ಅದಾನಿ-ಹಿಂಡನ್‌ಬರ್ಗ್ ಪ್ರಕರಣ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್!
ಅದಾನಿ-ಹಿಂಡನ್‌ಬರ್ಗ್ ಪ್ರಕರಣದಲ್ಲಿ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಈ ವೇಳೆ ಹಿಂಡನ್‌ಬರ್ಗ್ ವರದಿ ಸಂಪೂರ್ಣವಾಗಿ ಸರಿಯಾದದ್ದು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನವದೆಹಲಿ (ನ.24): ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಸೋಮವಾರದವರೆಗೆ ಎಲ್ಲಾ ಪಕ್ಷಗಳಿಂದ ಲಿಖಿತ ವಾದವನ್ನು ನ್ಯಾಯಾಲಯ ಕೇಳಿದೆ. ನವೆಂಬರ್ 24 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ನಾವು ಹಿಂಡೆನ್‌ಬರ್ಗ್ ವರದಿಯನ್ನು ವಾಸ್ತವಿಕವಾಗಿ ಸರಿ ಎಂದು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಅದಕ್ಕಾಗಿಯೇ ನಾವು ಸೆಬಿಗೆ ತನಿಖೆ ಮಾಡುವಂತೆ ಸೂಚಿಸಿದ್ದವು. ಅದೇ ಸಮಯದಲ್ಲಿ, ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಂದರೆ ಸೆಬಿ ತನಿಖೆಗೆ ಇನ್ನು ಮುಂದೆ ಯಾವುದೇ ಸಮಯವನ್ನು ಕೇಳುವುದಿಲ್ಲ ಎಂದು ತಿಳಿಸಿದ್ದು, ಅಂದಾಜು 8 ತಿಂಗಳ ಕಾಲದಿಂದಲೂ ಸೆಬಿ ಈ ಬಗ್ಗೆ ತನಿಖೆ ನಡೆಸುತ್ತಿದೆ. 2023ರ ಜನವರಿ 24 ರಂದು, ಅಮೇರಿಕನ್ ಶಾರ್ಟ್-ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ಷೇರುಗಳ ಮೌಲ್ಯವನ್ನು ಮೋಸದಿಂದ ಏರಿಸಿದ ಆರೋಪಗಳನ್ನು ಮಾಡಿತ್ತು.
ಇದರ ಬೆನ್ನಲ್ಲಿಯೇ ಭಾರತದ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಎಲ್ಲಾ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಈ ನಡುವೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ 6 ಸದಸ್ಯರ ಸಮಿತಿಯನ್ನು ರಚಿಸಿತ್ತು. ಇದರ ಹೊರತಾಗಿ, ಮಾರುಕಟ್ಟೆ ನಿಯಂತ್ರಕ ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಅನ್ನು ಸಹ ತನಿಖೆ ಮಾಡಲು ಕೇಳಲಾಯಿತು, ಆದರೆ ಸೆಬಿ ತನ್ನ ವರದಿಯನ್ನು ಇನ್ನೂ ಸಲ್ಲಿಸಲು ಸಾಧ್ಯವಾಗಲಿಲ್ಲ.
ಇತ್ತೀಚೆಗಷ್ಟೇ ಸೆಬಿ ಇನ್ನೂ ವರದಿ ಸಲ್ಲಿಸದ ಕಾರಣ ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಪಿಐಎಲ್ ಅರ್ಜಿದಾರ ವಿಶಾಲ್ ತಿವಾರಿ ಅವರು ಸೆಬಿಗೆ ಗಡುವು ನೀಡಿದ್ದರೂ, ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾಗಿದೆ ಮತ್ತು ಅಂತಿಮ ವರದಿಯನ್ನು ಸಲ್ಲಿಸಿಲ್ಲ ಹಾಗಾಗಿ ಸಂಸ್ಥೆಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲು ಮಾಡಬೇಕು ಎಂದಿದ್ದರು.
ಈ ಮೊದಲು ಅಕ್ಟೋಬರ್ 30 ರಂದು ಈ ಪ್ರಕರಣದ ವಿಚಾರಣೆ ನಡೆಯಬೇಕಿತ್ತು, ಆದರೆ ಅದನ್ನು ಮುಂದೂಡಲಾಗಿತ್ತು. ಅಕ್ಟೋಬರ್ 20ರಂದು ನಡೆಯಬೇಕಿದ್ದ ವಿಚಾರಣೆಯನ್ನೂ 10 ದಿನಗಳ ಕಾಲ ಅಂದರೆ ಅಕ್ಟೋಬರ್ 30ಕ್ಕೆ ಮುಂದೂಡಲಾಗಿತ್ತು.
ಸೆಬಿಗೆ 2 ಅಂಶಗಳಲ್ಲಿ ತನಿಖೆ ನಡೆಸುವಂತೆ ಕೇಳಲಾಗಿತ್ತು.ಪ್ರಮುಖವಾಗಿ ಸೆಕ್ಯುರಿಟೀಸ್ ಕಾಂಟ್ರಾಕ್ಟ್ ರೆಗ್ಯುಲೇಶನ್ ನಿಯಮಗಳ ನಿಯಮ 19(ಎ) ಉಲ್ಲಂಘನೆಯಾಗಿದೆಯೇ? ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಉಲ್ಲಂಘಿಸಿ ಸ್ಟಾಕ್ ಬೆಲೆಗಳಲ್ಲಿ ಮೋಸದಿಂದ ಏರಿಸಲಾಗಿದೆಯೇ? ಎಂದು ಪ್ರಶ್ನೆ ಮಾಡಲಾಗಿತ್ತು.
ಲಕ್ಷಾಂತರ ಕೋಟಿ ನಷ್ಟದಿಂದ ಕಂಗೆಟ್ಟ ಅದಾನಿ: ಅದಾನಿ ವಿಲ್ಮರ್ ಸಂಪೂರ್ಣ ಷೇರು ಮಾರಾಟಕ್ಕೆ ಮುಂದಾದ ಅದಾನಿ ಗ್ರೂಪ್
ಇನ್ನೊಂದೆಡೆ ಸುಪ್ರೀಂ ಕೋರ್ಟ್ ಸಮಿತಿಯು 2023ರ ಮೇ 19ರಂದು ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಿದೆ. ಅದಾನಿ ಷೇರುಗಳ ಬೆಲೆಯಲ್ಲಿನ ಆಪಾದಿತ ಕುಶಲತೆಯ ಹಿಂದೆ SEBI ವೈಫಲ್ಯವಿದೆ ಎಂದು ಸಮಿತಿಯು ಹೇಳಿತ್ತು, ಈ ತೀರ್ಮಾನಕ್ಕೆ ಇನ್ನೂ ತಲುಪಲು ಸಾಧ್ಯವಿಲ್ಲ. ಗ್ರೂಪ್ ಕಂಪನಿಗಳಲ್ಲಿ ವಿದೇಶಿ ನಿಧಿಯ ಕುರಿತು ಸೆಬಿಯ ತನಿಖೆಯು ಅನಿರ್ದಿಷ್ಟವಾಗಿದೆ ಎಂದು ಸಮಿತಿಯು ಹೇಳಿತ್ತು.
14, 978 ಕೋಟಿ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟ ಗೌತಮ್ ಅದಾನಿ ಕಂಪನಿ!