ಸಾಕಷ್ಟು ಸೂಚನೆ ಹೊರತಾಗಿಯೂ ತ್ಯಾಜ್ಯ ಸುಡುವುದನ್ನು ನಿಲ್ಲಿಸದ ರೈತರಿಗೆ ಬಿತ್ತನೆ ಬೀಜ ನೀಡಬಾರದು ಮತ್ತು ಅವರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬಾರದು ಎಂಬ ಕಟುಮಾತುಗಳನ್ನು  ಸುಪ್ರೀಂಕೋರ್ಟ್ ಆಡಿದೆ. 

ನವದೆಹಲಿ: ರೈತರ ತ್ಯಾಜ್ಯ ಸುಡುವ ವಿಷಯಕ್ಕೆ ಕೊನೆ ಹಾಡಲು ಯಾವುದೇ ಸೂಕ್ತ ಯೋಜನೆ ಜಾರಿಯಲ್ಲಿ ವಿಫಲವಾಗಿರುವ ಪಂಜಾಬ್‌ ಮತ್ತು ಹರ್ಯಾಣ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಸುಪ್ರೀಂಕೋರ್ಟ್‌, ಇದೇ ವೇಳೆ ಸಾಕಷ್ಟು ಸೂಚನೆ ಹೊರತಾಗಿಯೂ ತ್ಯಾಜ್ಯ ಸುಡುವುದನ್ನು ನಿಲ್ಲಿಸದ ರೈತರಿಗೆ ಬಿತ್ತನೆ ಬೀಜ ನೀಡಬಾರದು ಮತ್ತು ಅವರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬಾರದು ಎಂಬ ಕಟುಮಾತುಗಳನ್ನು ಆಡಿದೆ.

ಪಂಜಾಬ್‌ ಮತ್ತು ಹರ್ಯಾಣ ರೈತರು ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಾಕುವ ಪ್ರಕರಣ ಮುಂದುವರೆಸಿರುವುದರಿಂದ ದೆಹಲಿಯಲ್ಲಿ ಮಾಲಿನ್ಯ ಸಮಸ್ಯೆ ಪದೇ ಪದೇ ಕಾಡುತ್ತಿದೆ ಎಂಬ ಅಂಶವನ್ನು ಪ್ರಸ್ತಾಪಿಸಿದ ನ್ಯಾ. ಎಸ್‌.ಕೆ.ಕೌಲ್‌ ಮತ್ತು ನ್ಯಾ.ಸುಧಾನ್ಷು ಧುಲಿಯಾ ಅವರನ್ನೊಳಗೊಂಡ ಪೀಠ, ಸಮಸ್ಯೆಗೆ ಏನು ಕಾರಣ ಎಂಬುದು ಗೊತ್ತಿದೆ. ಅದು ಗೊತ್ತಾದ ಮೇಲೆ ಅದನ್ನು ನಿಯಂತ್ರಣ ಮಾಡುವ ಕೆಲಸ ನಿಮ್ಮದು ಎಂದು ಎರಡೂ ರಾಜ್ಯಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಜೊತೆಗೆ ತ್ಯಾಜ್ಯವನ್ನು ಸೂಕ್ತ ನಿರ್ವಹಣೆ ಮಾಡುವ ರೈತರಿಗೆ ಹರ್ಯಾಣ ಸರ್ಕಾರದ ಆರ್ಥಿಕ ನೆರವು ನೀಡುವ ನೀತಿಯನ್ನು ಪಂಜಾಬ್‌ ಕೂಡಾ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿತು.

ದಿಲ್ಲಿ ಭೀಕರ ವಾಯುಮಾಲಿನ್ಯಕ್ಕೆ ಕೊಡಗಿನ ಕಾಫಿ ಉದ್ಯಮಿ ಬಲಿ

ಕೋರ್ಟ್‌ನ 2 ರೀತಿಯ ಅಭಿಪ್ರಾಯ:

ಇದೇ ವೇಳೆ ಪಂಜಾಬ್‌ ರೈತರು ತಾವು ಏಕೆ ತ್ಯಾಜ್ಯ ಸುಡುತ್ತೇವೆ ಎಂದು ಹೇಳಲು ಸೂಕ್ತ ವೇದಿಕೆ ಕಲ್ಪಿಸದೇ ಅವರನ್ನು ಪದೇ ಪದೇ ವಿಲನ್‌ ರೀತಿಯಲ್ಲಿ ನೋಡಲಾಗುತ್ತಿದೆ. ಅವರು ಇಷ್ಟು ಸೂಚನೆ ಹೊರತಾಗಿಯೂ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿದ್ದಾರೆ ಎಂದಾದಲ್ಲಿ ಅದಕ್ಕೆ ಏನಾದರೂ ಕಾರಣ ಇರಬೇಕು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಆದರೆ ಮತ್ತೊಂದೆಡೆ ತಮ್ಮ ವರ್ತನೆಗಳ ಮೂಲಕ ಕಾನೂನು ಉಲ್ಲಂಘನೆ ಮಾಡುವವರಿಗೆ ಕನಿಷ್ಠ ಬೆಂಬಲ ಬೆಲೆ ರೀತಿಯ ಆರ್ಥಿಕ ನೆರವು ನೀಡಬಾರದು. ಅದನ್ನು ಸ್ಥಗಿತಗೊಳಿಸಬೇಕು ಮತ್ತು ಹೀಗೆ ಕಾನೂನು ಉಲ್ಲಂಘನೆ ಮಾಡುವ ರೈತರಿಗೆ ಬಿತ್ತನೆ ಬೀಜ ನೀಡಬಾರದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ವಾಯು ಮಾಲಿನ್ಯ: ಬರೀ ಹಾರ್ಟ್, ಲಂಗ್ಸ್ ಹಾಳಾಗೋದಲ್ಲ, ಲೈಂಗಿಕ ಜೀವನವೂ ಹದಗೆಡುತ್ತೆ!