ನವದೆಹಲಿ [ಡಿ.17]: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳು ಭಾನುವಾರ ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ವೇಳೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್‌, ತಕ್ಷಣವೇ ಹಿಂಸಾಚಾರ ನಿಲ್ಲಿಸಿ ಎಂದು ತಾಕೀತು ಮಾಡಿದೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಮತ್ತು ಅಲಿಗಢ ಮುಸ್ಲಿ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಳ್ಳಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಸೋಮವಾರ ನ್ಯಾಯಾಲಯದ ಗಮನ ಸೆಳೆದರು. ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಪೀಠ, ‘ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾದಾಗ ಪೊಲೀಸರೇ ಅದನ್ನು ನಿಯಂತ್ರಣಕ್ಕೆ ತರಬೇಕು. ಹೀಗಾಗಿ ಈ ಪ್ರಕರಣದಲ್ಲಿ ನಾವೇನು ಮಾಡಲಾಗದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಿಂಸೆಯ ವಾತಾವರಣ ನಿರ್ಮಾಣವಾಗಿರುವಾಗ ನಾವು ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ವಿದ್ಯಾರ್ಥಿಗಳ ಹಿಂಸಾಚಾರದ ಆಕ್ಷೇಪ ವ್ಯಕ್ತಪಡಿಸಿತು.

‘ಎಲ್ಲಾ ವಿಷಯವನ್ನೂ ಪರಿಗಣಿಸಲು ನಾವು ಸಿದ್ಧ. ಆದರೆ ಹಿಂಸೆಯ ವಾತಾವರಣದಲ್ಲಿ ಅದು ಸಾಧ್ಯವಾಗದು. ಇದೇನಿದು? ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡಲಾಗುತ್ತಿದೆ, ಬಸ್‌ಗಳಿಗೆ ಬೆಂಕಿ ಹಚ್ಚಲಾಗುತ್ತಿದೆ’ ಎಂದು ನ್ಯಾಯಪೀಠ ಕಿಡಿಕಾರಿತು.

ಪೌರತ್ವ ಕಾಯ್ದೆ: ಸುಪ್ರೀಂ ಕದ ತಟ್ಟಿದ ಕಾಂಗ್ರೆಸ್!..

ಈ ವೇಳೆ ಪ್ರಕರಣವನ್ನು ಕೈಗೆತ್ತಿಕೊಳ್ಳಲೇಬೇಕು ಎಂದು ವಕೀಲರು ಒತ್ತಾಯಿಸಿದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ ‘ನಮ್ಮ ಮೇಲೆ ಇಂಥ ಬೆದರಿಕೆ ಸಲ್ಲದು. ನಾವು ನಿಮ್ಮ ಅಹವಾಲನ್ನು ಆಲಿಸಬೇಕೆಂದಾದಲ್ಲಿ ಮೊದಲು ಹಿಂಸೆ ನಿಲ್ಲಬೇಕು. ನೀವು ಈ ರೀತಿಯಲ್ಲಿ ಬೀದಿಗೆ ಇಳಿಯುತ್ತೀರಿ ಎಂದಾದಲ್ಲಿ ನಮ್ಮಿಂದ ಏನೂ ನೆರವು ಸಿಗದು. ಶಾಂತಿಯುತ ಪ್ರತಿಭಟನೆಗೆ ನಮ್ಮದೂ ವಿರೋಧವಿಲ್ಲ’ ಎಂದು ಸ್ಪಷ್ಟಪಡಿಸಿತು. ಬಳಿಕ ನಿಮ್ಮ ಅಹವಾಲಿನ ಬಗ್ಗೆ ಮಂಗಳವಾರ ಅರ್ಜಿ ಸಲ್ಲಿಸಿ, ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಸೂಚಿಸಿತು.