ಕೇರಳದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಹೊರಗೆ ಹೋಗುವುದು ಕಷ್ಟಕರವಾಗಿದ್ದು, ಎಂಜಿಎನ್‌ಆರ್‌ಇಜಿಎ (ನರೇಗಾ) ಕಾಮಗಾರಿಯೂ ಸ್ಥಗಿತಗೊಂಡಿದೆ.

ಕೋಳಿಕ್ಕೋಡ್ (ಜುಲೈ 10, 2023): ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬೀದಿ ನಾಯಿಗಳ ನಿರಂತರ ದಾಳಿಯಿಂದಾಗಿ ಕೋಳಿಕ್ಕೋಡ್‌ನ ಕೂತಲಿ ಪಂಚಾಯತ್ ಸೋಮವಾರ (ಜೂನ್ 10) ಏಳು ಶಾಲೆಗಳು ಮತ್ತು 17 ಅಂಗನವಾಡಿಗಳಿಗೆ ರಜೆಯನ್ನೇ ಘೋಷಿಸಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಬೀದಿನಾಯಿ ದಾಳಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ. ಭಾನುವಾರ ಸಂಜೆ ಈ ಪ್ರದೇಶದಲ್ಲಿ ಸುಮಾರು ಐದಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿದ್ದು, ಪರಿಸ್ಥಿತಿ ಅಪಾಯಕಾರಿಯಾಗಿ ಮಾರ್ಪಟ್ಟಿತ್ತು. ಇದರಿಂದ ಮಕ್ಕಳು ಹೊರಗೆ ಹೋಗುವುದು ಕಷ್ಟಕರವಾಗಿದ್ದು, ಎಂಜಿಎನ್‌ಆರ್‌ಇಜಿಎ (ನರೇಗಾ) ಕಾಮಗಾರಿಯೂ ಸ್ಥಗಿತಗೊಂಡಿದೆ.

ಇದನ್ನು ಓದಿ: ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

ಈ ಹಿನ್ನೆಲೆ ಕೂತಲಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ವೆಂಗಪ್ಪಟ್ಟ ಯುಪಿ ಶಾಲೆ, ಕೂತಲಿ ಯುಪಿ ಶಾಲೆ, ಕಲ್ಲೋಡು ಎಲ್‌ಪಿ ಶಾಲೆ, ಪೈತ್ತೋತ್ ಎಲ್‌ಪಿ ಶಾಲೆ ಮತ್ತು ಕಲ್ಲೂರು ಕೂತಾಳಿ ಎಂಎಲ್‌ಪಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ತಿಂಗಳು ಕಣ್ಣೂರಿನಲ್ಲಿ 9 ವರ್ಷದ ವಿದ್ಯಾರ್ಥಿಯ ಮೇಲೆ ಬೀದಿನಾಯಿಗಳ ಗುಂಪು ದಾಳಿ ನಡೆಸಿತ್ತು. ಬಾಲಕಿ ತನ್ನ ಮನೆಯ ತೋಟದಲ್ಲಿ ಆಟವಾಡುತ್ತಿದ್ದಾಗ ಮೂರು ನಾಯಿಗಳು ದಾಳಿ ಮಾಡಿ ನೆಲಕ್ಕೆ ಬಡಿದು ಕಚ್ಚಿ ಆಕೆಯನ್ನು ಎಳೆದುಕೊಂಡು ಹೋಗಲು ಯತ್ನಿಸಿವೆ. ಇದರಿಂದ ಆಕೆಯ ತಲೆ, ಹೊಟ್ಟೆ, ತೊಡೆ ಮತ್ತು ಕೈಗೆ ತೀವ್ರ ಗಾಯಗಳಾಗಿತ್ತು.

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಈ ವರ್ಷ ಮೇ ತಿಂಗಳವರೆಗೆ ಕೇರಳದಲ್ಲಿ 1.4 ಲಕ್ಷ ಬೀದಿ ನಾಯಿಗಳ ದಾಳಿಗಳು ವರದಿಯಾಗಿವೆ. ಕೇರಳ ರಾಜ್ಯದಲ್ಲಿ ಪ್ರತಿದಿನ ಸುಮಾರು 1000 ಜನರು ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಜೂನ್ ತಿಂಗಳೊಂದರಲ್ಲೇ ಕೇರಳದಲ್ಲಿ ನಾಯಿ ದಾಳಿಯ ನಂತರ 25,230 ಜನರು ವೈದ್ಯಕೀಯ ಚಿಕಿತ್ಸೆಗೆ ಬಂದಿದ್ದಾರೆ. ಈ ತಿಂಗಳು ಕಣ್ಣೂರಿನ 11 ವರ್ಷದ ಮಗು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 6 ತಿಂಗಳಲ್ಲಿ ಬೀದಿ ನಾಯಿಗಳು ಕಚ್ಚಿ 8 ಮಂದಿ ಮೃತಪಟ್ಟಿದ್ದಾರೆ. 
ಕೇರಳ ರಾಜ್ಯದಲ್ಲಿ 2,89,986 ಬೀದಿ ನಾಯಿಗಳಿವೆ ಎಂದು ಪಶು ಕಲ್ಯಾಣ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

ಇದನ್ನೂ ಓದಿ: ಛೀ ಪಾಪಿ..! ಬಿಹಾರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ: ವಿಡಿಯೋ ವೈರಲ್‌ ಬಳಿಕ ಪೊಲೀಸರಿಂದ ತನಿಖೆ