ಸುಪ್ರೀಂ ಕೋರ್ಟ್‌ನ ಟೀಕೆಗಳ ನಡುವೆಯೂ ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನೈಜ ಭಾರತೀಯತೆಯನ್ನು ನ್ಯಾಯಾಧೀಶರು ನಿರ್ಧರಿಸಬಾರದು ಎಂದು ಪ್ರಿಯಾಂಕಾ ಹೇಳಿದ್ದಾರೆ. ಇಂಡಿಯಾ ಕೂಟ ಕೂಡ ರಾಹುಲ್‌ಗೆ ಬೆಂಬಲ ನೀಡಿದೆ.

ನವದೆಹಲಿ: ನೈಜ ಭಾರತೀಯರು ಎಂಬುದನ್ನು ನಿರ್ಧರಿಸುವವರು ನ್ಯಾಯಾಧೀಶರಲ್ಲ ಎಂದು ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ಸುಪ್ರೀಂಕೋರ್ಟ್‌ ನ್ಯಾಯಾಧೀಶರ (Supreme Court Judge) ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇನೆಯ ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (LoP Rahul Gandhi) ಆಡಿದ್ದ ಮಾತಿನ ವಿರುದ್ಧ ಸೋಮವಾರವಷ್ಟೇ ಸುಪ್ರೀಂಕೋರ್ಟ್‌ ಕಿಡಿಕಾರಿತ್ತು. ಅದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗಳವಾರ ಇಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ‘ರಾಹುಲ್‌ ಗಾಂಧಿಗೆ ನಮ್ಮ ಸೇನಾಪಡೆಯ ಮೇಲೆ ಅಪಾರ ಗೌರವವಿದೆ. ಅವರು ಯಾವತ್ತೂ ಸೇನೆ ವಿರುದ್ಧ ಹೇಳಿಕೆ ನೀಡುವುದಿಲ್ಲ. ಸುಪ್ರೀಂ ಕೋರ್ಟ್‌ನ ಜಡ್ಜ್‌ಗಳ ಮೇಲೆ ಗೌರವವಿದೆ. ಆದರೆ, ಯಾರು ನೈಜ ಭಾರತೀಯ ಎಂಬುದನ್ನು ನಿರ್ಧರಿಸುವುದು ನ್ಯಾಯಾಧೀಶರಲ್ಲ. ಲೋಕಸಭೆ ಪ್ರತಿಪಕ್ಷ ನಾಯಕನಾಗಿ ಸರ್ಕಾರವನ್ನು (Government) ಪ್ರಶ್ನಿಸುವುದು ರಾಹುಲ್‌ ಗಾಂಧಿ ಹಕ್ಕು’ ಎಂದು ಪ್ರಿಯಾಂಕಾ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿಗೆ ಇಂಡಿ ಕೂಟ ಬೆಂಬಲ

ಇದೇ ವೇಳೆ ವಿಪಕ್ಷ ಇಂಡಿಯಾ ಕೂಟ ಕೂಡಾ ರಾಹುಲ್‌ ಗಾಂಧಿ ಹೇಳಿಕೆ ಬೆಂಬಲಿಸಿದ್ದು, ‘ರಾಷ್ಟ್ರೀಯ ಹಿತಾಸಕ್ತಿಯ ವಿಚಾರವಾಗಿ ಸರ್ಕಾರವನ್ನು ಪ್ರಶ್ನಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿ’ ಎಂದು ಹೇಳಿದೆ. ಈ ಕುರಿತು ಮಂಗಳವಾರ ಇಲ್ಲಿ ಸಭೆ ನಡೆಸಿದ ಕೂಟದ ನಾಯಕರು, ‘ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಅನಗತ್ಯವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂಬ ನಿಲುವಿಗೆ ನಾವು ಬಂದಿದ್ದೇವೆ ಎಂದು ತಿಳಿಸಿದೆ.

Scroll to load tweet…

ಭಾರತ-ಚೀನಾ ಸಂಘರ್ಷದ ಕುರಿತು ವಿವಾದಾತ್ಮಕ ಹೇಳಿಕೆ

2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅ‍ವರು ಭಾರತ-ಚೀನಾ ಸಂಘರ್ಷದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಲಡಾಕ್‌ನಲ್ಲಿ ಚೀನಾ ಸೇನೆ ಭಾರತದ 2 ಸಾವಿರ ಚದರಡಿ ಭೂಮಿ ಆಕ್ರಮಿಸಿಕೊಂಡಿದೆ, ನಮ್ಮ ಯೋಧರ ಮೇಲೆ ಚೀನಾ ಸೇನೆ ಹಲ್ಲೆ ಮಾಡಿದೆ ಎಂದು ರಾಹುಲ್‌ ಹೇಳಿದ್ದರು. ಈ ರೀತಿಯ ಹೇಳಿಕೆ ನೀಡಲು ನಿಮ್ಮ ಬಳಿ ಏನು ಸಾಕ್ಷ್ಯ ಇದೆ? ನೀವು ನಿಜವಾದ ಭಾರತೀಯನಾಗಿದ್ದರೆ ಇಂಥ ಹೇಳಿಕೆ ನೀಡುತ್ತಿರಲಿಲ್ಲ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

Scroll to load tweet…