ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ ಕೇಸ್: ಫಿರೋಜ್‌ಪುರ ಎಸ್‌ಎಸ್‌ಪಿಗೆ ಸುಪ್ರೀಂ ಕೋರ್ಟ್ ತರಾಟೆ
ಪ್ರಧಾನಿ ಮೋದಿಗೆ ಪಂಜಾಬ್‌ನಲ್ಲಿ ಉಂಟಾದ ಭದ್ರತಾ ಉಲ್ಲಂಘನೆ ಕುರಿತು ಸುಪ್ರೀಂಕೋರ್ಟ್ ಐವರು ಸಮಿತಿ ಸದಸ್ಯರು ನೀಡಿದ್ದ ವರದಿಯನ್ನು ಓದಿದೆ. ಈ ವೇಳೆ ಫಿರೋಜ್‌ಪುರ ಎಸ್‌ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗುಂಟಾದ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಫಿರೋಜ್‌ಪುರ ಎಸ್‌ಎಸ್‌ಪಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದರು ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿಗೆ ಭದ್ರತಾ ಉಲ್ಲಂಘನೆ ಕುರಿತು ಐವರು ಸದಸ್ಯರ ಸಮಿತಿ ಸಲ್ಲಿಸಿದ್ದ ವರದಿಯನ್ನು ಓದಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಈ ವೇಳೆ ಫಿರೋಜ್‌ಪುರ ಹಿರಿಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನವರಿ 2022 ರಲ್ಲಿ ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಉಲ್ಲಂಘನೆಯಾಗಿತ್ತು. ಈ ವಿಚಾರವಾಗಿ ಬಿಜೆಪಿ ಹಾಗೂ ಪಂಜಾಬ್‌ನ ಕಾಂಗ್ರೆಸ್ ಸರ್ಕಾರದ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಜಸ್ಟೀಸ್ ಇಂದು ಮಲ್ಹೋತ್ರಾ ಅವರ ನೇತೃತ್ವದ ಸಮಿತಿ ಈ ವರದಿ ನೀಡಿದ್ದು, ಸುಪ್ರೀಂ ಕೋರ್ಟ್ ಈ ಸಮಿತಿಯ ವರದಿಯನ್ನು ಓದಿದೆ. ಅವರು (ಫಿರೋಜ್‌ಪುರ ಎಸ್‌ಎಸ್‌ಪಿ) ಸಾಕಷ್ಟು ಬಲ ಲಭ್ಯವಿದ್ದರೂ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆ ಮಾರ್ಗವನ್ನು ಪ್ರವೇಶಿಸುತ್ತಾರೆ ಎಂದು 2 ಗಂಟೆಗಳ ಮೊದಲು ತಿಳಿಸಿದ್ದರೂ ಸಹ ಪ್ರಧಾನಿಗೆ ಸರಿಯಾದ ಭದ್ರತೆ ಕಲ್ಪಿಸಲು ವಿಫಲರಾಗಿದ್ದಾರೆ ಎಂದು ಐವರು ಸದಸ್ಯರ ಸಮಿತಿ ಸಲ್ಲಿಸಿದ ವರದಿಯನ್ನು ಸುಪ್ರೀಂ ಕೋರ್ಟ್ ಓದಿದೆ.
ಸುಪ್ರೀಂ ಕೋರ್ಟ್ ಸ್ಥಾಪಿಸಿದ ಐವರು ಸದಸ್ಯರ ಸಮಿತಿಯು ಪ್ರಧಾನಿಯ ಭದ್ರತೆಯನ್ನು ಬಲಪಡಿಸಲು ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ. ಅಲ್ಲದೆ, ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಸಹ ಉನ್ನತ ನ್ಯಾಯಾಲಯ ಹೇಳಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ನಡೆದಿತ್ತು. ಅತ್ಯಂತ ಬಿಗಿ ಭದ್ರತೆ ವ್ಯವಸ್ಥೆ ಹೊಂದಿರುವ ಪ್ರಧಾಣಿ, ಫ್ಲೈ ಓವರ್ ಮೇಲೆ 20 ನಿಮಿಷಗಳನ್ನು ಅತಂತ್ರವಾಗಿ ಕಳೆದಿದ್ದರು. ಇದು ಪ್ರಧಾನಿಯಂತಹ ಅತಿ ಗಣ್ಯರ ವಿಷಯದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪ ಎನಿಸಿಕೊಂಡಿತ್ತು.
ನಂತರ, ಪಂಜಾಬ್‌ನಲ್ಲಿ ಪ್ರಧಾನಿ ಭೇಟಿ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್, ಪ್ರಧಾನಿಯ ಪ್ರಯಾಣದ ದಾಖಲೆಗಳನ್ನು ತಕ್ಷಣ ವಶ ಪಡಿಸಿಕೊಂಡು ಸುರಕ್ಷಿತವಾಗಿರಿಸುವಂತೆ ಪಂಜಾಬ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿತ್ತು. ಅಲ್ಲದೆ, ರಾಜ್ಯದ ಹಾಗೂ ಕೇಂದ್ರದ ತನಿಖೆ ಸ್ಥಗಿತಕ್ಕೂ ಸೂಚಿಸಿತ್ತು.