ಜಾಹೀರಾತಿಗೆ ಖರ್ಚು ಮಾಡಲು ದುಡ್ಡಿದೆ, ರೈಲು ಯೋಜನೆಗಿಲ್ಲವೇ? ದೆಹಲಿ ಸರ್ಕಾರಕ್ಕೆ ಸುಪ್ರೀಂ ಚಾಟಿ!
NCR ರಾಪಿಡ್ ರೈಲು ಯೋಜನಗೆ ತಮ್ಮ ಬಳಿ ಹಣವಿಲ್ಲ ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹೇಳಿ ಇದೀಗ ಪೇಚಿಗೆ ಸಿಲುಕಿದೆ. ಹಾಗಾದರೆ ಕಳೆದ 3 ವರ್ಷದಲ್ಲಿ ಜಾಹೀರಾತಿಗೆ ಖರ್ಚು ಮಾಡಿದ ಲೆಕ್ಕ ನೀಡಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಲೆಕ್ಕ ನೋಡಿದರೆ ದಂಗಾವುದು ಖಚಿತ.
ದೆಹಲಿ(ಜು.03) ದೆಹಲಿಯಲ್ಲಿ ಅಭಿವೃದ್ಧಿ ಕೆಲಸಗಳು ಆಪ್ ಸರ್ಕಾರದಿಂದಲೇ ಆಗಿದೆ. ಸರ್ಕಾರದ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಮಾಡುವುದಿಲ್ಲ ಎಂದು ಭಾಷಣ ಮಾಡುವ ದೆಹಲಿಯ ಆಪ್ ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ಮುಂದೆ ಬೆತ್ತಲಾಗಿದೆ. ಎನ್‌ಸಿಆರ್ ವಲಯದ ರ‍್ಯಾಪಿಡ್ ರೈಲು ಯೋಜನೆಗೆ ಹಣ ನೀಡದೆ ಯೋಜನೆ ಮುಂದೆ ಸಾಗಿಲ್ಲ. ಎಪ್ರಿಲ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಯೋಜನೆಗೆ 500 ಕೋಟಿ ರೂಪಾಯಿ ಅನುದಾನ ನೀಡುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿತ್ತು. ಇದೀಗ ಆಪ್ ಸರ್ಕಾರ ತಮ್ಮ ಬಳಿ ಹಣವಿಲ್ಲ ಎಂದು ಕೋರ್ಟ್ ಮುಂದೆ ಹೇಳಿದೆ. ಇದರಿಂದ ಕೆರಳಿದ ಸುಪ್ರೀಂ ಕೋರ್ಟ್ ಪೀಠ, ಕಳೆದ 3 ವರ್ಷದಲ್ಲಿ ನೀವು ಜಾಹೀರಾತಿಗಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದು ಆಪ್ ಸರ್ಕಾರಕ್ಕೆ ಸೂಚಿಸಿದೆ.
ರೀಜಲ್ ರ‍್ಯಾಪಿಡ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಯೋಜನೆ ಅಡಿಯಲ್ಲಿ ದೆಹಲಿಯಲ್ಲಿ ರ‍್ಯಾಪಿಡ್ ರೈಲು ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಈ ಯೋಜನೆಯ ಬಹುಪಾಲು ಕೇಂದ್ರ ಸರ್ಕಾರ ನೀಡಿದರೆ, ನಿರ್ವಹಣೆ ಸೇರಿದಂತೆ ಇತರ ವೆಚ್ಚಗಳಿಗೆ 500 ಕೋಟಿ ರೂಪಾಯಿ ದೆಹಲಿ ಸರ್ಕಾರ ನೀಡಬೇಕಿದೆ. ದೆಹಲಿ ಮೀರತ್ ರ‍್ಯಾಪಿಡ್ ರೈಲು ಯೋಜನೆಗೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಆದರೆ ದೆಹಲಿ ಸರ್ಕಾರ ಹಣ ನೀಡಿಲ್ಲ. ಈ ಕುರಿತು ಎಪ್ರಿಲ್ ತಿಂಗಗಳಲ್ಲಿ ಆರ್ಥಿಕ ಅನುದಾನ ನೀಡುವಂತೆ ದೆಹಲಿ ಕೋರ್ಟ್‌ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕೌಲ್ ನೇತೃತ್ವದ ಪೀಠ ಸೂಚಿಸಿತ್ತು. ಇಂದು(ಜುಲೈ 3)ರಂದು ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಆಪ್ ಸರ್ಕಾರ ತಮ್ಮ ಬಳಿ ಹಣವಿಲ್ಲ ಎಂದು ಉತ್ತರಿಸಿದೆ.
ಜೈಲುವಾಸ ತಪ್ಪಿಸಲು ಕೇಜ್ರಿವಾಲ್ ತಂತ್ರ, ಆಪ್ ಕುತಂತ್ರ ಬಯಲು ಮಾಡಿದ ಕಾಂಗ್ರೆಸ್ ನಾಯಕ!
ಸಾರ್ವಜನಿಕರ ಸುಲಭ ಸಾರಿಗೆ ವ್ಯವಸ್ಥೆ ಯೋಜನೆ ಜಾರಿಗೆ ಸರ್ಕಾರದ ಬಳಿ ಹಣ ಯಾಕಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಬಜೆಟ್‌ನಲ್ಲಿ ಈ ಯೋಜನೆಗೆ ಹಣ ಒದಗಿಸಿಲ್ಲವೇ? ಪ್ರತಿ ದಿನ ಜಾಹೀರಾತು ನೀಡಲು ಸರ್ಕಾರ ಬಳಿ ಹಣವಿದೆ. ಅಭಿವೃದ್ಧಿ ಯೋಜನೆಗೆ ಹಣವಿಲ್ಲ. ಕಳೆದ 3 ವರ್ಷದಲ್ಲಿ ಜಾಹೀರಾತಿಗೆ ಖರ್ಚು ಮಾಡಿದ ಹಣದ ಲೆಕ್ಕ ನೀಡಿ ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪೀಠ ಸೂಚಿಸಿದೆ.
ಸುಪ್ರೀಂ ಕೋರ್ಟ್ ಪೀಠ ಸೂಚನೆ ಬೆನ್ನಲ್ಲೇ ಬಿಜೆಪಿ, ಆಪ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರೈಲು ಯೋಜನೆಗೆ ಹಣ ಒದಗಿಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠದ ಮುಂದೆ ಆಪ್ ಸರ್ಕಾರ ಹೇಳಿದೆ. ಆದರೆ ಆಪ್ ಸರ್ಕಾರ ಕಳೆದ 5 ವರ್ಷದಲ್ಲಿ ಜಾಹೀರಾತು ನೀಡಲು 1,868 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅಂದರೆ ಪ್ರತಿ ತಿಂಗಳು 31 ಕೋಟಿ, ಪ್ರತಿ ದಿನ 1.2 ಕೋಟಿ ರೂಪಾಯಿ ಕೇವಲ ಜಾಹೀರಾತಿಗಾಗಿ ನೀಡಿದೆ.
ತೆರಿಗೆದಾರರ ಹಣವನ್ನು ತಮ್ಮ ವೈಯುಕ್ತಿಕ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಬಳಸಿಕೊಂಡಿದೆ. ಆದರೆ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ತಿರುಗೇಟು ನೀಡಿದ್ದಾರೆ.
ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್ ಷರತ್ತು
ದೆಹಲಿ ಮೀರತ್ ಹಾಗೂ ಘಾಜಿಯಾಬಾದ್ ಸಂಪರ್ಕಿಸುವ 81.5 ಕಿಲೋಮೀಟರ್ ರ‍್ಯಾಪಿಡ್ ರೈಲು ಯೋಜನೆಗೆ 2019ರ ದಾಖಲೆ ಪ್ರಕಾರ 31,632 ಕೋಟಿ ವೆಚ್ಚವಾಗಲಿದೆ. ನಿಯಮದ ಪ್ರಕಾರ ಶೇಕಡಾ 60 ರಷ್ಟು ಕೇಂದ್ರ ಸರ್ಕಾರ ಹಾಗೂ ಶೇಕಡಾ 40 ರಷ್ಟು ದೆಹಲಿ ಸರ್ಕಾರ ಹಣ ಒದಗಿಸಬೇಕು. ಈ ರೈಲು ದೆಹಲಿ ಹಾಗೂ ಉತ್ತರ ಪ್ರದೇಶ ಸಂಪರ್ಕಿಸುವ ಕಾರಣ ಯೋಗಿ ಸರ್ಕಾರ ಕೂಡ ಹಣ ನೀಡಿದೆ. 2019ರಲ್ಲಿ ಕೇಂದ್ರ ಸರ್ಕಾರ 5,687 ಕೋಟಿ ರೂಪಾಯಿ, ಉತ್ತರ ಪ್ರದೇಶ ಸರ್ಕಾರ 5,828 ಕೋಟಿ ರೂಪಾಯಿ ನೀಡಿದೆ. ಇನ್ನು ದೆಹಲಿ ಸರ್ಕಾರಕ್ಕೆ 1,138 ಕೋಟಿ ರೂಪಾಯಿ ನೀಡಬೇಕು. ಆದರೆ ದೆಹಲಿ ಸರ್ಕಾರ ಹಣ ನೀಡದ ಕಾರಣ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹತ್ತು ದಿನದೊಳಗೆ 265 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಸೂಚಿಸಿತ್ತು. ಆದರೆ ದೆಹಲಿ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಎಪ್ರಿಲ್ 2023ರಲ್ಲಿ ಮತ್ತೆ ವಿಚಾರಣೆ ನಡೆಸಿದ ಕೋರ್ಟ್, 500 ಕೋಟಿ ಹಣ ಒದಗಿಸುವಂತೆ ಸೂಚಿಸಿತ್ತು. ಇದೀಗ ತಮ್ಮ ಬಳಿ ಹಣವೇ ಇಲ್ಲ ಎಂದಿದೆ. ಹೀಗಾಗಿ ನೀವು ಜಾಹೀರಾತಿಗೆ ಖರ್ಚು ಮಾಡಿದ ಲೆಕ್ಕ ನೀಡಲು ಕೋರ್ಟ್ ಆದೇಶಿಸಿದೆ.