ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಆಯೋಜಿಸಿರುವ ಬೃಹತ್ ಪ್ರತಿಭಟನೆ ಮುಂದೂಡಿಕೆಯಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದೀಗ ಈ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆಯಾಗಿದೆ.

ಬೆಂಗಳೂರು (ಆ.04) ಕರ್ನಾಟಕದಲ್ಲಿ ಇದೀಗ ಪ್ರತಿಭಟನೆ ಬಿಸಿ. ಒಂದೆಡೆ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸರ್ಕಾರ ಹಾಗೂ ಸಾರಿಗೆ ನೌಕರರ ಜಟಾಪಟಿ ಒಂದಡೆಯಾದರೆ, ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಂಗಳೂರಲ್ಲಿ ಆಯೋಜಿಸಿದೆ. ಮತದಾರ ಚೀಟಿ ಅಕ್ರಮ, ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಎಂದು ಕಾಂಗ್ರೆಸ್ ಆಗಸ್ಟ್ 5ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಇದೀಗ ಈ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದೆ. ರಾಹುಲ್ ಗಾಂಧಿ,ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಆಗಸ್ಟ್ 8ಕ್ಕೆ ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆಗೆ ಕಾರಣವೇನು?

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ಆಗಸ್ಟ್ 5 ರಿಂದ ಇದೀಗ ಆಗಸ್ಟ್ 8ಕ್ಕೆ ಮುಂದೂಡಲಾಗಿದೆ. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಶಿಬು ಸೊರೆನ್ ನಿಧನದಿಂದ ಕಾಂಗ್ರೆಸ್ ಪ್ರತಿಭಟನಾ ಸಭೆಯನ್ನು ಮುಂದೂಡಿದೆ. ಶಿಬು ಸೊರೆನ್ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಬೆಂಗಳೂರು ಪ್ರತಿಭಟನೆಯನ್ನು ಮುಂದೂಡಲಾಗಿದೆ.

ರಾಹುಲ್ ಗಾಂಧಿ ಪ್ರತಿಭಟನೆಗೂ ರಾಜ್ಯ ಸಾರಿಗೆ ಮುಷ್ಕರಕ್ಕೂ ಸಂಬಂಧವಿಲ್ಲ

ಆಗಸ್ಟ್ 5 ರಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೂ, ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೂ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ನೌಕರರ ಜೊತೆ ಸಂಧಾನ ಸಭೆ ನಡೆಸಿದ್ದಾರೆ. ಇದು ಪರಿಪೂರ್ಣಗೊಂಡಿಲ್ಲ. ಕೋವಿಡ್ ಅವಧಿಯ ಅರಿಯರ್ಸ್ ಹೊರತುಪಡಿಸಿ ಇತರ 14 ತಿಂಗಳ ಅರಿಯರ್ಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಆದರೆ ಸಾರಿಗೆ ನೌಕರರು ಒಪ್ಪಿಕೊಂಡಿಲ್ಲ. ಸಂಧಾನ ಸಭೆ ನಡೆಯಲಿದೆ. ಈ ಸಾರಿಗೆ ನೌಕರರ ಮುಷ್ಕರಕ್ಕೂ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಕಾಂಗ್ರೆಸ್ ಕಳೆದ ಹಲವು ವರ್ಷಗಳಿಂದ ಚುನಾವಣೆಯಲ್ಲಿ ಅಕ್ರಮವಾಗುತ್ತಿದೆ. ನಕಲಿ ಮತದಾರರ ಸೃಷ್ಟಿಸಿ ಮತ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡುತ್ತಾ ಬರುತ್ತಿದೆ. ಇದೀಗ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನಕಲಿ ಮತದಾರರ ಚೀಟಿಗಳಿಂದ ಬಿಜೆಪಿ ಚುನಾವಣೆ ಗೆದ್ದಿದೆ. ಲಕ್ಷ ಲಕ್ಷ ಮತಗಳನ್ನು ನಕಲಿಯಾಗಿ ಪಡೆದು ಚುನಾವಣೆಯಲ್ಲಿ ಅಕ್ರಮ ಮಾಡಿದೆ ಎಂದು ಆರೋಪಿಸಿದ್ದಾರೆ. ಇದರ ವಿರುದ್ಧ ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಪ್ರಮುಖ ನಗರ ಸೇರಿದಂತೆ ಹಲವೆಡೆ ಈ ಪ್ರತಿಭಟನೆ ನಡೆಯಲಿದೆ. ಈ ಮೂಲಕ ಈ ಪ್ರತಿಭಟನೆಯನ್ನು ಜನಾಂದೋಲನವನ್ನಾಗಿ ಮಾಡಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಫ್ರೀಂಡ ಪಾರ್ಕ್ ಪ್ರತಿಭಟನೆಗೆ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡಿದ್ದಾರೆ