ನವದೆಹಲಿ(ಫೆ.13): ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಚುನಾಯಿತರಾಗುವ ಅಭ್ಯರ್ಥಿಗಳ, ಅಪರಾಧ ಹಿನ್ನೆಲೆ ದಾಖಲೆಗಳನ್ನು 48 ಗಂಟೆಯೊಳಗೆ ಪ್ರಕಟಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
  
ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಚುನಾವಣಾ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲು ಗೆಲುವೊಂದೇ ಮಾನದಂಡವಾಗಬಾರದು ಎಂದು ಅಭಿಪ್ರಾಯಪಟ್ಟಿದೆ.

ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾರಣಗಳೇನು ಎಂಬ ವಿವರಗಳನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್’ಸೈಟ್’ನಲ್ಲಿ ಪ್ರಕಟಿಸುವಂತೆಯೂ ಎಲ್ಲಾ  ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಫಾಲಿ ಎಸ್ ನಾರಿಮನ್ ನೇತೃತ್ವದ ನ್ಯಾಯಪೀಠ, ಗೆಲುವಿನ ಮಾನದಂಡದ ಆಧಾರದಲ್ಲಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳಿಗೆ ಟಿಕೆಟ್ ನೀಡುವುದು ಸಲ್ಲ ಎಂದು ಹೇಳಿದೆ. 

391 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ 
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಪರಾಧ ಪೂರ್ವಾಪರಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯ 2018ರಲ್ಲಿ ನೀಡಿದ್ದ ತೀರ್ಪಿನ ನಿರ್ದೇಶನಗಳನ್ನು ರಾಜಕೀಯ ಪಕ್ಷಗಳು ಪಾಲಿಸುತ್ತಿಲ್ಲ ಎಂದು ಅರ್ಜಿದಾರರು ಸುಪ್ರೀಂ ಮೊರೆ ಹೋಗಿದ್ದರು.