ದೆಹಲಿ ಸಿಎಂ ಕೇಜ್ರಿವಾಲ್‌ಗೆ ಜಾಮೀನು: ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್..!
ಕೇಜ್ರಿವಾಲ್ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ಸಿಬಿಐಯನ್ನು ಪಂಜರದ ಗಿಳಿಗೆ ಹೋಲಿಸುವ ಮೂಲಕ ದೇಶದ ಪ್ರಸಿದ್ಧ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಇನ್ನೊಮ್ಮೆ ಬಹಿರಂಗವಾಗಿ ಪ್ರಶ್ನಿಸಿದೆ.
ನವದೆಹಲಿ(ಸೆ.14): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ಆದೇಶದಲ್ಲಿ ಸುಪ್ರೀಂಕೋರ್ಟ್ ಸಿಬಿಐಯನ್ನು ತೀವ್ರ ತರಾಟೆ ತೆಗೆದುಕೊಂಡಿದ್ದು, ‘ಸಿಬಿಐ ಪಂಜರದ ಗಿಳಿ ಎಂಬ ಕಲ್ಪನೆಯಿಂದ ತನ್ನನ್ನು ತಾನು ಹೊರಗೆ ತಂದುಕೊಳ್ಳಬೇಕು ಹಾಗೂ ಸ್ವತಂತ್ರ ಗಿಳಿ ಆಗಬೇಕು’ ಎಂದು ತೀಕ್ಷ್ಣವಾಗಿ ಹೇಳಿದೆ.
2013ರಲ್ಲಿ ಕುಖ್ಯಾತ ಕಲ್ಲಿದ್ದಲು ಹಗರಣದ ವಿಚಾರಣೆ ನಡೆಸುವಾಗ ‘ಸಿಬಿಐ ಪಂಜರದ ಗಿಳಿಯಾಗಿದ್ದು, ಮಾಲಿಕನ ಧ್ವನಿಯಲ್ಲಿ ಮಾತನಾಡುತ್ತಿದೆ’ ಎಂದು ನ್ಯಾ.ಆರ್.ಎಂ.ಲೋಧಾ (ಈಗ ನಿವೃತ್ತ) ಹೇಳಿದ್ದರು. ಅದು ಸಾಕಷ್ಟು ಪ್ರಚಾರ ಪಡೆದಿತ್ತು. ಕೇಜ್ರಿವಾಲ್ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ಸಿಬಿಐಯನ್ನು ಪಂಜರದ ಗಿಳಿಗೆ ಹೋಲಿಸುವ ಮೂಲಕ ದೇಶದ ಪ್ರಸಿದ್ಧ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಇನ್ನೊಮ್ಮೆ ಬಹಿರಂಗವಾಗಿ ಪ್ರಶ್ನಿಸಿದೆ.
ಕ್ಯಾನ್ಸರ್ ಆತಂಕದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್, ಜಾಮೀನು ವಿಸ್ತರಣೆ ನಿರಾಕರಿಸಿದ ಸುಪ್ರೀಂ
ಕೇಜ್ರಿವಾಲ್‌ಗೆ ಜಾಮೀನು ನೀಡುವಾಗ ನ್ಯಾ.ಸೂರ್ಯಕಾಂತ್ ಹಾಗೂ ನ್ಯಾ.ಉಜ್ಜಲ್ ಭೂಯಾನ್ ಪ್ರತ್ಯೇಕ ಆದೇಶ ಬರೆದಿದ್ದಾರೆ. ನ್ಯಾ.ಸೂರ್ಯಕಾಂತ್ ಯಾವುದೇ ಟೀಕೆ ಮಾಡಿಲ್ಲ. ಆದರೆ, ನ್ಯಾ.ಭೂಯಾನ್, ‘ಪ್ರಜಾಪ್ರಭುತ್ವದಲ್ಲಿ ಗ್ರಹಿಕೆಗೆ ಮಹತ್ವವಿದೆ. ಸೀಸರ್‌ನ ಪತ್ನಿಯಂತೆ ತನಿಖಾ ಸಂಸ್ಥೆಗಳು ಅನುಮಾನವನ್ನು ಮೀರಿ ನಿಲ್ಲಬೇಕು. ಈ ಹಿಂದೆ ಒಮ್ಮೆ ಇದೇ ಕೋರ್ಟ್ ಸಿಬಿಐಯನ್ನು ಪಂಜರದ ಗಿಳಿಗೆ ಹೋಲಿಸಿತ್ತು. ಆ ಹಣೆಪಟ್ಟಿಯಿಂದ ಸಿಬಿಐ ಹೊರಗೆ ಬರಬೇಕು. ಸಿಬಿಐ ಪಂಜರದ ಗಿಳಿಯಾಗುವ ಬಂದಲು ಪಂಜರದ ಹೊರಗಿರುವ ಗಿಳಿಯಾಗಬೇಕು’ ಎಂದು ಚಾಟಿ ಬೀಸಿದ್ದಾರೆ.