ಗಲಭೆಪೀಡಿತ ಸೂಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಶನ್ ಕಾವೇರಿ ಆರಂಭಿಸಲಾಗಿದೆ. 500 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ತಯಾರಿ ಮಾಡಲಾಗಿದ್ದು, ಶೀಘ್ರದಲ್ಲೇ ಹಕ್ಕಿ ಪಿಕ್ಕಿ ಸಮುದಾಯದ ಕನ್ನಡಿಗರು ಸೇರಿ ಭಾರತೀಯರು ಭಾರತಕ್ಕೆ ಆಗಮಿಸಲಿದ್ದಾರೆ

ನವದೆಹಲಿ(ಏ.24): ಸೂಡಾನ್‌ನಲ್ಲಿ ಅಧಿಕಾರಕ್ಕಾಗಿ ಅರೆಸೇನಾಪಡೆ ಹಾಗೂ ಸೂಡಾನ್‌ ಸಶಸ್ತ್ರಪಡೆಗಳ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಸೂಡಾನ್‌ನಲ್ಲಿ ನಾಗರೀಕರು ಅಪಾಯದಲ್ಲಿದ್ದಾರೆ. ಸೂಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಇದೀಗ ಆಪರೇಶನ್ ಕಾವೇರಿ ಕಾರ್ಯಾಚರಣೆ ಆರಂಭಿಸಲಾಗಿದೆ. ಆಪರೇಶನ್ ಕಾವೇರಿ ಮೂಲಕ ಸೂಡಾನ್‌ನಲ್ಲಿ ಅಪಾಯದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ ಮಹತ್ವದ ಘಟ್ಟದಲ್ಲಿದೆ. ಈಗಾಗಲೇ ಸೂಡಾನ್ ಬಂದರು ತಲುಪಿರುವ ಭಾರತೀಯರನ್ನು ಹಡಗು ಹಾಗೂ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.

ಆಪರೇಶನ್ ಕಾವೇರಿ ಕುರಿತು ಮಾಹಿತಿ ನೀಡಿರುವ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್, ಸೂಡಾನ್‌ನಲ್ಲಿನ ಭಾರೀಯರ ಕರೆತರಲು ಆಪರೇಶನ್ ಕಾವೇರಿ ಕಾರ್ಯಾಚರಣೆ ಆರಂಭಗೊಂಡಿದೆ. ಸೂಡಾನ್ ಬಂದರಿಗೆ ಸುಮಾರು 500 ಭಾರತೀಯರು ಆಗಮಿಸಿದ್ದಾರೆ. ಮತ್ತಷ್ಟು ಮಂದಿ ಆಗಮಿಸುತ್ತಿದ್ದಾರೆ. ಇಲ್ಲಿಂದ ಹಡುಗು ಹಾಗೂ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಸೂಡಾನ್‌ನಲ್ಲಿರುವ ನಮ್ಮ ಸಹೋದರ ಸಹೋದರಿಯರ ಸುರಕ್ಷಿತ ವಾಪಾಸಾತಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ

ರಾಜಧಾನಿ ಖಾರ್ಟೋಮ್‌ನಲ್ಲಿ ಹಿಂಸಾಚಾರ ನಡೆಯುತ್ತಿದೆ. ಸೂಡಾನ್‌ನಲ್ಲಿ ಸುಮಾರು 3000-4000 ಭಾರತೀಯರು ನೆಲೆಸಿದ್ದು, ಅವರಲ್ಲಿ ಹೆಚ್ಚಿನವರು ರಾಜಧಾನಿಯಲ್ಲೇ ನೆಲೆಸಿದ್ದಾರೆ. ಆದರೆ ಸದ್ಯಕ್ಕೆ ಗಲಭೆಪೀಡಿತ ಸ್ಥಳಗಳಿಂದ ಹೊರಗಿರುವ ಭಾರತೀಯರನ್ನು ಮೊದಲು ಸುರಕ್ಷಿತವಾಗಿ ಕರೆತಂದು, ಬಳಿಕ ಗಲಭೆಪೀಡಿತ ಪ್ರದೇಶಗಳು ಶಾಂತವಾದ ನಂತರ ಅಲ್ಲಿರುವ ಭಾರತೀಯರನ್ನು ರಕ್ಷಿಸಿ ಕರೆತರಲು ನಿರ್ಧರಿಸಲಾಗಿದೆ. ಆಪರೇಶನ್ ಕಾವೇರಿ ಮೂಲಕ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆಯುತ್ತಿದೆ. 

Scroll to load tweet…

ಗಲಭೆ ಆರಂಭವಾಗುತ್ತಿದ್ದಂತೆ ಖಾರ್ಟೋಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸುಲಭಾಗಿ ಏರ್‌ಲಿಫ್ಟ್ ಮಾಡುವ ಅವಕಾಶ ಭಾರತದ ಮುಂದಿಲ್ಲ. ಇದೇ ಕಾರಣಕ್ಕೆ ಸೂಡಾನ್ ಬಂದರಿಗೆ ಆಗಮಿಸಲು ಭಾರತೀಯರಿಗೆ ಸೂಚನೆ ನೀಡಲಾಗಿತ್ತು. ಇದರಂತೆ ಮೊದಲ ಹಂತದಲ್ಲಿ 500 ಭಾರತೀಯರು ಇದೀಗ ಭಾರತದತ್ತ ಪ್ರಯಾಣ ಬೆಳೆಸಲಿದ್ದಾರೆ.

ರಾಜಕೀಯ ಮಾಡಬೇಡಿ, ಸುಡಾನ್ ಕನ್ನಡಿಗರ ಸುರಕ್ಷತೆಗೆ ಆತಂಕ ವ್ಯಕ್ತಪಡಿಸಿದ ಸಿದ್ದುಗೆ ಜೈಶಂಕ್ ತಿರುಗೇಟು!

ಸೂಡಾನ್‌ನಲ್ಲಿ ನಡೆಯುತ್ತಿರುವ ಸೇನಾಪಡೆಗಳ ಘರ್ಷಣೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌ ಅವರನ್ನು ಭೇಟಿ ಮಾಡಿದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಕದನ ವಿರಾಮಕ್ಕೆ ಒತ್ತಾಯಿಸಿದ್ದಾರೆ. ಸೂಡಾನ್‌ ಘರ್ಷಣೆಯಲ್ಲಿ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು. ಇದು ಘರ್ಷಣೆಯನ್ನು ತಡೆಗಟ್ಟಿ, ನಾಗರಿಕರ ಶಾಂತಿ ಮತ್ತು ರಕ್ಷಣೆಯತ್ತ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು. ಗುರುವಾರ ವಿಶ್ವಸಂಸ್ಥೆಯಲ್ಲಿ ಗುಟೆರಸ್‌ ಅವರನ್ನು ಭೇಟಿ ಮಾಡಿದ ಜೈಶಂಕರ್‌, ಭಾರತದ ಜಿ20 ಅಧ್ಯಕ್ಷತೆ. ಉಕ್ರೇನ್‌-ರಷ್ಯಾ ಯುದ್ಧ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಾತುಕತೆ ನಡೆಸಿದರು.