Asianet Suvarna News Asianet Suvarna News

ಲವ್‌ ಜಿಹಾದ್ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ!

‘ಮದುವೆಗಾಗಿ ಮತಾಂತರ’ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ| ಉ.ಪ್ರ., ಉತ್ತರಾಖಂಡ ಕಾಯ್ದೆಗಳ ಸಂವಿಧಾನಾತ್ಮಕತೆ ಪರಿಶೀಲನೆ

Supreme Court refuses to stay love jihad laws in UP Uttarakhand; issues notice pod
Author
Bangalore, First Published Jan 7, 2021, 8:10 AM IST

ನವದೆಹಲಿ(ಜ.07): ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳು ಜಾರಿಗೆ ತಂದಿರುವ ‘ಮದುವೆಗಾಗಿ ಮತಾಂತರ ನಿಷೇಧ’ ಕಾಯ್ದೆಗಳು ಸಂವಿಧಾನಬದ್ಧವಾಗಿವೆಯೇ ಇಲ್ಲವೇ ಎಂಬುದನ್ನು ಪರಾಮರ್ಶಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರ ಪೀಠ ಎರಡೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

‘ಲವ್‌ ಜಿಹಾದ್‌ ನಿಷೇಧ ಕಾಯ್ದೆ’ ಎಂದೇ ಪ್ರಸಿದ್ಧವಾಗಿರುವ ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ-2020 ಹಾಗೂ ಉತ್ತರಾಖಂಡದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2018ನ್ನು ಪ್ರಶ್ನಿಸಿ ಕೆಲ ವಕೀಲರು ಹಾಗೂ ಎನ್‌ಜಿಒಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಬುಧವಾರ ಇವುಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌, ಮೊದಲಿಗೆ ಈ ಅರ್ಜಿಗಳನ್ನು ಆಯಾ ರಾಜ್ಯಗಳ ಹೈಕೋರ್ಟ್‌ನಲ್ಲಿ ಸಲ್ಲಿಸಲು ಸೂಚಿಸಿತು. ಆಗ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ‘ಇನ್ನೂ ಹಲವು ರಾಜ್ಯಗಳಲ್ಲಿ ಇಂತಹುದೇ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಮದುವೆ ನಡೆಯುತ್ತಿರುವಾಗಲೇ ಜನರನ್ನು ‘ಎತ್ತಾಕಿಕೊಂಡು’ ಹೋಗಲಾಗುತ್ತಿದೆ. ಜನರಿಗೆ ಸಂವಿಧಾನಬದ್ಧವಾಗಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಈ ಕಾಯ್ದೆಗಳು ಉಲ್ಲಂಘಿಸುತ್ತಿವೆ. ಹೀಗಾಗಿ ಈ ಕಾಯ್ದೆಗಳಿಗೆ ತಡೆ ನೀಡಿ ಸುಪ್ರೀಂಕೋರ್ಟ್‌ನಲ್ಲೇ ವಿಚಾರಣೆ ನಡೆಸಬೇಕು’ ಎಂದು ಕೋರಿದರು.

ಆಗ ಉತ್ತರಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳ ವಾದವನ್ನೇ ಆಲಿಸದೆ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ, ಸುಪ್ರೀಂಕೋರ್ಟ್‌ನಲ್ಲೇ ಈ ಕಾಯ್ದೆಗಳ ಸಂವಿಧಾನಬದ್ಧತೆಯನ್ನು ನಿಷ್ಕರ್ಷೆ ಮಾಡುವುದಾಗಿ ಹೇಳಿತು.

Follow Us:
Download App:
  • android
  • ios