಕ್ಕೊಳಗಾದವರನ್ನು ಲಸಿಕಾ ಅಭಿಯಾನದಿಂದ ಹೊರಗಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios