ಚೆನ್ನೈ(ನ.24): ಏಪ್ರಿಲ್‌- ಮೇ ತಿಂಗಳಿನಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರಕೂಟವನ್ನು ಬೆಂಬಲಿಸುವುದಾಗಿ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ಡಿಎಂಕೆಯ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ ಅವರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಅಳಗಿರಿ ಆಪ್ತ, ಮಾಜಿ ಸಂಸದ ರಾಮಲಿಂಗಂ ಬಿಜೆಪಿಗೆ!

ಅನಾರೋಗ್ಯದ ಹಿನ್ನೆಲೆಯಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡದಂತೆ ರಜನಿಕಾಂತ್‌ ಅವರಿಗೆ ವೈದ್ಯರು ಸೂಚನೆ ನೀಡಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ‘ತುಘಲಕ್‌’ ಪತ್ರಿಕೆ ಸಂಪಾದಕ, ಅಂಕಣಕಾರ ಎಸ್‌. ಗುರುಮೂರ್ತಿ ಅವರು ರಜನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಚೆನ್ನೈಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜತೆ ಶನಿವಾರ ರಾತ್ರಿ 2 ಗಂಟೆಗೆ ಅಧಿಕ ಕಾಲ ಮಾತುಕತೆ ನಡೆಸಿದ ಗುರುಮೂರ್ತಿ ಅವರು ರಜನಿಕಾಂತ್‌ ಸಂದೇಶವನ್ನು ಅಮಿತ್‌ ಶಾ ಅವರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಆ ಪ್ರಕಾರ, ಬಿಜೆಪಿ ಮಿತ್ರಕೂಟವನ್ನು ಬೆಂಬಲಿಸಲು ರಜನಿಕಾಂತ್‌ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊಸ ಪಕ್ಷ ಸ್ಥಾಪಿಸಿ ಅಳಗಿರಿ ಎನ್‌ಡಿಎಗೆ?

ಮತ್ತೊಂದೆಡೆ, ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ತಮ್ಮ ಆಪ್ತ ಕೆ.ಪಿ. ರಾಮಲಿಂಗಂ ಮೂಲಕ ಅಳಗಿರಿ ಕೂಡ ಬಿಜೆಪಿ ಮಿತ್ರಕೂಟ ಬೆಂಬಲಿಸುವ ಬಗ್ಗೆ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.