ಲಸಿಕೆ ಬೆಲೆ ಬಗ್ಗೆ ಮರುಪರಿಶೀಲನೆ ನಡೆಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್!
ಲಸಿಕೆ ಬೆಲೆ ಬಗ್ಗೆ ಮರುಪರಿಶೀಲನೆ ನಡೆಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್| ಸರ್ಕಾರದ ಲಸಿಕೆ ನೀತಿಯಿಂದ ತಾರತಮ್ಯ ಸೃಷ್ಟಿ| ಸಾರ್ವಜನಿಕ ಆರೋಗ್ಯ ಹಕ್ಕಿಗೆ ತೀವ್ರ ಹೊಡೆತ
ನವದೆಹಲಿ(ಮೇ.04): ಕೋವಿಡ್ ಲಸಿಕಾ ಬೆಲೆ ನೀತಿಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು. ಏಕೆಂದರೆ, ಈ ನೀತಿಯು ಸಾರ್ವಜನಿಕ ಆರೋಗ್ಯ ಹಕ್ಕಿಗೆ ಹಾನಿಯುಂಟು ಮಾಡಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.
ಲಸಿಕೆ ಉತ್ಪಾದಕ ಕಂಪನಿಗಳು ಎರಡು ಬೆಲೆಗಳನ್ನು ಪ್ರಕಟಿಸಿವೆ. ಕೇಂದ್ರ ಸರ್ಕಾರಕ್ಕೆ ಕಡಿಮೆ ಬೆಲೆ ಹಾಗೂ ರಾಜ್ಯ ಸರ್ಕಾರಗಳಿಗೆ ಹೆಚ್ಚು ಬೆಲೆಯನ್ನು ನಿಗದಿ ಮಾಡಿವೆ. ಲಸಿಕಾ ಕಂಪನಿಗಳ ಜತೆ ರಾಜ್ಯ ಸರ್ಕಾರಗಳೇ ಮಾತುಕತೆ ನಡೆಸಿ, ಸ್ಪರ್ಧಾತ್ಮಕತೆ ಹೆಚ್ಚಿಸುವ ಸ್ಥಿತಿಗೆ ದೂಡಲಾಗಿದೆ. ಇದರಿಂದ ಲಸಿಕೆ ಪಡೆಯಬೇಕಾದ 18ರಿಂದ 44ರ ವಯೋಮಾನದವರಿಗೆ ಪ್ರತಿಕೂಲವಾಗಲಿದೆ ಎಂದು ತಿಳಿಸಿದೆ.
18ರಿಂದ 44ರ ಪ್ರಾಯದಲ್ಲಿ ದುರ್ಬಲ ವರ್ಗದವರು ಹಾಗೂ ತುಳಿತಕ್ಕೊಳಗಾದವರು ಕೂಡ ಬರುತ್ತಾರೆ. ಅವರು ಲಸಿಕೆಗೆ ಹಣ ಪಾವತಿಸುವ ಸ್ಥಿತಿಯಲ್ಲಿ ಇಲ್ಲದೆ ಇರಬಹುದು. ಎಲ್ಲರಿಗೂ ರಾಜ್ಯ ಸರ್ಕಾರಗಳು ಲಸಿಕೆ ನೀಡುತ್ತವೆಯೇ ಎಂಬುದು ಆಯಾ ರಾಜ್ಯದ ಹಣಕಾಸು ಸ್ಥಿತಿಯನ್ನು ಅವಲಂಬಿಸಿರುತ್ತದೆ. ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆಯೇ? ಸಬ್ಸಿಡಿ ನೀಡಿದರೆ ಎಷ್ಟು ನೀಡಲಾಗುತ್ತದೆ ಎಂಬುದು ಕೂಡ ರಾಜ್ಯಗಳ ಮೇಲೆ ಅವಲಂಬನೆಯಾಗಿದೆ. ಹೀಗಾಗಿ ಇದು ದೇಶಾದ್ಯಂತ ಸಮಾನತೆ ಸೃಷ್ಟಿಸಲಿದೆ ಎಂದು ನ್ಯಾ| ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona