ಎಂಥಾ ವ್ಯಕ್ತಿ ಒಂದು ದೇಶದ ನಾಯಕನಾಗಿದ್ದಾನೆ ಅನ್ನೋದರ ಮೇಲೆ ಆ ದೇಶವನ್ನು ಇತರೆ ದೇಶಗಳು ಭಾವಿಸುತ್ತವೆ ಮತ್ತು ಗೌರವಿಸುತ್ತವೆ. ಒಂದು ದೇಶದ ನಾಯಕ ಆ ದೇಶದ ಜನರ ವ್ಯಕ್ತಿತ್ವ, ಭಾಷೆ, ಭಾವನೆ, ಪ್ರೀತಿ ಎಲ್ಲದರ ಪ್ರತೀಕ. ಯಾಕೆ ಹೇಳಿದೆ ಅಂದ್ರೆ 2014ರ ನಂತರ ಭಾರತವನ್ನ ಜಗತ್ತಿನ ಇತರೆ ದೇಶಗಳು ಪರಿಭಾವಿಸುವ ರೀತಿಯೇ ಬದಲಾಗಿದೆ. ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀಯವರು. ತಮ್ಮ ಅದ್ಭುತವಾದ ಯೋಚನೆ-ಯೋಜನೆ, ಸದಾ ಪುಟಿಯುವ ಉತ್ಸಾಹ, ಪ್ರಾಪಂಚಿಕ ಚಿಂತನೆ, ಖಡಕ್‌ ತೀರ್ಮಾನ, ಜಾಗತಿಕ ಶಾಂತಿ ಸ್ಥಾಪಿಸುವಿಕೆ ಎಲ್ಲದರಲ್ಲಿ ಮೋದಿ ಜಗತ್ತಿಗೇ ಮಾದರಿಯಾಗಿದ್ದಾರೆ.

ಮೋದಿ ಜೀ ವ್ಯಕ್ತಿಯಲ್ಲ, ಒಂದು ಶಕ್ತಿ. ಅವರೊಬ್ಬ ವಿಶ್ವನಾಯಕ. ನಾನು ಅವರನ್ನ ಭೇಟಿ ಆದಾಗ ಹೇಳಿದ್ದೆ, ‘ನೀವು ಪ್ರಧಾನಮಂತ್ರಿ ಆಗಿರೋದು ನಿಮ್ಮ ಪುಣ್ಯವಲ್ಲ. ಭಾರತದ ಪುಣ್ಯ.’

ನಾನು ಮೋದಿ ಜೀಯವರನ್ನ ಮೊದಲು ಭೇಟಿ ಆಗಿದ್ದು 2017 ಜುಲೈ 21ರಂದು. ಅದೊಂದು ಅತ್ಯಂತ ಸಹಜ ಪ್ರೀತಿ ತುಂಬಿದ ಭೇಟಿ. ಆ ಭೇಟಿಯನ್ನ ಸಾಧ್ಯವಾಗಿಸಿದ್ದು ಕೇಂದ್ರ ಸಚಿವರಾಗಿದ್ದ ಇತ್ತೀಚೆಗಷ್ಟೇ ನಮ್ಮನ್ನಗಲಿದ ಅನಂತಕುಮಾರ್‌ ಅವರು. ಮೋದಿ ಜೀಗೆ ಅನಂತ್‌ ಕುಮಾರ್‌ ಅವರ ಬಗ್ಗೆ ತುಂಬು ಗೌರವವಿತ್ತು.

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ: ಸಂಸದ ಶಿವಕುಮಾರ ಉದಾಸಿ

ಇಲ್ಲಿ ಒಂದು ವಿಷಯವನ್ನ ಹೇಳಬೇಕು. ನಿಸ್ಸಂಶಯವಾಗಿ ಯೋಗ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್‌ ಆಗಲು ಕಾರಣ ನರೇಂದ್ರ ಮೋದಿ ಜೀ. ಸ್ವತಃ ಯೋಗಾಭ್ಯಾಸಿ ಆಗಿರುವ ಪ್ರಧಾನಿಗಳಿಗೆ ಯೋಗದ ಬಗ್ಗೆ ಅತೀವ ಪ್ರೀತಿ ಇದೆ. ಐದು ಸಾವಿರ ವರ್ಷಗಳಿಂದ ದೇಶದಲ್ಲಿ ಯೋಗ ಪ್ರಚಲಿತದಲ್ಲಿದ್ರೂ ಅದಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದು ಮೋದಿ ಅಧಿಕಾರಕ್ಕೆ ಬಂದಮೇಲೆ. ಅವರು ಯೋಗವನ್ನ ಪ್ರಾಪಂಚೀಕರಣಗೊಳಿಸಿದ ಮೊದಲಿಗರು.

ನಾವು ನಮ್ಮ ಶ್ವಾಸ ಸಂಸ್ಥೆಯ ಮೂಲಕ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಆಚರಿಸುತ್ತೇವೆ. ಅದರಲ್ಲಿ ಯೋಗ ಮಾಸ್ಟರ್‌ಗಳಾಗಿ ತಮ್ಮ ಪಾಡಿಗೆ ತಾವು ಎಲೆಮರೆಕಾಯಿಯಂತೆ ಇದ್ದುಕೊಂಡು ಜಾಗತಿಕ ಯೋಗಕ್ಕೆ ಕೊಡುಗೆ ನೀಡಿರುವ ಹಲವು ‘ಅನ್‌ಸಂಗ್‌ ಹೀರೋಸ್‌’ಗಳಿಗೆ ‘ಯೋಗರತ್ನ’ ಪ್ರಶಸ್ತಿ ನೀಡಿ ಗೌರವಿಸುತ್ತೇವೆ. ತಮಿಳುನಾಡಿನ ಅಮ್ಮ ನಾನಮ್ಮಾಳ್‌ರಿಂದ ಹಿಡಿದು ಅಮೆರಿಕದ ತಾವೋ ಪೋರ್ಚಾನ್‌ ಲೀಂಚ್‌ ತನಕ ಯೋಗ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹನೀಯರನ್ನ ಶ್ವಾಸಸಂಸ್ಥೆ ಯೋಗರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ನಮ್ಮ ಯೋಗ ರತ್ನ ಪ್ರಶಸ್ತಿ ಸ್ವೀಕರಿಸಿದ ನಂತರ ಹಲವು ಯೋಗಗುರುಗಳು ದೇಶದ ದೊಡ್ಡ ಗೌರವವಾದ ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾದರು ಅನ್ನೋದು ಶ್ವಾಸ ಸಂಸ್ಥೆಗೆ ಸಿಕ್ಕ ಗೌರವ ಎಂದು ನಾನು ಭಾವಿಸಿದ್ದೇನೆ.

ಸಲಹೆ ಕೇಳಿಯೇ ತೀರ್ಮಾನ ತಗೊಳ್ತಾರೆ: 6 ವರ್ಷದಿಂದ ಮೋದಿ ಜೊತೆಗಿರೋ ಸದಾನಂದ ಗೌಡ ಮುಕ್ತ ಮಾತು

ನನ್ನ ಬಗ್ಗೆ ಮೋದಿ ಜೀಯವರಿಗೆ ಆಗಲೇ ಸ್ವಲ್ಪ ತಿಳಿದಿತ್ತು. ನಿಮ್ಮಂಥವರನ್ನ ಕಂಡರೆ ಪ್ರಧಾನಿಗಳಿಗೆ ತುಂಬಾ ಇಷ್ಟಅಂತ ಅನಂತ್‌ ಕುಮಾರ್‌ ಅವರೂ ನನಗೆ ಪದೇಪದೇ ಹೇಳ್ತಿದ್ರು. ಪ್ರಧಾನಿಯವರನ್ನ ಹತ್ತಿರದಿಂದ ಕಾಣಬೇಕು, ಮಾತನಾಡಿಸ ಬೇಕು, ಗೌರವ ಸಲ್ಲಿಸಬೇಕು ಅನ್ನೋ ನನ್ನ ಮನದಾಸೆಯನ್ನ ಪೂರೈಸಿದ್ದೂ ಅನಂತಕುಮಾರ್‌ ಅವರೇ.

ನನ್ನ ಪಾಲಿಗೆ ಅದು ಎಂದಿನಂತೆ ಇನ್ನೊಂದು ದಿನವಾಗಿರಲಿಲ್ಲ. ವಿಶೇಷ ದಿನ. ವಿಶೇಷ ಘಳಿಗೆ. ನೀವು ಒಬ್ಬರೇ ಹೋಗಿ ಪ್ರಧಾನಿಯನ್ನ ಭೇಟಿ ಆಗಿ ಅಂತ ಅನಂತ್‌ ಕುಮಾರ್‌ ಪ್ರಧಾನಿಯವರ ಚೇಂಬರ್‌ ಒಳಕ್ಕೆ ನನ್ನನ್ನು ಕಳಿಸಿಕೊಟ್ಟಿದ್ರು.

ಪ್ರಧಾನಿ ಛೇಂಬರ್‌ಗೆ ಹೆಜ್ಜೆ ಇಡುತ್ತಲೇ ನಗುಮುಖದಿಂದ ಮೋದಿ ಜಿ, ‘ಆಯಿ ಯೇ ಶ್ವಾಸ ಗುರೂಜೀ’ ಅಂತ ಸ್ವಾಗತ ಮಾಡಿದ್ರು. ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ನೀವು ಮಹಾನ್‌ ಯೋಗಿಗಳು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದೀರಿ. ಯೋಗರತ್ನ ಪ್ರಶಸ್ತಿಗೆ ಭಾಜನರಾಗುವ ಯೋಗ ಸಾಧಕರನ್ನ ನೀವು ಹೇಗೆ ಆಯ್ಕೆ ಮಾಡುತ್ತೀರಿ ಅಂತ ಕುತೂಹಲದಿಂದ ಕೇಳಿದ್ರು. ನಾನು ವಿವರವಾಗಿ ಹೇಳಿದಾಗ ಶ್ಲಾಘಿಸಿದ್ರು. ನಾನು ಅವರ ಸರಳತೆಗೆ, ಪ್ರೀತಿಗೆ, ಗೌರವಕ್ಕೆ ಶಿರಭಾಗಿ ನಮಸ್ಕರಿಸಿದ್ದೆ.

ನಾನು ಪ್ರೀತಿಯಿಂದ ತೆಗೆದುಕೊಂಡುಹೋಗಿದ್ದ ಶಾಲು, ರುದ್ರಾಕ್ಷಿಮಾಲೆ ನೀಡಿ ಸನ್ಮಾನಿಸಿದೆ. ‘ಬಹುತ್‌ ಸಜಾ ಕರ್ಕೆ ಲಾಯೆ ಹೈ’(ತುಂಬಾ ಶಿಸ್ತಿನಿಂದ ತಂದಿದ್ದೀರಿ) ಅಂತ ಖುಷಿಪಟ್ಟರು. ಅದಕ್ಕೆ ನಾನು, ‘ನಾನು ಪ್ರಧಾನಿಯವರನ್ನ ಭೇಟಿ ಆಗಲು ಬಂದಿಲ್ಲ. ಒಬ್ಬ ಯೋಗಿಯನ್ನ ಭೇಟಿ ಆಗಲು ಬಂದಿದ್ದೇನೆ’ ಅಂದೆ. ಸುಮ್ಮನೆ ನಕ್ಕರು. ಆ ನಗುವಿನಲ್ಲಿ ಯೋಗಿಯೊಬ್ಬರ ಅಂತರಂಗದ ದಿವ್ಯ ಬೆಳಕಿತ್ತು.

 

ಎರಡನೇ ಭೇಟಿ ಆಗಿದ್ದು 2019 ಡಿಸೆಂಬರ್‌ 5ರಂದು. ಸ್ವಾಭಿಮಾನ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆ ಮತ್ತು ಸಂಘಟನೆ ಈ ಐದೂ ಸೂತ್ರಗಳನ್ನ ಅಳವಡಿಸಿಕೊಂಡಿರುವ ಶ್ರೀ ಪಂಚಮಸಾಲಿ ಜಗದ್ಗುರು ಪೀಠದ ‘ಹರಜಾತ್ರಾ ಮಹೋತ್ಸವ’ಕ್ಕೆ ನಾನು ಪ್ರಧಾನಿಯವರನ್ನ ಆಹ್ವಾನ ಮಾಡಲು ಹೋಗಿದ್ದೆ. ಕೇಂದ್ರ ಸಚಿವರಾಗಿರುವ ಪ್ರಹ್ಲಾದ್‌ ಜೋಷಿಯವರು, ಮುರುಗೇಶ ನಿರಾಣಿಯವರು ಮತ್ತಿತರ ಗಣ್ಯರು ನನ್ನ ಜೊತೆಗಿದ್ದರು. ಭೇಟಿಗೂ ಮುನ್ನ ನನ್ನಲ್ಲೊಂದು ಜಿಜ್ಞಾಸೆ ಮೂಡಿತ್ತು. ಪ್ರಧಾನ ಮಂತ್ರಿಗೆ ಏನು ಕೊಡೋದು? ತುಂಬಾ ಯೋಚಿಸಿದ ನಂತರ ಇಷ್ಟಲಿಂಗ, ವಿಭೂತಿ, ನೇತಿಪಾತ್ರೆ ಮತ್ತು ಯೋಗಪುಸ್ತಕ ಈ ನಾಲ್ಕನ್ನಷ್ಟೇ ತೆಗೆದುಕೊಂಡುಹೋಗಿದ್ದೆ. ಮೋದಿ ಶಿಸ್ತನ್ನ ತುಂಬಾ ಇಷ್ಟಪಡ್ತಾರೆ. ಸ್ವಚ್ಛತೆಯನ್ನ ತುಂಬಾ ಇಷ್ಟಪಡ್ತಾರೆ ಅನ್ನೋದು ನನಗೆ ಗೊತ್ತಿತ್ತು. ನನಗೇನು ಈಗ ಜಗತ್ತಿಗೇ ಗೊತ್ತು.

ಎರಡನೇ ಭೇಟಿಯಲ್ಲೂ ಮತ್ತದೇ ಪ್ರೀತಿ ವಿಶ್ವಾಸವಿತ್ತು. ನಾನು ಇಷ್ಟಲಿಂಗ, ವಿಭೂತಿ, ನೇತಿಪಾತ್ರೆ ಮತ್ತು ನನ್ನ ಯೋಗಪುಸ್ತಕವನ್ನ ಪ್ರಧಾನಿಯವರಿಗೆ ನೀಡಿದೆ. ಇಷ್ಟಲಿಂಗವನ್ನ ನೋಡಿದ ಅವರು ‘ಇದೇನಿದು?’ ಅಂತ ಕಣ್ಣರಳಿಸಿ ಕೇಳಿದ್ರು. ‘ಇದು ಇಷ್ಟಲಿಂಗ. ಇದರ ಜನಕ ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರು. ಇದು ಕೇವಲ ಕಲ್ಲಲ್ಲ. ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾಗಿದ್ದು’ ಅಂತ ಮೋದಿ ಜೀಯವರಿಗೆ ಸ್ವಲ್ಪ ವಿವರಿಸಿದೆ. ಕೂಡಲೇ ‘ಇದನ್ನ ತಯಾರಿಸಲು ಎಷ್ಟುದಿನ ಬೇಕು?’ ಪ್ರಧಾನಿಯವರು ಕೇಳಿದ್ರು. ಹಲವು ದಿನ ಬೇಕು ಎಂದೆ. ಇಷ್ಟಲಿಂಗದಲ್ಲಿ ಏನೇನು ಮಹತ್ವದ ಆಯುರ್ವೇದಿಕ್‌ ಅಂಶಗಳಿವೆ ಅನ್ನುವುದನ್ನ ವಿವರಿಸಿದೆ. ಕೇಳಿ ಖುಷಿಪಟ್ಟರು. ವಿಭೂತಿಯನ್ನು ನಾನೂ ಧರಿಸುತ್ತೇನೆ ಅಂದರು. ನೇತಿಪಾತ್ರೆ ಕೊಟ್ಟಿದ್ದಕ್ಕೆ ಯೋಗ ಮಾಡುವವರಿಗೆ ಇದು ಬಹಳ ಇಷ್ಟಅಂತ ಹೆಮ್ಮೆಪಟ್ಟರು.

ನಿಂತುಕೊಂಡೇ ಇಷ್ಟೆಲ್ಲವನ್ನೂ ಆತ್ಮೀಯತೆಯಿಂದ ಮಾತಾಡಿಸಿದ್ದ ಮೋದಿಜೀ ನಂತರ ಆಯಿಯೇ ಗುರೂಜಿ ಅಂತ ಕರೆದುಕೊಂಡು ಹೋಗಿ ಕೂರಿಸಿ ಮಾತಾಡಿಸಿದರು. ನಾವು ಕೂರುವವರೆಗೂ ಅವರು ಕೂರಲಿಲ್ಲ. ಅಂಥ ಸಂಸ್ಕಾರ ನಮ್ಮ ಪ್ರಧಾನಿಗಿದೆ. ನಾನು ಪಂಚಮಸಾಲಿ ಜಗದ್ಗುರು ಪೀಠ, ಸಂಘ ಸಮಾಜದ ಬಗ್ಗೆ ಸ್ವಲ್ಪ ವಿವರಿಸಿದೆ. ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮನಿಂದ ಹಿಡಿದು, ಕೆಳದಿ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕ ಮಹಾದೇವಿಯಂಥ ಅದ್ಭುತ ಕವಯಿತ್ರಿಯರೂ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ದೇಶ ಮತ್ತು ಭಕ್ತಿ ವಿಷಯದಲ್ಲಿ ನಮ್ಮ ಸಮಾಜದವರು ಯಾವತ್ತೂ ಮುಂದಿದ್ದೇವೆ ಅನ್ನೋದನ್ನ ಮನದಟ್ಟುಮಾಡಿದೆ. ಎಲ್ಲವನ್ನೂ ಕೇಳಿಸಿಕೊಂಡ ಮೋದೀಜಿ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಬರ್ತೀನಿ. ನನಗೆ ತುಂಬಾ ಖುಷಿಯಾಗಿದೆ ಅಂತ ನಮ್ಮನ್ನ ಪ್ರೀತಿಯಿಂದ ಬೀಳ್ಕೊಟ್ಟಿದ್ರು.

ಎರಡನೇ ಭೇಟಿಯಲ್ಲೂ ಅವರಲ್ಲೊಬ್ಬ ಪ್ರಬುದ್ಧ ಜಾಗತಿಕ ನಾಯಕನನ್ನ ಕಂಡಿದ್ದೆ.

ಮೋದಿ ಜೀ ಪ್ರಧಾನಿ ಆದಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನ ನೋಡುವ ರೀತಿಯೇ ಬದಲಾಗಿದೆ. ಯೋಗ ಮತ್ತು ಯೋಗಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ ಹರಿದು ಬರ್ತಿದೆ. ಗೌರವ ಹೆಚ್ತಿದೆ. ಸಾಮಾನ್ಯವಾಗಿ ನಾನು ಯೋಗಪ್ರಚಾರಕನಾಗಿ ಹಲವು ದೇಶಗಳನ್ನ ಸುತ್ತುತ್ತಾ ಇರ್ತೀನಿ. ಸ್ವಲ್ಪ ಮಟ್ಟಿಗಿನ ಯೋಗ ಕಲಿತವರನ್ನ ಹೆಚ್ಚಿನ ಯೋಗಾಭ್ಯಾಸಕ್ಕಾಗಿ ಭಾರತಕ್ಕೆ ಬನ್ನಿ ಅಂತ ಆಮಂತ್ರಿಸುತ್ತೇನೆ. ಹಾಗೆ ನಾನು 2016ರಲ್ಲಿ ಅಮೆರಿಕದ ಶಿಕಾಗೋದಲ್ಲಿ ಯೋಗ ರಿಟ್ರೀಟ್‌ದಲ್ಲಿದ್ದಾಗ ಹದಿನೆಂಟರ ಹುಡುಗ ನನ್ನ ಗಮನ ಸೆಳೆದಿದ್ದ. ಇಷ್ಟುಸಲ, ಯಾರೆಲ್ಲಾ ಭಾರತಕ್ಕೆ ಯೋಗಾಭ್ಯಾಸಕ್ಕೆ ಬರುತ್ತೀರ ಅಂತ ಕೇಳಿದಾಗ ಆ ಹುಡುಗ ಸುಮ್ಮನೆ ಮಂಕಾಗಿ ಕೂತಿರುತಿದ್ದ. ಆದ್ರೆ ಆವತ್ತು ಆ ಹುಡುಗ ನಾನೂ ಭಾರತಕ್ಕೆ ಬರಲು ಇಚ್ಛಿಸುತ್ತೇನೆ ಅಂದಿದ್ದ. ಯಾಕೆ ಈ ಬದಲಾವಣೆ ಅಂತ ಕೇಳಿದಾಗ ಆತ ಹೇಳಿದ್ದು, ನಿಮ್ಮಲ್ಲಿ ಹೊಸ ಪ್ರಧಾನಿ ಬಂದಿದ್ದಾರೆ. ಅವರು ಸ್ವತಃ ಯೋಗ ಮಾಡ್ತಾರಂತೆ. ನನಗೆ ಅದು ಪ್ರೇರಣೆ ನೀಡಿತು ಅಂತ ಹೇಳಿದ್ದ.

2014, ಮೇ 16ರಂದು ಲೋಕಸಭಾ ಎಲೆಕ್ಷನ್‌ ರಿಸಲ್ಟ್‌ ಘೋಷಣೆ ಟೆನ್ಷನ್‌ನಲ್ಲೇ ಇಡೀ ದೇಶ ಇದ್ದಾಗಲೂ ಮೋದಿ ಜೀ ಮಧ್ಯಾಹ್ನ ಹನ್ನೆರಡು ತಂಟೆ ತನಕ ರೂಮಿನಿಂದ ಹೊರಬಂದಿರಲಿಲ್ಲ. ಯಾವುದೇ ಟೀವಿ ಹಾಕಿರಲಿಲ್ಲ. ಧ್ಯಾನ ಮಾಡುತ್ತಾ ಭಗವಂತನ ಸ್ಮರಣೆಯಲ್ಲಿದ್ದರು. ಎಂಥ ಕಷ್ಟಕಾಲದಲ್ಲೂ ವಿಚಲಿತರಾಗದಷ್ಟುತಾದಾತ್ಮ್ಯ ಮೋದಿ ಜೀಗಿದೆ. ಇಲ್ಲ ಅಂದಿದ್ರೆ ಹಣಬಲ ಮತ್ತು ಶಸ್ತ್ರಾಸ್ತ್ರ ಬಲದಿಂದಲೇ ಮೆರೆಯುತ್ತಿದ್ದ ಜಗತ್ತಿನ ಬಲಾಢ್ಯ ದೇಶಗಳೆಲ್ಲಾ ಕೊರೋನಾ ವೈರಸ್‌ ದಾಳಿಗೆ ಸಿಕ್ಕು ಒದ್ದಾಡುತ್ತಿರುವಾಗ ಮೋದಿ ಜೀ ಭಾರತವನ್ನ ಕಂಟ್ರೋಲ್‌ ಮಾಡಿದ ರೀತಿ ಇದೆಯಲ್ಲಾ ಅದು ನಿಜಕ್ಕೂ ಗ್ರೇಟ್‌ ಅನಿಸಿತು. ಜನರಲ್ಲಿ ಆತ್ಮವಿಶ್ವಾಸ ತುಂಬಿದ್ರು. ಧೈರ್ಯ ತುಂಬಿದ್ರು. ಸಂಕಷ್ಟಕ್ಕೆ ಸಿಲುಕಿದಾಗ ಹೇಗೆ ಇಡೀ ದೇಶ ಒಗ್ಗಟ್ಟಾಗಿ ಹೋರಾಡಬೇಕು ಅನ್ನೋದನ್ನ ಹೇಳಿಕೊಟ್ರು. ಇವತ್ತು ಮೋದಿ ಜೀ ಕೆಲಸವನ್ನ ಇಡೀ ಜಗತ್ತೇ ಕೊಂಡಾಡ್ತಿದೆ. ಅವರು ನಡೆದ ದಾರಿಯನ್ನೇ ಫಾಲೋ ಮಾಡ್ತಿದೆ.

ಅಂದ್ರೆ ಮೋದೀಜಿ ಭಾರತದ ಚುಕ್ಕಾಣಿ ಹಿಡಿದ ನಂತರದಲ್ಲಿ ವಿದೇಶಿಯರಿಗೆ ಭಾರತದ ಮೇಲೆ ಅಭಿಮಾನ ಮೂಡಿದೆ. ಯೋಗ ಅರಸಿ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಯೋಗ ಮಾತ್ರವಲ್ಲ ಮೋದಿ ಆಡಳಿತ ವೈಖರಿಯ ಬಗ್ಗೆ, ದೂರದೃಷ್ಟಿಬಗ್ಗೆ, ಭಾರತವನ್ನ ಪವರ್‌ ಫುಲ್‌ ದೇಶವನ್ನಾಗಿ ಪರಿವರ್ತಿಸುವತ್ತ ಇಟ್ಟಿರುವ ಮಹತ್ವದ ಹೆಜ್ಜೆಯ ಬಗ್ಗೆ, ದೇಶಿ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆವಿಸ್ತರಣೆ, ರೈತರ ಬಗ್ಗೆ ತೆಗೆದುಕೊಂಡ ಕಾಳಜಿ, ಸ್ವಚ್ಛಭಾರತ್‌ ನಿರ್ಮಾಣ್‌ ಬಗ್ಗೆ ಇಡೀ ಜಗತ್ತು ಮಾತಾಡ್ತಿದೆ.

ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿದ, ಒಗ್ಗಟ್ಟಿನ ಸೂತ್ರ ಹೇಳಿಕೊಟ್ಟ, ಯೋಗದ ಅರಿವು ಮೂಡಿಸಿದ ಎಲ್ಲಕ್ಕಿಂತ ಹೆಚ್ಚಾಗಿ ದೇಶಕ್ಕಾಗಿ ಅವಿರತ ದುಡಿಯುತ್ತಿರುವ ವಿಶ್ವನಾಯಕ ನರೇಂದ್ರ ಮೋದಿಯವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸಬೇಕಾದ ಸಮಯ ಇದು. ಅಭಿನಂದನೆಗಳು ಮೋದಿ ಜೀ.  ನಿಮ್ಮ ಜೊತೆಗೆ ಖಂಡಿತಾ ನಾವಿದ್ದೇವೆ.

- ಶ್ರೀಶ್ರೀಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ, ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.