ಚಲಿಸುತ್ತಿರುವ ರೈಲಿನ ಮೇಲೆ ಕಲ್ಲು ತೂರಾಟ: ಪ್ರಯಾಣಿಕನ ತಲೆ ಸೀಳಿದ ಕಲ್ಲು
ಚಲಿಸುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಯೋರ್ವ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಕಿಡಿಗೇಡಿ ಯುವಕನೋರ್ವ ರೈಲಿನ ಮೇಲೆ ತೂರಿದ ಕಲ್ಲು ಸೀದಾ ಬಂದ ಪ್ರಯಾಣಿಕನ ಹಣೆಗೆ ಬಡಿದಿದ್ದು, ನೆತ್ತರು ಚಿಮ್ಮಿದೆ.
ಪಾಟ್ನಾ: ಚಲಿಸುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಯೋರ್ವ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಕಿಡಿಗೇಡಿ ಯುವಕನೋರ್ವ ರೈಲಿನ ಮೇಲೆ ತೂರಿದ ಕಲ್ಲು ಸೀದಾ ಬಂದ ಪ್ರಯಾಣಿಕನ ಹಣೆಗೆ ಬಡಿದಿದ್ದು, ನೆತ್ತರು ಚಿಮ್ಮಿದೆ. ಘಟನೆಯ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಲ್ಲು ತೂರಿದ ಕಿಡಿಗೇಡಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯವೂ ಕೂಡ ಪ್ರತಿಕ್ರಿಯಿಸಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆಯ ಹಲವು ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಅಂದಹಾಗೆ ಬಿಹಾರದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ಏಕಾಂಗಿ ಯುವಕನೋರ್ವ ಚಲಿಸುತ್ತಿದ್ದ ಭಗಲ್ಪುರ್ ಜೈನಗರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದಿದ್ದಾನೆ. ಇದು ರೈಲಿನ ಕಿಟಕಿಯ ಮೂಲಕ ಹಾದು ಹೋಗಿ ಪ್ರಯಾಣಿಕನನ್ನು ಗಾಯಗೊಳಿಸಿದೆ. ಈ ವಿಚಾರವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಗಾಯಗೊಂಡವರು ಹಾಗೂ ಕಲ್ಲು ಎಸೆದವ ಇಬ್ಬರ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದರು. ಚಲಿಸುತ್ತಿದ್ದ ಭಗಲ್ಪುರ ಜೈನಗರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ದರ್ಭಂಗ್ ಹಾಗೂ ಕಕರ್ಘಟಿ ಮಧ್ಯೆ ಕಲ್ಲೆಸೆಯಲಾಗಿದ್ದು, ಕಲ್ಲೆಸೆದವನನ್ನು ಕೂಡಲೇ ಬಂಧಿಸಿ ರೈಲ್ವೆ ಆಡಳಿತವೂ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮುಂದೆಂದು ಸಂಭವಿಸಬಾರದು ಎಂದು ಬರೆದಿರುವ ಆತ ಈ ಪೋಸ್ಟ್‌ನ್ನು ರೈಲ್ವೆಗೆ ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ನೋಡಿದ ಅನೇಕರು ಕಲ್ಲೆಸೆದ ಕಿಡಿಗೇಡಿ ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಿ ಎಂದು ಅನೇಕರು ಆಗ್ರಹಿಸಿದ್ದಾರೆ. ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಹೋರಾಡಲು ಕೇವ ರೈಲ್ವೆ ಪೊಲೀಸರು ಗಮನಿಸಿದರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಜಬಾವ್ದಾರನಾಗಿ ಇಂತಹ ಕಿಡಿಗೇಡಿಗಳನ್ನು ಸೆರೆ ಹಿಡಿಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯವೂ ಕೂಡ ಪ್ರತಿಕ್ರಿಯಿಸಿದ್ದು, ಆರೋಪಿಯನ್ನು ಗುರುತಿಸಲಾಗಿದ್ದು, ಆತನ ವಿರುದ್ಧ ಹಲವು ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಘಟನೆಗಳನ್ನು ಸಾರ್ವಜನಿಕರು ಕೂಡ ಗಮನಿಸಿದಲ್ಲಿ ಕೂಡಲೇ ಈ ಬಗ್ಗೆ ರೈಲ್ವೆಗೆ ವರದಿ ಮಾಡುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.