* ಜಂತರ್‌ ಮಂತರ್‌ನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಗಾಂಧಿ * ದಲಿತರು, ರೈತರ ‘ಪ್ರವಾಹ’ಕ್ಕೆ ಕೊಚ್ಚಿ ಹೋಗಲಿರುವ ಮೋದಿ* ಮೋದಿ ವಿರುದ್ಧ ರಾಹುಲ್ ಕಿಡಿ

ನವದೆಹಲಿ(ಆ.13): ಜಂತರ್‌ ಮಂತರ್‌ನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಹರಿಹಾಯ್ದಿದ್ದಾರೆ. ರೈತರು, ಬಡವರು, ದಲಿತರು, ಕಾರ್ಮಿಕರ ದನಿ ಒಟ್ಟಾಗಿ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗೆ ತಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ ನಡೆದ ದಲಿತ ದೌರ್ಜನ್ಯ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಭಾರತೀಯರಿಗೆ ಪರಿಸ್ಥಿತಿ ಸಂಪೂರ್ಣವಾಗಿ ಅರಿವಾಗಿದೆ. ಬಡವರು ಮತ್ತು ದಲಿತರ ಕೂಗು ದೇಶದಲ್ಲಿ ಎದ್ದಿದೆ. ಇದು ಪ್ರವಾಹದಂತೆ ಅಪ್ಪಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ’ ಎಂದರು.

‘ಭಾರತ ಬಾಬಾಸಾಹೇಬ್‌ ಮತ್ತು ಗಾಂಧಿಯಂತಹ ಮಹಾನ್‌ ವ್ಯಕ್ತಗಳನ್ನು ಕಂಡಿದೆ. ಗಾಂಧೀಜಿ ಹೇಳಿದಂತೆ ಯಾವುದಕ್ಕೂ ಹೆದರಬೇಡಿ ಎಂದು ಕಾಂಗ್ರೆಸ್‌ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ರೈತರ, ದಲಿತರ, ಹಿಂದುಳಿದವರ ಪರವಾಗಿ ಸದನದಲ್ಲೂ ಮಾತನಾಡಲು ನಮಗೆ ಬಿಟ್ಟಿಲ್ಲ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸಭೆಯಲ್ಲಿ ಸಂಸದರ ಮೇಲೆ ಹಲ್ಲೆ ಮಾಡಲಾಗಿದೆ. ಕರೋನ ಸಮಯದಲ್ಲಿ ಜನರಿಗೆ ನೇರವಾಗಿ ಹಣ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು. ಆದರೆ ಮೋದಿ ಸರ್ಕಾರ 4-5 ಉದ್ಯಮಿಗಳಿಗೆ ಹಣ ದೊರೆಯುವಂತೆ ಮಾಡಿದೆ’ ಎಂದು ಅವರು ಆರೋಪಿಸಿದರು.