ನವದೆಹಲಿ(ಜೂ.13): ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದ ಬೆನ್ನಲ್ಲೇ, ಅನಿರೀಕ್ಷಿತವಾಗಿ ವಾಸನೆ ಹಾಗೂ ರುಚಿ ಗ್ರಹಿಕೆ ಸಾಮರ್ಥ್ಯ ಕಳೆದುಕೊಳ್ಳುವುದನ್ನು ಸಹ ಕೋವಿಡ್‌-19 ಪರೀಕ್ಷೆಯ ಮಾನದಂಡವಾಗಿ ಪರಿಗಣಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಇತ್ತೀಚೆಗಷ್ಟೇ ಕೊರೋನಾ ಕುರಿತಾದ ರಾಷ್ಟ್ರೀಯ ಕಾರ್ಯಪಡೆಯ ಸಭೆಯಲ್ಲಿ ಕೆಲವು ಸದಸ್ಯರು ಅನಿರೀಕ್ಷಿತ ವಾಸನೆ ಮತ್ತು ರುಚಿ ಗ್ರಹಿಕೆಯ ಸಾಮರ್ಥ್ಯ ಕಳೆದುಕೊಳ್ಳುವುದನ್ನು ಕೊರೋನಾ ಪರೀಕ್ಷೆಗೆ ಮಾನದಂಡವಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು. ಆದರೆ, ಈ ಸಂಬಂಧ ಅಂತಿಮ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ದೇಶದಲ್ಲಿ ಹೆಚ್ಚುತ್ತಿದೆ ಕೊರೋನಾ ಹಾವಳಿ

 ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಕೊರೋನಾಕ್ಕೆ ಬಲಿಯಾಗುವ ಪ್ರಮಾಣ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ 258 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಇವರೆಗೆ ಬಲಿಯಾದವರ ಸಂಖ್ಯೆ 8743ಕ್ಕೆ ತಲುಪಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 127 ಜನರು ಸಾವನ್ನಪ್ಪಿದ್ದಾರೆ.