Asianet Suvarna News Asianet Suvarna News

ಸ್ವೀಪರ್ ಆಗಿ ಕೆಲಸಕ್ಕೆ ಸೇರಿದ ಇವರು ಈಗ SBI Bank Manager

ಎಸ್‌ಬಿಐ ಬ್ಯಾಂಕ್‌ಗೆ ಕಸ ಗುಡಿಸುವವಳಾಗಿ ಕೆಲಸಕ್ಕೆ ಸೇರಿದ ಆಕೆ  ಇಂದು ಅವರು ಎಸ್‌ಬಿಐ ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೇಜರ್ ವೃತ್ತಿಗೇರಿದ್ದಾರೆ. ಕಸ ಗುಡಿಸುವ ವೃತ್ತಿಯಿಂದ ಜಗತ್ತಿನ ಪ್ರತಿಷ್ಠಿತ ಬ್ಯಾಂಕ್ ಒಂದರ ಮ್ಯಾನೇಜರ್ ಹುದ್ದೆಗೆ ಏರಿದ ಪ್ರತೀಕ್ಷಾ ತೊಂಡ್ವಾಲ್ಕರ್ ಅವರ ಬದುಕಿನ ಯಶೋಗಾಥೆ ಇದು. 

Sweeper to SBI Manager struggling story of women achievers Pratiksha Tondwalkar akb
Author
Bangalore, First Published Aug 1, 2022, 7:29 PM IST

ಮುಂಬೈ: ಆಕೆಗೆ ಆಗ ಕೇವಲ 20 ವರ್ಷ ಮದುವೆಯೂ ಆಗಿತ್ತು, ಮಗುವೂ ಆಗಿತ್ತು, ಜೊತೆ ಜೊತೆಯಲ್ಲಿ ಗಂಡನೂ ತೀರಿಕೊಂಡು ವಿಧವೆಯ ಪಟ್ಟ ಮುಡಿಯೇರಿತ್ತು. ಆದರೆ ಆಕೆ ಎದೆಗುಂದಲಿಲ್ಲ. ಎಸ್‌ಬಿಐ ಬ್ಯಾಂಕ್‌ಗೆ ಕಸ ಗುಡಿಸುವವಳಾಗಿ ಕೆಲಸಕ್ಕೆ ಸೇರಿದ ಆಕೆ ಕಷ್ಟದ ಜೊತೆ ಜೊತೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಿದ್ದರು. ಇಂದು ಅವರು ಎಸ್‌ಬಿಐ ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೇಜರ್ ವೃತ್ತಿಗೇರಿದ್ದಾರೆ. ಕಸ ಗುಡಿಸುವ ವೃತ್ತಿಯಿಂದ ಜಗತ್ತಿನ ಪ್ರತಿಷ್ಠಿತ ಬ್ಯಾಂಕ್ ಒಂದರ ಮ್ಯಾನೇಜರ್ ಹುದ್ದೆಗೆ ಏರಿದ ಪ್ರತೀಕ್ಷಾ ತೊಂಡ್ವಾಲ್ಕರ್ ಅವರ ಬದುಕಿನ ಯಶೋಗಾಥೆ ಇದು. 

ಪಟ್ಟುಬಿಡದ ಶ್ರಮ, ಗೆದ್ದೆ ಗೆಲ್ಲುವೆನೆಂಬುವ ಛಲ ಇವುಗಳಿದ್ದರೆ ನಿಮ್ಮ ದಾರಿಗೆ ಅಡ್ಡ ನಿಲ್ಲುವವರು ಯಾರೂ ಇಲ್ಲ. ಇದಕ್ಕೆ ಈ ಪ್ರತೀಕ್ಷಾ ತೊಂಡ್ವಾಲ್ಕರ್ ಅವರ ಜೀವನವೇ ಸಾಕ್ಷಿ. 1964 ರಲ್ಲಿ ಪುಣೆಯಲ್ಲಿ ಹಿಂದುಳಿದ ಕುಟುಂಬವೊಂದರಲ್ಲಿ ಜನಿಸಿದ ಪ್ರತೀಕ್ಷಾ ಅವರು ತಮ್ಮ  16ನೇ ವಯಸ್ಸಿನಲ್ಲಿ ಸದಾಶಿವ ಕಾಡು ಅವರೊಂದಿಗೆ ವಿವಾಹವಾದರು ಮತ್ತು ಆಕೆಯ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೈ ಬಿಟ್ಟರು. 

 

ಈಕೆಯ ಪತಿ ಸದಾಶಿವ ಕಾಡು ಮುಂಬೈನ ಎಸ್‌ಬಿಐನಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ಬದುಕಿನ ಬಂಡಿ ಹಾಗೋ ಹೀಗೋ ಚೆನ್ನಾಗಿಯೇ ನಡೆಯುತ್ತಿತ್ತು. ಸುಂದರ ದಾಂಪತ್ಯಗೆ ಒಂದು ಮಗುವೂ ಜನಿಸಿತ್ತು. ಈ ಸುಂದರ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಏನೋ ಒಂದು ದಿನ ದಂಪತಿಗಳು ಅವರ ಪೂರ್ವಜರ ಗ್ರಾಮಕ್ಕೆ ಹೋಗುವಾಗ ನಡೆದ ಅಪಘಾತವೊಂದರಲ್ಲಿ ಪ್ರತೀಕ್ಷಾ ಪತಿ ಸದಾಶಿವಕಾಡು ಅಪಘಾತದಲ್ಲಿ ಸಾವನ್ನಪ್ಪಿದರು.

ಮೂರು ವರ್ಷದಲ್ಲೇ ಮದುವೆಯಾದವಳು ಈಗ ಪೊಲೀಸ್ ಸಾಹಿಬ್!

ಆಗಿನ್ನೂ ಪ್ರತೀಕ್ಷಾಗೆ 20ರ ಹರೆಯ ಮಡಿಲಲ್ಲಿ ಪುಟ್ಟ ಮಗು ಬೇರೆ. ಆದರೆ ಬದುಕಿನ ಬಂಡಿ ಸಾಗಲೇಬೇಕು. ಪತಿಯ ಉದ್ಯೋಗಕ್ಕೆ ಸೇರೋಣ ಎಂದರೆ ಉದ್ಯೋಗಕ್ಕೆ ಅರ್ಹವಾದ ಶಿಕ್ಷಣವಿಲ್ಲ. ಪರಿಣಾಮ ಬದುಕಲು ಕನಿಷ್ಠ ನೆರವಾಗುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದ್ದಾರೆ. ಈಕೆಯ ಕಷ್ಟಕ್ಕೆ ಮರುಗಿದ ಮೇಲಾಧಿಕಾರಿಗಳು ಆಕೆಯನ್ನು ಬ್ಯಾಂಕ್‌ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಸಿಕೊಂಡರು. ಇದು ಸುಮಾರು 37 ವರ್ಷಗಳ ಹಿಂದಿನ ಕತೆ. 

ಕಸ ಗುಡಿಸುವವಳಾಗಿ ಕೆಲಸಕ್ಕೆ ಸೇರಿದ ಆಕೆಗೆ ಆಗ ತಿಂಗಳಿಗೆ ಸುಮಾರು  60 ರಿಂದ 65 ರೂಪಾಯಿ ಸಂಬಳ ಬರುತ್ತಿತ್ತು. ಆವರಣದಲ್ಲಿ ಗುಡಿಸುವುದು, ಸ್ನಾನಗೃಹಗಳನ್ನು ಸ್ವಚ್ಛಗೊಳಿಸುವುದು ಮತ್ತು ಪೀಠೋಪಕರಣಗಳ ಧೂಳು ತೆಗೆಯುವ ಕೆಲಸವನ್ನು ಆಕೆ ಮಾಡುತ್ತಿದ್ದರು. ಇದೇ ವೇಳೆ ಬ್ಯಾಂಕ್‌ನಲ್ಲಿ ಉತ್ತಮ ಸಂಬಳ ಬರುವ ಇತರರ ಬದುಕನ್ನು ನೋಡಿದ ಆಕೆಗೆ ಉನ್ನತ ಹುದ್ದೆಗೇರುವ ಕನಸು ಮನದಲ್ಲಿ ಮೊಳಕೆಯೊಡೆಯಿತು. ಹೀಗಾಗಿ ಎಲ್ಲಾ ಅಡೆತಡೆಗಳನ್ನು ಮೀರಿದ ಆಕೆ ತನ್ನ ಕನಸಿಗಾಗಿ ಶ್ರಮ ವಹಿಸಿದ ಆಕೆ ದುಡಿಯುವ ಜೊತೆ ಓದಲು ಕೂಡ ಪ್ರಾರಂಭಿಸಿದಳು. ಜೊತೆಗೆ ಈಕೆಗೆ ಸ್ನೇಹಿತರು ಹಾಗೂ ಸಂಬಂಧಿಕರು ಶಿಕ್ಷಣ ಮುಂದುವರಿಸಲು ಪುಸ್ತಕಗಳನ್ನು ತಂದು ಕೊಟ್ಟು ಪ್ರೋತ್ಸಾಹಿಸಿದರು. ಬ್ಯಾಂಕ್‌ನಲ್ಲಿ ದಿನಗೂಲಿ ನೌಕರಳಾಗಿ ಕೆಲಸಕ್ಕೆ ಸೇರಿದ ಪ್ರತೀಕ್ಷಾ ಎಲ್ಲಾ ಅಡೆತಡೆಗಳನ್ನು ಮೀರಿ  10 ನೇ ತರಗತಿಯ ಪರೀಕ್ಷೆಗಳಿಗೆ ಉತ್ತಮವಾಗಿ ಅಧ್ಯಯನ ನಡೆಸಿ ಪಾಸಾದರು. ಮತ್ತೆಂದೂ ಅವರು ಹಿಂದಿರುಗಿ ನೋಡಲಿಲ್ಲ. 

ಬದುಕೋದಿಕ್ಕೆ ಕಾಲು ಬೇಕಿಲ್ಲ, ಛಲ ಸಾಕು ಅನ್ನುವ ಮುನೀಬಾ ಮಜಾರಿ

ನಂತರ ಬ್ಯಾಂಕಿಂಗ್ ಪರೀಕ್ಷೆಯ ಮೇಲೆ ಕಣ್ಣಿಟ್ಟ ಪ್ರತೀಕ್ಷಾ ಪಿಯುಸಿ ಶಿಕ್ಷಣದತ್ತ ಗಮನ ಹರಿಸಿದರು. ಬ್ಯಾಂಕಿಂಗ್ ಪರೀಕ್ಷೆಗೆ ಆಗ ಕನಿಷ್ಠ 10+2 ವಿದ್ಯಾರ್ಹತೆ ಅಗತ್ಯವಿತ್ತು. ಹೀಗಾಗಿ ಪ್ರತೀಕ್ಷಾ ಮುಂಬೈನ ವಿಕ್ರೋಲಿಯಲ್ಲಿ ರಾತ್ರಿ ಕಾಲೇಜಿಗೆ ಸೇರಿಕೊಂಡರು. 12 ನೇ ತರಗತಿಯಲ್ಲಿ ಉತ್ತೀರ್ಣರು ಆದರೂ ಮತ್ತು 1995 ರಲ್ಲಿ ಮತ್ತೊಂದು ರಾತ್ರಿ ಕಾಲೇಜಿನಲ್ಲಿ ಸೈಕಾಲಜಿಗೆ ಮೇಜರ್ ಆಗಿ ಹೋದರು. ಶಿಕ್ಷಣದ ಅರ್ಹತೆ ಹೆಚ್ಚುತ್ತಿದ್ದಂತೆ ಬ್ಯಾಂಕ್ ಅವರನ್ನು ಗುಮಾಸ್ತ ಹುದ್ದೆಗೆ ಬಡ್ತಿ ನೀಡಿತು.

1993ರಲ್ಲಿ ಪ್ರತೀಕ್ಷಾ ಬ್ಯಾಂಕಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಿದ ಬ್ಯಾಂಕ್ ಮ್ಯಾನೇಜರ್‌ ಪ್ರಮೋದ್ ತೊಂಡ್ವಾಲ್ಕರ್ ಅವರನ್ನು ಮದುವೆಯು ಆದರು. ನಂತರ 2004 ರಲ್ಲಿ ತರಬೇತಿ ಅಧಿಕಾರಿಯಾಗಿ ಮೇಲ್ದರ್ಜೆಗೇರಿದ ಅವರು ವೃತ್ತಿಪರವಾಗಿ ಮೇಲೇರಿದರು. ಜೂನ್‌ನಲ್ಲಿ ಅಂತಿಮವಾಗಿ ಎಸ್‌ಬಿಐ ಅಥವಾ ಎಜಿಎಂನ ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ ಏರುವ  ಮೊದಲು ಪ್ರತಿಕ್ಷಾ  18 ವರ್ಷಗಳ ಕಾಲ ಹಲವು ಹುದ್ದೆಗಳ ಮೂಲಕ ಮೇಲೇರುತ್ತಲೇ ಬಂದರು. ಎಸ್‌ಬಿಐನಲ್ಲಿ 39 ವರ್ಷಗಳ ನಿರಂತರ ವೃತ್ತಿಜೀವನದ ನಂತರ  ಇನ್ನೆರಡು ವರ್ಷಗಳಲ್ಲಿ ಪ್ರತೀಕ್ಷಾ ನಿವೃತ್ತರಾಗಲಿದ್ದಾರೆ. ಒಟ್ಟಿನಲ್ಲಿ ಕಸ ಗೂಡಿಸುವರಾಗಿ ಕೆಲಸಕ್ಕೆ ಸೇರಿದ ಪ್ರತೀಕ್ಷಾ ಪರಿಶ್ರಮ ಛಲ ಹಾಗೂ ಜೊತೆಗಾರರ ಬೆಂಬಲದ ಪರಿಣಾಮ ಮುಂದೆ ಬ್ಯಾಂಕ್‌ ಮ್ಯಾನೇಜರ್ ಆಗಿ ನಿವೃತ್ತರಾಗಲಿದ್ದಾರೆ. ಸಾಧನೆ ಎಂದರೆ ಇದೇ ಅಲ್ಲವೇ.  
 

Follow Us:
Download App:
  • android
  • ios