Asianet Suvarna News Asianet Suvarna News

ನೋಟಿಸ್ ನೀಡದೇ ಯಾವುದೇ ಧ್ವಂಸ ಕಾರ್ಯ ಮಾಡಬೇಡಿ, ಯೋಗಿ ಸರ್ಕಾರಕ್ಕೆ ಸುಪ್ರೀಂ ಸೂಚನೆ!

ಈಗಾಗಲೇ ಇರುವ ಕಾರ್ಯವಿಧಾನದ ಅನುಸಾರ ಹೊರತುಪಡಿಸಿ ಬುಲ್ಡೋಜ್ ಬಳಸಿ ಅಕ್ರಮ ಕಟ್ಟಡಗಳ ಧ್ವಂಸ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
 

Supreme Court Asks State To Comply With Procedure Laws Demolitions Cant Take Place Without Notices san
Author
Bengaluru, First Published Jun 16, 2022, 6:26 PM IST | Last Updated Jun 16, 2022, 6:26 PM IST

ನವದೆಹಲಿ (ಜೂನ್ 16): ಪ್ರವಾದಿ ಮೊಹಮದ್ ( Prophet Muhammad) ಅವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮ ವಿರುದ್ಧ ಪ್ರತಿಭಟಿಸಿದವರನ್ನು ಗುರಿಯಾಗಿಸಲು ಉತ್ತರಪ್ರದೇಶ ಸರ್ಕಾರ (Uttar Pradesh government) ಬುಲ್ಡೋಜರ್‌ಗಳನ್ನು ಬಳಸುತ್ತಿದೆ ಎಂಬ ಆರೋಪದ ನಡುವೆಯೇ, "ಬುಲ್ಡೋಜರ್ ಬಳಸಿ ನೆಲಸಮ ಮಾಡುವ ಪ್ರಕ್ರಿಯೆ ಕಾನೂನು ಬದ್ಧವಾಗಿಯೇ ಆಗಬೇಕು. ನೋಟಿಸ್ ನೀಡದೇ ಯಾವುದೇ ಧ್ವಂಸ ಕಾರ್ಯ' ಮಾಡಬಾರದು ಎಂದು ಸೂಚನೆ ನೀಡಿದೆ.

ಸ್ಥಾಪಿತ ಕಾರ್ಯವಿಧಾನದ ಅನುಸಾರ ಹೊರತುಪಡಿಸಿ ನೆಲಸಮ ಚಟುವಟಿಕೆಗಳನ್ನು ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಾಡಿರುವ ನೆಲಸಮ ಪ್ರಕ್ರಿಯೆಗಳಲ್ಲಿ ಕಾನೂನುಗಳನ್ನು ಯಾವ ರೀತಿ ಪಾಲನೆ ಮಾಡಲಾಗಿದೆ ಎನ್ನುವುದನ್ನು ಮೂರು ದಿನಗಳ ಒಳಗಾಗಿ ತಿಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೇಳಿದೆ.  ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರ ಪೀಠವು ಯಾವುದೇ ಮಧ್ಯಂತರ ಆದೇಶವನ್ನು ನೀಡಲಿಲ್ಲ, ಆದರೆ ಜೂನ್ 21 ರಂದು  ಈ ವಿಷಯವನ್ನು ಆಲಿಸುವವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದೆ.

"ಪ್ರತಿವಾದಿಗಳಿಗೆ ಅವರ ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಯ ಸಿಗುತ್ತದೆ. ಈ ಮಧ್ಯೆ ನಾವು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಅವರೂ ಸಹ ನಮ್ಮ ಸಮಾಜದ ಭಾಗ. ಅಂತಿಮವಾಗಿ ಯಾರಿಗಾದರೂ ಕುಂದುಕೊರತೆ ಇದ್ದಾಗ ಅದನ್ನು ಪರಿಹರಿಸಲು ಅವರಿಗೆ ಹಕ್ಕಿದೆ" ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.  

ಉತ್ತರ ಪ್ರದೇಶದಲ್ಲಿ "ಕಾನೂನುಬಾಹಿರವಾಗಿ ಅಗುತ್ತಿರುವ ನೆಲಸಮ ಪ್ರಕ್ರಿಯೆ" ನಿಲ್ಲಿಸುವಂತೆ ನ್ಯಾಯಾಲಯವನ್ನು ಕೋರಿದ ಅರ್ಜಿದಾರರಿಗೆ ಹೇಳಿದ ನ್ಯಾಯಾಧೀಶರು "ನಾವು ನೆಲಸಮವನ್ನು ತಡೆಹಿಡಿಯಲು ಸಾಧ್ಯವಿಲ್ಲ. ಕಾನೂನು ಏನು ಹೇಳುತ್ತದೆಯೋ ಅದರಂತೆಯೇ ನಾವು ಹೋಗುತ್ತೇವೆ' ಎಂದು ಹೇಳಿದರು.

ಜಮಿಯತ್ ಉಲಮಾ-ಇ-ಹಿಂದ್ ಎಂಬ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಮನೆಗಳ "ಅಕ್ರಮ" ಧ್ವಂಸಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿದೆ.  ಕಾನೂನನ್ನು ಉಲ್ಲಂಘಿಸಿ ಯಾವುದೇ ನೆಲಸಮಗಳು ನಡೆಯದಂತೆ ನೋಡಿಕೊಳ್ಳಲು ನ್ಯಾಯಾಲಯವು ಯುಪಿ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಕಾನ್ಪುರ್, ಸಹರಾನ್‌ಪುರ ಮತ್ತು ಪ್ರಯಾಗ್‌ರಾಜ್‌ನಲ್ಲಿ ಪ್ರತಿಭಟನಾಕಾರರೆಂದು ಗುರುತಿಸಲಾದ ಅಥವಾ ಗುರುತಿಸಲ್ಪಟ್ಟಿರುವವರ ಮನೆಗಳನ್ನು ಬುಲ್ಡೋಜರ್‌ಗಳು ನೆಲಸಮಗೊಳಿಸುವ ದೃಶ್ಯಗಳು ಪ್ರವಾದಿಯ ಹೇಳಿಕೆಗಳ ವಿರುದ್ಧದ ಪ್ರತಿಭಟನೆಗಳ ಮೇಲೆ ಯುಪಿ ಆಡಳಿತವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂಬ ಆರೋಪವನ್ನು ಹುಟ್ಟುಹಾಕಿದೆ. ನೆಲಸಮಗಳು "ಆಘಾತಕಾರಿ ಮತ್ತು ಭಯಾನಕ" ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು, ಮನೆಗಳನ್ನು ನೆಲಸಮಗೊಳಿಸಿದ ನಂತರ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಆರೋಪಿಸಿದರು.

ಉತ್ತರಪ್ರದೇಶದಲ್ಲಿ ಬ್ಯಾನ್ ಆಗುತ್ತಾ ಬುಲ್ಡೋಜರ್? ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ!

"ಸಮರ್ಪಕ ನೋಟಿಸ್‌ಗಳು ಕಡ್ಡಾಯವಾಗಿದೆ. ಮಾಡುತ್ತಿರುವುದು ಅಸಾಂವಿಧಾನಿಕ ಮತ್ತು ಆಘಾತಕಾರಿಯಾಗಿದೆ. ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿದೆ" ಎಂದು ಅರ್ಜಿದಾರರ ಪರ ವಕೀಲ ಸಿಯು ಸಿಂಗ್ ಹೇಳಿದರು. ಯಾವುದೇ ಧ್ವಂಸ ಮಾಡುವ ಮೊದಲು ಕನಿಷ್ಠ 15 ರಿಂದ 40 ದಿನಗಳ ಸೂಚನೆ ನೀಡಬೇಕು ಎಂದು ಅವರು ಹೇಳಿದರು.
ಇನ್ನೊಂದೆಡೆ ಉತ್ತರ ಪ್ರದೇಶದ ಸರ್ಕಾರವು, ಸರಿಯಾದ ಕಾನೂನು ಪಾಲನೆ ಮಾಡಿಯೇ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ನೆಲಸಮ ಮಾಡಿದ್ದೇವೆ ಎಂದು ಹೇಳಿದೆ. ಇದರಲ್ಲಿ ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.

Prophet Comments Row : ಕಲ್ಲು ತೂರಿದವರ ಮೇಲೆ ಮುಗಿಬಿದ್ದ ಬುಲ್ಡೋಜರ್, ರಾಂಚಿಯಲ್ಲಿ ಇಬ್ಬರ ಸಾವು!

ಜಹಾಂಗೀರ್ ಪುರಿಯಲ್ಲಿ ನಡೆದ ಪ್ರಕರಣದ ಸಂದರ್ಭದಲ್ಲೂ ನಾವು ಅಫಿಡವಿಟ್ ಸಲ್ಲಿಸಿದ್ದೆವು. ಇಡೀ ಪ್ರಕರಣದಲ್ಲಿ ಎಲ್ಲೂ ನೆಲಸಮಗೊಂಡ ಮನೆಯವರು ಅರ್ಜಿ ದಾಖಲು ಮಾಡಿಲ್ಲ. ಈಗಿನ ಪ್ರಕರಣದಲ್ಲೂ ಅರ್ಜಿ ದಾಖಲಿಸಿದ್ದು ಜಮೀಯತ್ ಎನ್ನುವ ಸಂಘಟನೆ. ಈಗಾಗಲೇ ಹಲವು ಸಂದರ್ಭದಲ್ಲಿ ಹೇಳಿದ್ದೇವೆ. ಕಾನೂನಿನ ಪ್ರಕಾರ ಕಟ್ಟಿದ ಯಾವುದೇ ಕಟ್ಟಡವನ್ನು ನಾವು ನೆಲಸಮ ಮಾಡಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios