ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸ್ವಚ್ಚತಾ ಹಿ ಸೇವಾ ಅಭಿಯಾನಕ್ಕೆ ಕರೆ ನೀಡಿದ್ದರು. ಇದರ ಅಂಗವಾಗಿ ದೇಶದ ಮೂಲೆ ಮೂಲೆಯಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಗಿದೆ. ಇದೇ ವೇಳೆ ವಂದೇ ಭಾರತ್ ಸೇರಿದಂತೆ ಇತರ ಕೆಲ ರೈಲುಗಳನ್ನು ಕೇವಲ 14 ನಿಮಿಷದಲ್ಲಿ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಹೊಸ ದಾಖಲೆ ಬರೆದಿದೆ.
ನವದೆಹಲಿ(ಅ.02) ಭಾರತದಲ್ಲಿ ಸ್ವಚ್ಚತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಜಾಗೃತಿ ಮೂಡಿಸುವ ಕೆಲಸಗಳು ಕಳೆದ ಕೆಲ ವರ್ಷದಿಂದ ನಡೆಯುತ್ತಿದೆ. ಸ್ವಚ್ಚ ಭಾರತ್ ಅಭಿಯಾನದಡಿ ಈ ವರ್ಷ ಸ್ವಚ್ಚತಾ ಹಿ ಸೇವಾ ಅನ್ನೋ ಆಂದೋಲನಕ್ಕೆ ಮೋದಿ ಕರೆ ನೀಡಿದ್ದರು. ಗಾಂಧಿ ಜಯಂತಿ ಹಿನ್ನಲೆಯಲ್ಲಿ 1 ಗಂಟೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕೋರಿದ್ದರು. ಮೋದಿ ಮನವಿಗೆ ಸ್ಪಂದಿಸಿದ ಭಾರತ ದೇಶಾದ್ಯಂತ ಹಲವರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ರೈಲ್ವೇ ಇಲಾಖೆ ಹೊಸ ದಾಖಲೆ ಬರೆದಿದೆ. ಸ್ವಚ್ಚತಾ ಹಿ ಸೇವಾ ಅಭಿಯಾನದಡಿ ವಂದೇ ಭಾರತ್ ರೈಲನ್ನು ಕೇವಲ 14 ನಿಮಿಷದಲ್ಲಿ ಸಂಪೂರ್ಣ ಸ್ವಚ್ಚಗೊಳಿಸಿ ಹೊಸ ಇತಿಹಾಸ ರಚಿಸಿದೆ.
ನಾರ್ತ್ ವೆಸ್ಟರ್ನ್ ರೈಲ್ವೇ ಈ ಸಾಧನೆ ಮಾಡಿದೆ. ಉದಯಪುರ-ಜೈಪುರ, ಬಿಲಾಸಪುರ್-ನಾಗಪುರ, ಸಿಕಂದರಾಬಾದ್-ತಿರುಪತಿ, ಪುರಿ-ರೌರ್ಕೇಲಾ, ಗಾಂಧಿನಗರ-ಮುಂಬೈ ಸೆಂಟ್ರಲ್ ರೈಲುಗಳನ್ನು ಕೇವಲ 14 ನಿಮಿಷದಲ್ಲಿ ಸ್ವಚ್ಚಗೊಳಿಸಲಾಗಿದೆ. ಈ ಮೂಲಕ ಪ್ರಧಾನಿ ಮೋದಿ ಸ್ವಚ್ಚತಾ ಹಿ ಸೇವಾ ಅಭಿಯಾನಕ್ಕೆ ಭರ್ಜರಿ ಬೆಂಬಲ ನೀಡಿದ್ದಾರೆ.
ಸಫ್ದರ್‌ಜಂಗ್ ರೈಲು ನಿಲ್ದಾಣ ಸ್ವಚ್ಚಗೊಳಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್!
ಪ್ರತಿ ರೈಲಿನ ಬೋಗಿಗಳಿಗೆ 3 ಸ್ವಚ್ಚತಾ ಸಿಬ್ಬಂದಿಗಳು ತೆರಳಿ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬರಿಗೆ ಒಂದೊಂದು ಜವಾಬ್ದಾರಿ ನೀಡಲಾಗಿತ್ತು. ಇನ್ನು14 ನಿಮಿಷದಲ್ಲಿ ಸಂಪೂರ್ಣ ರೈಲು ಸ್ವಚ್ಚಗೊಳಿಸಿದ್ದಾರೆ. ಈ ವೇಳೆ ಶುಚಿತ್ವದಲ್ಲಿ ಎಳ್ಳಷ್ಟು ರಾಜಿಯಾಗಿಲ್ಲ. ರೈಲ್ವೇ ಇಲಾಖೆಯ ಈ ಅಭಿಯಾನ ಹಲವು ರೈಲ್ವೇ ವಿಭಾಗದಲ್ಲಿ ಯಶಸ್ವಿಯಾಗಿ ನಡೆದಿದೆ.
ರೈಲ್ವೆ ಸಚಿವಾಲಯದ ನಿರ್ದೇಶನದಂತೆ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಚೆನ್ನೈ- ಮೈಸೂರು - ಚೆನ್ನೈ ವಂದೇ ಭಾರತ್ ರೈಲಿಗೆ 14 ನಿಮಿಷಗಳ ಪವಾಡ- ಶುಚಿಗೊಳಿಸುವ ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದೆ. ಚೆನ್ನೈ-ಮೈಸೂರು-ಚೆನ್ನೈನ 16 ಕೋಚುಗಳ ‘ವಂದೇ ಭಾರತ್’ ರೈಲಿನ ಸ್ವಚ್ಛತೆಗೆ ಈ ವಿನೂತನ ಶುಚಿಗೊಳಿಸಲು ನಡೆಸಲಾಗುವ ಪ್ರಕ್ರಿಯೆಯು ರೈಲಿನ ಸ್ವಚ್ಛತೆ ಮತ್ತು ದಕ್ಷತೆಗೆ ಆದ್ಯತೆ ನೀಡುತ್ತದೆ. 14 ನಿಮಿಷಗಳ ಪವಾಡ ಕಾರ್ಯಕ್ರಮವನ್ನು ವಂದೇ ಭಾರತ್ ರೈಲುಗಳು ವಿವಿಧ ಗಮ್ಯ ಸ್ಥಾನಗಳಿಗೆ ಆಗಮಿಸಿದ ನಂತರ ಅವುಗಳನ್ನು ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ 48 ಸಿಬ್ಬಂದಿ ಮತ್ತು 3 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ.
