ಸರ್ಕಾರದ ನೀತಿಗಳ ಟೀಕೆ ದೇಶ ವಿರೋಧಿಯಲ್ಲ, ಪತ್ರಿಕಾ ಸ್ವಾತಂತ್ರ ಕಡಿತಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸುಪ್ರೀಂಕೋರ್ಟ್‌ ಹೇಳಿಕೆ ನೀಡಿದೆ. ಮೀಡಿಯಾ ಒನ್‌ ಟಿವಿ ಮೇಲಿನ ನಿಷೇಧವನ್ನು ಸುಪ್ರೀಂಕೋರ್ಟ್‌ ತೆರವುಗೊಳಿಸಿದ್ದು, ಈ ವೇಳೆ ಈ ಹೇಳಿಕೆ ನೀಡಿದೆ. 

ನವದೆಹಲಿ (ಏಪ್ರಿಲ್ 6, 2023): ಸರ್ಕಾರದ ನೀತಿಗಳನ್ನು ಟೀಕಿಸುವುದನ್ನು ದೇಶ ವಿರೋಧಿ ಕೃತ್ಯ ಎಂದು ಬಣ್ಣಿಸಲಾಗದು ಎಂದಿರುವ ಸುಪ್ರೀಂಕೋರ್ಟ್‌, ಕೇರಳದ ಮೀಡಿಯಾ ಒನ್‌ ಟಿವಿ ಚಾನೆಲ್‌ ವಿರುದ್ಧ ಕೇಂದ್ರ ಸರ್ಕಾರ ಹೇರಿದ್ದ ಪ್ರಸಾರ ನಿಷೇಧ ತೆರವುಗೊಳಿಸಿದೆ. ಜೊತೆಗೆ, ಕಾರಣರಹಿತವಾಗಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಜೊತೆಗೆ ಮಾದ್ಯಮ ಸಂಸ್ಥೆ ಮೇಲಿನ ನಿಷೇಧ ಎತ್ತಿಹಿಡಿದ ಕೇರಳ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಿದೆ.

ಪ್ರಕರಣ ಹಿನ್ನೆಲೆ: ಕಳೆದ ವರ್ಷ ಮೀಡಿಯಾ ಒನ್‌ (MediaOne) ಸಂಘಟನೆಯ ಲೈಸೆನ್ಸ್‌ ನವೀಕರಣಕ್ಕೆ ಕೇಂದ್ರ ಸರ್ಕಾರ (Central Gvernment) ನಿರಾಕರಿಸಿತ್ತು. ಚಾನೆಲ್‌ನಲ್ಲಿ (Channel) ಜಮಾತ್‌-ಇ-ಇಸ್ಲಾಂ ಹಿಂದ್‌ (Jamaat - e - Islami Hind) ಸಂಘಟನೆ ಪಾಲುದಾರಿಕೆ ಹೊಂದಿದೆ. ಇದು ದೇಶದ ಭದ್ರತೆಗೆ (National Security) ಧಕ್ಕೆ ತರಬಹುದಾದ ಸಂಗತಿ ಎಂದು ಸರ್ಕಾರ ನಿಷೇಧಕ್ಕೆ ಕಾರಣ ನೀಡಿತ್ತು. ಇದನ್ನು ಮಾಧ್ಯಮ ಸಂಘಟನೆ ಕೇರಳ ಹೈಕೋರ್ಟ್‌ನಲ್ಲಿ (Kerala High Court) ಪ್ರಶ್ನಿಸಿತ್ತು. ಹೈಕೋರ್ಟ್‌ ಕೂಡಾ ಸರ್ಕಾರದ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಸ್ಥೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಇದನ್ನು ಓದಿ: ರಾಹುಲ್‌ ಗಾಂಧಿ ರೀತಿ ತತ್‌ಕ್ಷಣದ ಅರ್ನಹತೆ ಚುನಾಯಿತ ಪ್ರತಿನಿಧಿಯ ವಾಕ್‌ ಸ್ವಾತಂತ್ರ್ಯ ಕಸಿಯುತ್ತದೆ: ಸುಪ್ರೀಂಗೆ ಮೊರೆ

ಈ ಕುರಿತು ಬುಧವಾರ ತೀರ್ಪು ನೀಡಿದ ನ್ಯಾಯಾಲಯ ‘ಕೇವಲ ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳು ನೀಡಿದ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯ ಮಾಧ್ಯಮ ಸಂಸ್ಥೆಯ ಪ್ರಸಾರಕ್ಕೆ ನಿಷೇಧ ಹೇರಿದೆ. ಹೈಕೋರ್ಟ್‌ ಕೂಡಾ ಪೂರ್ಣವಾಗಿ ಇದೇ ಅಂಶಗಳನ್ನು ಅವಲಂಬಿಸಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ಇದೆ ಎಂದಾದಲ್ಲಿ ಅದಕ್ಕೆ ಸೂಕ್ತ ಸಾಕ್ಷ್ಯಗಳು ಬೇಕು. ಸಂಸ್ಥೆಯೊಂದು ಸರ್ಕಾರದ ನೀತಿ ಟೀಕಿಸಿದೆ ಎಂದ ಮಾತ್ರಕ್ಕೆ ಅದನ್ನು ದೇಶ ವಿರೋಧಿ ಎನ್ನಲಾಗದು. 

ಮಾಧ್ಯಮಗಳು ಜನರಿಗೆ ಕಟು ಸತ್ಯಗಳನ್ನು ತೋರಿಸಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ಉತ್ತಮರನ್ನು ಆಯ್ಕೆ ಮಾಡುವ ಹಾಗೆ ಮಾಡುತ್ತದೆ. ಒಂದು ವೇಳೆ ಮಾಧ್ಯಮದ ಹಕ್ಕು ಕಸಿದುಕೊಂಡರೆ ಜನರು ಏಕಪಕ್ಷೀಯವಾಗಿ ಯೋಚಿಸಬೇಕಾಗುತ್ತದೆ. ದೇಶದಲ್ಲಿ ಸಾಮಾಜಿಕ,ಆರ್ಥಿಕ, ಆಡಳಿತ ಹಾಗೂ ರಾಜಕೀಯ ಸಿದ್ಧಾಂತಗಳ ಮೇಲಿನ ಏಕಪಕ್ಷೀಯ ನಿಲುವು ಸಂವಿಧಾನಕ್ಕೆ ತೊಂದರೆಯಾಗುತ್ತದೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿತು.

ಇದನ್ನೂ ಓದಿ: ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ: ಮಾಜಿ ಡಿಜಿಪಿ, ಇಬ್ಬರು ಪೊಲೀಸರ ವಿರುದ್ಧ ಶಿಸ್ತು ಕ್ರಮ..!