* ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಮಧ್ಯಂತರ ತೀರ್ಪು* ಸ್ತ್ರೀಯರಿಗೂ ಎನ್‌ಡಿಎಗೆ ಪ್ರವೇಶ ಕಲ್ಪಿಸಿದ ಸುಪ್ರೀಂ

ನವದೆಹಲಿ(ಆ.19): ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯಲ್ಲಿ ಮಹಿಳೆಯರು ಕೂಡ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಿ ಸುಪ್ರಿಂಕೋರ್ಟ್‌ ಬುಧವಾರ ಮಧ್ಯಂತರ ಆದೇಶವೊಂದನ್ನು ಹೊರಡಿಸಿದೆ. ಆದರೆ ಪರೀಕ್ಷೆಯ ಫಲಿತಾಂಶವು ತನ್ನ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿದೆ

ಅರ್ಹ ಮಹಿಳಾ ಅಭ್ಯರ್ಥಿಗಳು ಎನ್‌ಐಎ ಪರೀಕ್ಷೆಗೆ ಹಾಜರಾಗುವುದಕ್ಕೆ ಮತ್ತು ಅವರಿಗೆ ಎನ್‌ಡಿಎನಲ್ಲಿ ತರಬೇತಿ ನೀಡುವುದಕ್ಕೆ ಅವಕಾಶ ಕೋರಿ, ಕುಶ್‌ ಕಲ್ರಾ ಎನ್ನುವವರು ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು. ಆದರೆ ರಾಷ್ಟೀಯ ರಕ್ಷಣಾ ಅಕಾಡೆಮಿಯಲ್ಲಿ ಪುರುಷ ಕೆಡೆಟ್‌ (ಸೈನಿಕ ವಿದ್ಯಾರ್ಥಿ)ಗಳಿಗೆ ಮಾತ್ರ ತರಬೇತಿ ನೀಡುವ ಕಾರಣ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಇದನ್ನು ಮೂಲಭೂತ ಹಕ್ಕಿನ ಉಲ್ಲಂಘನೆ ಎಂಬುದಾಗಿ ಮಹಿಳೆಯರು ಭಾವಿಸಬಾರದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಆದರೆ, ಈ ನೀತಿ ಲಿಂಗ ತಾರತಮ್ಯದಿಂದ ಕೂಡಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್‌ ಸೆ.5ರಂದು ನಡೆಯಲಿರುವ ಪರೀಕ್ಷೆಗೆ ಮಹಿಳೆಯರು ಕೂಡ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಮಧ್ಯಂತರ ಆದೇಶ ಹೊರಡಿಸಿದೆ.

ಎನ್‌ಡಿಎ ಪರೀಕ್ಷೆಯು, ಸೇನೆಯ ಮೂರು ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ನಡೆಸುವ ಅತ್ಯುನ್ನತ ಪರೀಕ್ಷೆ. ಮೂರೂ ಸೇನೆಗೆ ಒಂದೇ ಕಡೆ ತರಬೇತಿ ನೀಡುವ ವಿಶ್ವದ ಏಕೈಕ ಸಂಸ್ಥೆ ಇದು. ಯುಪಿಎಸ್‌ಸಿ ಈ ಪರೀಕ್ಷೆ ನಡೆಸುತ್ತದೆ.