ಚೆನ್ನೈ(ನ.22): ಡಿಎಂಕೆಯಿಂದ ಉಚ್ಛಾಟಿತರಾಗಿರುವ ಕರುಣಾನಿಧಿ ಅವರ ಪುತ್ರ ಅಳಗಿರಿ ಅವರು ಶೀಘ್ರವೇ ಹೊಸ ಪಕ್ಷ ಸ್ಥಾಪಿಸಿ, ಎನ್‌ಡಿಎ ಜೊತೆ ಕೈಜೋಡಿಸಲಿದ್ದಾರೆ ಎಂದು ವರದಿಗಳ ಬೆನ್ನಲ್ಲೇ, ಅಳಗಿರಿ ಅವರ ಬೆಂಬಲಿಗ, ಮಾಜಿ ಸಂಸದ ಕೆ.ಪಿ.ರಾಮಲಿಂಗಂ ಶನಿವಾರ ಬಿಜೆಪಿ ಸೇರಿದ್ದಾರೆ.

ಇತ್ತೀಚೆಗಷ್ಟೇ ಡಿಎಂಕೆಯಿಂದ ಅಮಾನತುಗೊಂಡಿದ್ದ ರಾಮಲಿಂಗಂ ಅವರು ದಕ್ಷಿಣ ಭಾರತದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ರಾಮಲಿಂಗಂ, ನಾನು ಬಿಜೆಪಿ ಸೇರುವ ಕುರಿತು ಅಳಗಿರಿ ಅವರಿಗೆ ಮಾಹಿತಿ ನೀಡಿದ್ದೇನೆ. ಜೊತೆಗೆ ಅಳಗಿರಿ ಅವರನ್ನೂ ಬಿಜೆಪಿಗೆ ತರುವ ಯತ್ನ ಮಾಡುವೆ. ಆದರೆ ಅಂತಿಮ ನಿರ್ಧಾರ ಅವರಿಗೇ ಬಿಟ್ಟದ್ದು ಎಂದು ಹೇಳಿದ್ದಾರೆ.

ಇನ್ನು ಈ ಬೆಳವಣಿಗೆ ಬಗ್ಗೆ ಶನಿವಾರ ಟ್ವೀಟ್‌ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚೆನ್ನೈ ಭೇಟಿಗೆ ಬಂದಿರುವ ದಿನವೇ ಡಿಎಂಕೆ ಮಾಜಿ ಸಂಸದ ಡಾ. ಕೆ.ಪಿ ರಾಮಲಿಂಗಂ ಅವರು ಬಿಜೆಪಿಗೆ ಸೇರ್ಪಡೆಯು ಮಹತ್ವದ ಬೆಳವಣಿಗೆಯಾಗಿದೆ. ಈ ಬೆಳವಣಿಗೆಗಳು ಡಿಎಂಕೆಯನ್ನು ಅವನತಿಗೆ ತಳ್ಳುವುದಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ಕಮಲ ಅರಳಲು ಶಕ್ತಿ ಹೆಚ್ಚಿಸಲಿದೆ’ ಎಂದು ವಿಶ್ಲೇಷಿಸಿದರು.