ದೇಶದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಅದು ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೇ ದೊಡ್ಡ ಹೊಡೆತ ಕೊಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನು ಬಂದರೆ, ಕಂಪನಿಗಳು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತವೆ ಎಂದು ಕೋರ್ಟ್ ಎಚ್ಚರಿಸಿದೆ.

ಹೊಸದಿಲ್ಲಿ (ಮಾ.13): ದೇಶದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಅದು ಅವರ ಉದ್ಯೋಗಾವಕಾಶಗಳಿಗೇ ಮುಳುವಾಗಬಹುದು ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಮುಟ್ಟಿನ ರಜೆಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿದರೆ, ಖಾಸಗಿ ಕಂಪನಿಗಳು ಸೇರಿದಂತೆ ಹಲವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

Add Asianetnews Kannada as a Preferred SourcegooglePreferred

ಇಂಥದ್ದೊಂದು ಕಾನೂನು ಜಾರಿಗೆ ಬಂದರೆ, ಪುರುಷರಿಗಿಂತ ಮಹಿಳೆಯರು ದುರ್ಬಲರು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಹರಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಮುಟ್ಟು ಎನ್ನುವುದು ಕೆಟ್ಟ ವಿಷಯ ಎಂಬ ಭಾವನೆ ಉದ್ಯೋಗದಾತರಲ್ಲಿ ಬೆಳೆಯಲು ಇದು ಕಾರಣವಾಗಬಹುದು. 'ಉದ್ಯೋಗದಾತರ ಮನಸ್ಥಿತಿ ನಿಮಗೆ ಗೊತ್ತಿಲ್ಲ, ಈ ರೀತಿ ಕಾನೂನು ಬಂದರೆ ಅವರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನೇ ನಿಲ್ಲಿಸುತ್ತಾರೆ' ಎಂದು ಕೋರ್ಟ್ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು. ಅರಿವು ಮೂಡಿಸುವುದು ಬೇರೆ, ಕಾನೂನಿನ ಮೂಲಕ ಒತ್ತಾಯ ಹೇರುವುದು ಬೇರೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಕೇರಳ ಸರ್ಕಾರದ ಬಗ್ಗೆ ಪ್ರಸ್ತಾಪ

ಹಿರಿಯ ವಕೀಲ ಎಂ. ಆರ್. ಶಂಷಾದ್ ಅವರು, ಕೇರಳ ಸರ್ಕಾರ 2013ರಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿರುವುದನ್ನು ಕೋರ್ಟ್ ಗಮನಕ್ಕೆ ತಂದರು. ಲಿಂಗ ಸಮಾನತೆ ಖಚಿತಪಡಿಸುವ ಭಾಗವಾಗಿ ಪಿಣರಾಯಿ ವಿಜಯನ್ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು ಎಂದು ಅವರು ಹೇಳಿದರು. ಹಲವು ಖಾಸಗಿ ಕಂಪನಿಗಳು ಈಗಾಗಲೇ ಇಂತಹ ರಿಯಾಯಿತಿಗಳನ್ನು ನೀಡುತ್ತಿವೆ ಎಂದೂ ಅವರು ತಿಳಿಸಿದರು. ಆದರೆ, ಇದೆಲ್ಲವೂ ಸ್ವಯಂಪ್ರೇರಿತವಾಗಿ ಜಾರಿಗೊಳಿಸುವ ಕ್ರಮಗಳು. ಕಾನೂನಿನ ಮೂಲಕ ಇದನ್ನು ಹೇರಿದರೆ ಮಹಿಳೆಯರ ವೃತ್ತಿಜೀವನವೇ ಹಾಳಾಗಬಹುದು ಎಂದು ಕೋರ್ಟ್ ಪ್ರತ್ಯುತ್ತರ ನೀಡಿತು.

ಮುಟ್ಟಿನ ನೈರ್ಮಲ್ಯ ಮತ್ತು ಆರೋಗ್ಯವು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಹುಡುಗಿಯೊಬ್ಬಳು ಘನತೆಯಿಂದ ಬದುಕುವ ಹಕ್ಕಿನ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಜನವರಿಯಲ್ಲಿ ಅಭಿಪ್ರಾಯಪಟ್ಟಿತ್ತು. ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ಸ್ವಚ್ಛ ಶೌಚಾಲಯಗಳನ್ನು ಖಚಿತಪಡಿಸಿಕೊಳ್ಳಲು ಕೋರ್ಟ್ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಆದರೆ, ರಜೆಯನ್ನು ಕಾನೂನುಬದ್ಧ ಬಾಧ್ಯತೆಯನ್ನಾಗಿ ಮಾಡುವುದು ಅನುಕೂಲಕ್ಕಿಂತ ಹೆಚ್ಚು ಅನಾನುಕೂಲಕ್ಕೆ ಕಾರಣವಾಗುತ್ತದೆ ಎಂಬ ಕಠಿಣ ನಿಲುವನ್ನು ಮುಖ್ಯ ನ್ಯಾಯಮೂರ್ತಿಗಳು ಇಂದು ತಾಳಿದರು.