ನವದೆಹಲಿ(ಡಿ.03): ಹೋಮಿಯೋಪತಿ ವೈದ್ಯರು ಕೊರೋನಾ ಗುಣಪಡಿಸುತ್ತೇವೆಂದು ಔಷಧಿ ನೀಡುವಂತಿಲ್ಲ. ಬದಲಿಗೆ, ಕೊರೋನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಅಥವಾ ರೋಗನಿರೋಧಕ ಶಕ್ತಿ ಹೆಚ್ಚಿಸಲು ಔಷಧಿ ನೀಡಬಹುದು ಎಂದು ಕೇಂದ್ರ ಆಯುಷ್‌ ಇಲಾಖೆ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಇತ್ತೀಚೆಗೆ ಕೇರಳ ಹೈಕೋರ್ಟ್‌ ‘ಆಯುಷ್‌ ವೈದ್ಯರು ಕೊರೋನಾ ಗುಣಪಡಿಸುವ ಹೆಸರಿನಲ್ಲಿ ಯಾವುದೇ ಔಷಧಿಗಳನ್ನು ಜನರಿಗೆ ನೀಡುವಂತಿಲ್ಲ ಹಾಗೂ ಈ ಕುರಿತು ಪ್ರಚಾರ ಮಾಡುವಂತಿಲ್ಲ’ ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಹೋಮಿಯೋಪತಿ ವೈದ್ಯರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಆ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಆಯುಷ್‌ ಸಚಿವಾಲಯ ತನ್ನ ನಿಲುವನ್ನು ಅಫಿಡವಿಟ್‌ ಮೂಲಕ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಅದರಲ್ಲಿ, ಈ ಹಿಂದೆಯೇ ತಾನು ಹೊರಡಿಸಿದ ಮಾರ್ಗಸೂಚಿಯಲ್ಲಿ ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ಧೌಷಧ ಹಾಗೂ ನ್ಯಾಚುರೋಪತಿ ವೈದ್ಯರು ಕೊರೋನಾ ಗುಣಪಡಿಸುವ ಹೆಸರಿನಲ್ಲಿ ಔಷಧ ನೀಡುವಂತಿಲ್ಲ. ಬದಲಿಗೆ, ಕೊರೋನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಇಮ್ಯುನಿಟಿ ಹೆಚ್ಚಿಸಲು ಔಷಧಿ ನೀಡಬಹುದು. ಕೊರೋನಾ ಬಂದ ರೋಗಿಗಳಿಗೆ ಸಾಂಪ್ರದಾಯಿಕ ಔಷಧಿಗಳ ಜೊತೆಗೆ ಹೆಚ್ಚುವರಿಯಾಗಿ ಈ ಚಿಕಿತ್ಸೆಗಳನ್ನು ನೀಡಬಹುದು ಎಂದು ಹೇಳಿದ್ದಾಗಿಯೂ ಸ್ಪಷ್ಟಪಡಿಸಿದೆ.