ಫ್ರಾನ್ಸ್‌ನಲ್ಲಿ ಸಂಗೀತ ಕಾರ್ಯಕ್ರಮದ ವೇಳೆ 150ಕ್ಕೂ ಹೆಚ್ಚು ಜನರ ಮೇಲೆ ಸಿರಿಂಜ್ ದಾಳಿ ನಡೆದಿದೆ. ದಾಳಿಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ, ಹಲವರ ಆರೋಗ್ಯ ಗಂಭೀರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದಾಳಿಗೆ ಕರೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಪ್ಯಾರಿಸ್ (ಜೂ.25): ಫ್ರಾನ್ಸ್‌ನ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಫೆಟೆಸ್ ಡೆ ಲಾ ಮ್ಯೂಸಿಕ್’ ವೇಳೆ, 150ಕ್ಕೂ ಹೆಚ್ಚು ಸಂಗೀತಾಸಕ್ತರ ಮೇಲೆ ಅನಾಮಿಕರ ಗುಂಪು ಸಿರಿಂಜ್ ದಾಳಿ ನಡೆಸಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ. ಈ ಪೈಕಿ ರಾಜಧಾನಿ ಪ್ಯಾರಿಸ್ ಒಂದರಲ್ಲೇ 13 ದಾಳಿಯ ಘಟನೆ ನಡೆದಿದೆ. ಘಟನೆ ಸಂಬಂಧ370ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದೊಂದು ಸಂಘಟಿತ ದಾಳಿಯೇ ಅಥವಾ ಪ್ರತ್ಯೇಕ ಘಟನೆಗಳೇ ಎಂದು ಕಂಡುಬಂದಿಲ್ಲ.
ಸಿರಿಂಜ್ ದಾಳಿ ನಡೆದಿದ್ದು ಹೇಗೆ?
ವಾರಾಂತ್ಯದ ದಿನ ರಾಜಧಾನಿ ಪ್ಯಾರಿಸ್ ಸೇರಿ ದೇಶವ್ಯಾಪಿ ನಡುರಸ್ತೆಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ ಜನರ ಗುಂಪಿಗೆ ನುಗ್ಗಿದ ಅನಾಮಿಕರು, ಮಹಿಳೆಯರನ್ನು ಗುರಿಯಾಗಿಸಿ, ಕೈ, ಕಾಲು, ಬೆನ್ನು ಸೇರಿ ವಿವಿಧ ಭಾಗಗಳ ಮೇಲೆ ಸಿರಿಂಜ್ ಚುಚ್ಚಿ ದಾಳಿ ನಡೆಸಿದ್ದಾರೆ.
ಮತ್ತು ಬರಿಸುವ ಔಷಧ ನೀಡಿಕೆ?
ದಾಳಿಯ ಹಿಂದಿನ ಉದ್ದೇಶ ಇದುವರೆಗೂ ಖಚಿತಪಟ್ಟಿಲ್ಲ. ಕೆಲವರು ಇದನ್ನು ಪ್ರ್ಯಾಂಕ್ (ತಮಾಷೆ) ಎಂದಿದ್ದಾರೆ. ಆದರೆ ದಾಳಿಗೆ ಒಳಗಾದ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಕನಿಷ್ಠ 20 ಜನರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ. ಸಿರಿಂಜ್‌ನಲ್ಲಿ ಮತ್ತು ಬರಿಸುವ ದ್ರವವನ್ನು ತುಂಬಿಸಲಾಗಿತ್ತು ಹಾಗೂ ಅದರಿಂದ ಯುವತಿಯರ ಪ್ರಜ್ಞೆ ತಪ್ಪಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಹಿಂದೆಯೂ ಇಂಥದ್ದೇ ಯತ್ನ
2022ರಲ್ಲೂ ಫ್ರಾನ್ಸ್‌ನಲ್ಲಿ ನಡೆದ ಕ್ಲಬ್, ಬಾರ್, ಸಂಗೀತ ಕಾರ್ಯಕ್ರಮ ಮತ್ತು ಥಿಯೇಟರ್ ಕಾರ್ಯಕ್ರಮಗಳ ವೇಳೆ ಇದೇ ರೀತಿಯ ದಾಳಿ ನಡೆದಿತ್ತು. ಇದೀಗ ಮತ್ತೆ ಅಂಥದ್ದೇ ಘಟನೆ ನಡೆದಿದೆ.
ಜಾಲತಾಣದಲ್ಲಿ ದಾಳಿಗೆ ಕರೆ
ಸಿರಿಂಜ್ ದಾಳಿಗೂ ಮುನ್ನ ಸ್ನಾಪ್‌ಚಾಟ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಮೇಲೆ ಹಲವು ಅನಾಮಿಕರು ದಾಳಿಗೆ ಕರೆ ನೀಡಿದ್ದರು. ಮಹಿಳಾ ಪರ ಹೋರಾಟಗಾರ್ತಿಯೊಬ್ಬರು ಈ ಕುರಿತು ಘಟನೆಗೆ ಮುನ್ನ ಎಚ್ಚರಿಕೆ ಕೂಡಾ ನೀಡಿದ್ದರು.
