ಜೂ.15 ರಂದು ನಿಗದಿಯಾಗಿರುವ NEET-PG 2025 ಪರೀಕ್ಷೆಯನ್ನು ಎರಡು ಪಾಳಿಗಳ ಬದಲಿಗೆ ಒಂದೇ ಪಾಳಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸೂಚಿಸಿದೆ.

ನವದೆಹಲಿ (ಮೇ.31): ಜೂ.15 ರಂದು ನಿಗದಿಯಾಗಿರುವ ‘ನೀಟ್‌-ಪಿಜಿ 2025’ಅನ್ನು 2 ಪಾಳಿಗಳ ಬದಲಿಗೆ ಒಂದೇ ಪಾಳಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ (ಎನ್‌ಬಿಇ) ಸೂಚಿಸಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾದ ನೀಟ್‌-ಪಿಜಿ ಅನ್ನು 2 ಶಿಫ್ಟ್‌ಗಳಲ್ಲಿ ನಡೆಸುವ ನಿರ್ಧಾರವನ್ನು ಪರೀಕ್ಷಾ ಮಂಡಳಿ ಕೈಗೊಂಡಿತ್ತು. ‘ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ಕೊರತೆ ಆಗಬಹುದು. ಹೆಚ್ಚುವರಿ ವೀಕ್ಷಕರ ನಿಯೋಜನೆ ಹಾಗೂ ಸುಗಮ ಪರೀಕ್ಷೆ ಕಷ್ಟವಾಗಬಹುದು’ ಎಂದು ಅದು ತನ್ನ 2 ಶಿಫ್ಟ್‌ ನಿರ್ಧಾರಕ್ಕೆ ಕಾರಣ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿಯೊಂದು ಕೋರ್ಟಿಗೆ ಸಲ್ಲಿಕೆ ಆಗಿತ್ತು.

ಇದರ ವಿಚಾರಣೆ ನಡೆಸಿದ ನ್ಯಾ। ವಿಕ್ರಮ್ ನಾಥ್, ನ್ಯಾ। ಸಂಜಯ್ ಕುಮಾರ್ ಮತ್ತು ನ್ಯಾ। ಎನ್‌.ಕೆ. ಅಂಜಾರಿಯಾ ಅವರ ಪೀಠ, ‘ಬಹು ಶಿಫ್ಟ್‌ಗಳಲ್ಲಿ ಪರೀಕ್ಷೆ ನಡೆಸುವುದು ವ್ಯತ್ಯಾಸಗಳಿಗೆ ಕಾರಣವಾಗಬಹುದು. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಅನ್ಯಾಯ ಹಾಗೂ ತಾರತಮ್ಯದ ಭಾವನೆ ಉಂಟಾಗಬಹುದು. ದೇಶದಲ್ಲಿನ ತಾಂತ್ರಿಕ ಪ್ರಗತಿ ಗಮನಿಸಿದರೆ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾಕಷ್ಟು ಕೇಂದ್ರಗಳಿಲ್ಲ ಎಂಬುದನ್ನು ಒಪ್ಪಲಾಗದು’ ಎಂದು ಅಭಿಪ್ರಾಯಪಟ್ಟು ಒಂದೇ ಪಾಳಿಯ ಪರೀಕ್ಷೆಗೆ ಸೂಚಿಸಿತು.

2-ಶಿಫ್ಟ್ ವ್ಯವಸ್ಥೆಯ ನ್ಯಾಯಸಮ್ಮತತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ವೈದ್ಯಕೀಯ ಆಕಾಂಕ್ಷಿಗಳು ಮತ್ತು ಶಿಕ್ಷಕರು, ‘ವಿಭಿನ್ನ ಶಿಫ್ಟ್‌ಗಳಿರುವ ಕಾರಣ ಪ್ರಶ್ನೆಗಳಲ್ಲೂ ವ್ಯತ್ಯಾಸ ಇರುತ್ತದೆ. ಇದು ವಿದ್ಯಾರ್ಥಿಗಳ ಶ್ರೇಯಾಂಕಗಳು ಮತ್ತು ಭವಿಷ್ಯದ ವೃತ್ತಿಜೀವನದ ನಿರೀಕ್ಷೆಗಳ ಮೇಲೆ ಪರಿಣಾಮ ಬೀರಬಹುದು’ ಎಂದು ವಾದಿಸಿದ್ದರು.