ಮಹಾರಾಷ್ಟ್ರ ಮಾಜಿ ಮಂತ್ರಿ ಅನಿಲ್ ದೇಶ್‌ಮುಖ್ ಗೆ ತೀವ್ರ ನಿರಾಸೆ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ನಿಂದ ಎಸ್ ಐ ಟಿಗೆ ವರ್ಗಾಯಿಸಲು ಅರ್ಜಿ ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಿರಾಕರಣೆ  

ನವದೆಹಲಿ(ಏ.01): ಮಹಾರಾಷ್ಟ್ರ ಮಾಜಿ ಸಚಿವ ಅನಿಲ್ ದೇಶ್‌ಮುಖ್ ಮೇಲಿರುವ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐನಿಂದ ಎಸ್‌ಐಟಿಗೆ ವರ್ಗಾಯಿಸಲು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಹಾ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಾಂಬೈ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಹೀಗಾಗಿ ಮನವಿಯನ್ನು ತರಿಸ್ಕರಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಜಸ್ಟೀಸ್ ಸಂಜಯ್ ಕಿಶನ್ ಕೌಲ್, ಜಸ್ಟೀಸ್ ಎಂಎಂ ಸುಂದರೇಶ್ ಅವರಿದ್ದ ವಿಭಾಗಿಯ ಪೀಠ , ಮಹರಾಷ್ಟ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಮಂತ್ರಿ ಅನಿಲ್ ದೇಶ್‌ಮುಖ್ ಭ್ರಷ್ಟಾಚಾರ ಆರೋಪದಡಿ ಸಿಲುಕಿ ಮಂತ್ರಿ ಪದವಿ ಕಳೆದುಕೊಂಡರು. ಈ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಿಯ ತನಿಖಾ ದಳ(CBI) ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಈಗಾಗಲೇ ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾರ ನಿರ್ದೇಶ ಸಂಜಯ್ ಪಾಂಡೆಗೆ ಸಮನ್ಸ್ ನೀಡಿದ್ದಾರೆ.ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿತ್ತು. ಈ ಪ್ರಕರಣವನ್ನು ಸಿಬಿಐ ಬದಲು ರಾಜ್ಯದ ಎಸ್ಐಟಿ ತನಿಖೆ ಮಾಡಬೇಕು. ಹೀಗಾಗಿ ಪ್ರಕರಣವನ್ನು ಸಿಬಿಐನಿಂದ ಎಸ್‌ಐಟಿಗೆ ವರ್ಗಾಯಿಸಬೇಕು ಎಂದು ಮಹಾ ಸರ್ಕಾರ ಅನಿಲ್ ದೇಶ್‌ಮುಖ್ ಪರವಾಗಿ ಮನವಿ ಮಾಡಿತ್ತು.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಬಂಧನ!

ಮಹಾರಾಷ್ಟ್ರ ಸರ್ಕಾರದ ಮನವಿ ಆಲಿಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಈ ಪ್ರಕರಣನ್ನು ಸಿಬಿಐ ತನಿಖೆ ನಡೆಸಲು ಅಧಿಕಾರವಿಲ್ಲ ಅನ್ನೋ ಸರ್ಕಾರದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸಿಬಿಐನಿಂದ ಪ್ರಕರಣವನ್ನು ಹಿಂಪಡೆದು ಎಸ್‌ಐಟಿಗೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಈ ಪ್ರಕರಣದ ಕುರಿತು ಈಗಾಗಲೇ ಬಾಂಬೈ ಹೈಕೋಕ್ಟ್ ಮಹತ್ವದ ಸೂಚನೆ ನೀಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಿಬಿಐ ನೀಡಿದ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸರ್ಕಾರ ವಾದ ಮಂಡಿಸಿತ್ತು. ಈ ವಾದ ಒಪ್ಪದ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಸಹಕರಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇಷ್ಟೇ ಅಲ್ಲ ಪ್ರಕರಣವನ್ನು ಸಿಬಿಐನಿಂದ ವರ್ಗಾಯಿಸಲು ಸಾಧ್ಯವಿಲ್ಲ ಎಂದಿತ್ತು.

ಬಾಂಬೆ ಹೈಕೋರ್ಟ್ ಆದೇಶದಿಂದ ನಿರಾಸೆಗೊಂಡಿದ್ದ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಮಹಾ ಸರ್ಕಾರಕ್ಕೆ ವಿರುದ್ಧವಾಗಿ ಆದೇಶ ನೀಡಿದೆ. 

ದೇಶ್‌ಮುಖ್‌ರಿಂದ 4 ಕೋಟಿ ರು. ಹಫ್ತಾ ವಸೂಲಿ: ಜಾರಿ ನಿರ್ದೇಶನಾಲಯ

ಪ್ರಕರಣ ಏನು?:

ಅನಿಲ್‌ ದೇಶಮುಖ್‌ ಗೃಹ ಸಚಿವರಾಗಿದ್ದಾಗ, ಮುಂಬೈನ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಹಣ ಸುಲಿಗೆ ಮಾಡಿ ಪ್ರತಿ ತಿಂಗಳು ತನಗೆ ಕೊಡುವಂತೆ ಹೇಳಿದ್ದರು ಎಂದು ಮುಂಬೈ ಮಾಜಿ ಪೊಲೀಸ್‌ ಕಮೀಷನರ್‌ ಪರಂಬೀರ್‌ ಸಿಂಗ್‌ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ 100 ಕೋಟಿ ‘ಹಫ್ತಾ’ ಆರೋಪದಡಿ ಅನಿಲ್‌ ದೇಶಮುಖ್‌ ವಿರುದ್ಧ ಸಿಬಿಐ ಕೇಸು ದಾಖಲಿಸಿತ್ತು. ಇದನ್ನು ಆಧರಿಸಿ ಇ.ಡಿ. ಕೂಡ ಕೇಸು ದಾಖಲಿಸಿಕೊಂಡಿತ್ತು.

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ 5 ಬಾರಿ ಸಮನ್ಸ್‌ ನೀಡಿದ್ದರೂ ಅನಿಲ್‌ ದೇಶಮುಖ್‌ ಗೈರಾಗಿದ್ದರು. ಅಲ್ಲದೇ ತನ್ನ ವಿರುದ್ಧ ಜಾರಿ ಮಾಡಲಾದ ಸಮನ್ಸ್‌ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್‌ ಅನಿಲ್‌ ದೇಶಮುಖ್‌ ಅರ್ಜಿಯನ್ನು ವಜಾಗೊಳಿಸಿತ್ತು. ಅಂತಿಮವಾಗಿ ಸೋಮವಾರ ವಿಚಾರಣೆಗೆ ಹಾಜರಾದ ಮಾಜಿ ಗೃಹ ಸಚಿವರನ್ನು ಬಂಧಿಸಿತ್ತು.