ನವದೆಹಲಿ(ಮೇ.04): ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ತಮ್ಮದೇ ಪಕ್ಷದ ನಾಯಕ, ರಾಜ್ಯಸಭಾ ಎಂಪಿ ಸುಬ್ರಣಿಯನ್ ಸ್ವಾಮಿ ಟೀಕಿಸಿದ್ದಾರೆ. ಈ ಹಿಂದೆ ಕೇಂದ್ರ ತಪ್ಪು ನಿರ್ಧಾರಗಳ ವಿರುದ್ಧ ಗರಂ ಆಗಿದ್ದ ಸುಬ್ರಮಣಿಯನ್ ಸ್ವಾಮಿ ಇದೀಗ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರ ಪ್ರಯಾಣಕ್ಕೆ ಟಿಕೆಟ್ ದರ ಪಡೆದುಕೊಂಡ ಕೇಂದ್ರದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೂರ್ಖರ ನಿಯಮ ಎಂದು ಕರೆದಿದ್ದಾರೆ.

ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚ ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ.

ಕಳೆದ 40 ದಿನದಿಂದ ಕೆಲಸವಿಲ್ಲದೆ, ಒಂದು ಹೊತ್ತಿನ ಊಟಕ್ಕೂ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಪರದಾಡಿದ್ದಾರೆ. ತಾವು ಉಪವಾಸವಿದ್ದರೂ ಲಾಕ್‌ಡೌನ್ ನಿಯಮ ಪಾಲಿಸಿದ್ದಾರೆ. ಇದೀಗ ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಊರಿಗೆ ತೆರಳಲು ಅನುಮತಿ ನೀಡಿ ಅವರಿಂದಲೇ ಪ್ರಯಾಣ ದರ ಭರಿಸಲು ಹೇಳಿದರೆ ಅವರಲ್ಲಿ ಹಣ ಎಲ್ಲಿಂದ. ಕನಿಷ್ಠ ಜ್ಞಾನವಿಲ್ಲದ ರೀತಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಸುಬ್ರಮಣಿಯನ್ ಸ್ವಾಮಿ ಕಿಡಿ ಕಾರಿದ್ದಾರೆ.

ವಿದೇಶದಿಂದ ಬರೋರಿಗೆ ಫ್ರೀ, ಬಡ ಕಾರ್ಮಿಕರಿಗೆ ಟಿಕೆಟ್‌ ಶುಲ್ಕ: ವಿಪಕ್ಷಗಳ ಆಕ್ರೋಶ

ವಿದೇಶದಲ್ಲಿ ಸಿಲುಕಿದ್ದವರನ್ನು ಏರ್ ಇಂಡಿಯಾ ಮೂಲಕ ಉಚಿತವಾಗಿ ಕರೆತರಲಾಯಿತು. ಇದೀಗ ವಲಸೆ ಕಾರ್ಮಿಕರಿಂದ ಪ್ರಯಾಣ ದರ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಭಾರತೀಯ ರೈಲ್ವೇಯಲ್ಲಿ ಹಣವಿಲ್ಲದಿದ್ದರೆ, ಪ್ರಧಾನಿ ಪರಿಹಾರ ನಿಧಿಯ ಹಣವನ್ನು ಬಳಸಬೇಕಿತ್ತು ಎಂದು ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಶೇಕಡಾ 85 ರಷ್ಟು ಪ್ರಯಾಣದ ದರವನ್ನೂ ಹಾಗೂ ಆಯಾ ರಾಜ್ಯ ಸರ್ಕಾರ ಶೇಕಡಾ 15 ರಷ್ಟು ಹಣವನ್ನು ಭರಿಸಬೇಕು ಎಂದು ಸ್ವಾಮಿ ಹೇಳಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಸ್ವಾಮಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರಯಾಣ ದರ ಭರಿಸುವ ಕುರಿತು ಚರ್ಚಿಸಿದ್ದಾರೆ. ಇಷ್ಟೇ ಶೀಘ್ರದಲ್ಲೇ ರೈಲ್ವೇ ಇಲಾಖೆ ಅಧೀಕೃತ ಪ್ರಕಟಣೆ ಹೊರಡಿಸುವ ಭರವಸೆ ನೀಡಿದ್ದಾರೆ ಎಂದು ಸ್ವಾಮಿ ಹೇಳಿದ್ದಾರೆ. 

ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ವಲಸೆ ಹಾಗೂ ಕೂಲಿ ಕಾರ್ಮಿಕರಿಂದ ಪ್ರಯಾಣ ದರ ಪಡೆದುಕೊಳ್ಳುವ ವಿರುದ್ಧ ಕಿಡಿ ಕಾರಿದ್ದರು. ಸರ್ಕಾರದ ನಡೆಯನ್ನು ಪಶ್ನಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಆಯಾ ರಾಜ್ಯದ ಕಾಂಗ್ರೆಸ್ ಸಮಿತಿಗೆ ಕಾರ್ಮಿಕರ ವೆಚ್ಚ ಭರಿಸುವಂತೆ ಸೂಚಿಸಿದ್ದರು.