ಕೇವಲ ಐದೇ ತಿಂಗಳಲ್ಲಿ ಷೇರು ಮಾರ್ಕೆಟ್‌ನಿಂದಲೇ 46 ಲಕ್ಷ ಲಾಭ ಮಾಡಿಕೊಂಡ ರಾಹುಲ್ ಗಾಂಧಿ!
Rahul Gandhi Stock Returns ಒಂದೆಡೆ ರಾಹುಲ್ ಗಾಂಧಿ ಮೋದಿ ಸರ್ಕಾರ ಷೇರು ಪೇಟೆಯಲ್ಲಿ ಅಕ್ರಮ ನಡೆಸುತ್ತಿದೆ ಎನ್ನುವ ಆರೋಪಗಳ ಮಧ್ಯೆಯೇ ರಾಹುಲ್ ಗಾಂಧಿ ಕಳೆದ ಐದು ತಿಂಗಳಲ್ಲಿ ತಮ್ಮ ಷೇರುಗಳಿಂದ 46.5 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗಿದೆ.
ನವದೆಹಲಿ (ಆ.12): ಮೋದಿ 3.0 ಸರ್ಕಾರದ ಮೇಲೆ ರಾಹುಲ್ ಗಾಂಧಿ ಮಾಡಿದ ಮೊಟ್ಟಮೊದಲ ಆರೋಪ ಏನೆಂದರೆ, ಷೇರು ಪೇಟೆ ಅಕ್ರಮ. ಭಾರತೀಯ ಷೇರು ಮಾರುಕಟ್ಟೆಯ ಅದ್ಬುತ ಬೆಳವಣಿಗೆಯ ಬಗ್ಗೆ ರಾಹುಲ್ ಗಾಂಧಿ ಇಂದಿಗೂ ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ, ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇದೇ ಷೇರು ಮಾರುಕಟ್ಟೆಯಿಂದ 46.5 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎನ್ನುವುದು ಅಂಕಿಅಂಶಗಳಿಂದ ಗೊತ್ತಾಗಿದೆ. ಈ ಹಣ ಕೇವಲ ಐದೇ ತಿಂಗಳಲ್ಲಿ ಅವರಿಗೆ ಬಂದಿರುವುದು ವಿಶೇಷ. ಈ ಕುರಿತಾಗಿ ಸುದ್ದಿ ಸಂಸ್ಥೆಯೊಂದು ಸಂಪೂರ್ಣ ಲೆಕ್ಕಾಚಾರ ಮಾಡಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ರಾಹುಲ್ ಗಾಂಧಿಯವರ ಪೋರ್ಟ್‌ಫೋಲಿಯೋದ ಮೌಲ್ಯವು ಸುಮಾರು 4.33 ಕೋಟಿ ರೂಪಾಯಿಗಳಿಂದ (2024ರ ಮಾರ್ಚ್ 15ರಂತೆ), ಸುಮಾರು 4.80 ಕೋಟಿ ರೂಪಾಯಿಗಳಿಗೆ (2024ರ ಆಗಸ್ಟ್ 12ರಂತೆ) ಹೆಚ್ಚಾಗಿದೆ ಎಂದು ತಿಳಿಸಿದೆ. ರಾಯ್ ಬರೇಲಿ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆಗೆ ಸಲ್ಲಿಸಿದ ನಾಮಪತ್ರದಲ್ಲಿ ಬಹಿರಂಗವಾದ ಷೇರುಗಳ ಆಧಾರದ ಮೇಲೆ ಲಾಭವನ್ನು ಲೆಕ್ಕ ಮಾಡಲಾಗಿದೆ.
ರಾಹುಲ್ ಗಾಂಧಿಯವರ ಪೋರ್ಟ್‌ಫೋಲಿಯೋದಲ್ಲಿ ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ದೀಪಕ್ ನೈಟ್ರೈಟ್, ಡಿವಿಸ್ ಲ್ಯಾಬ್ಸ್, ಜಿಎಂಎಂ ಪ್ಫೌಡ್ಲರ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್, ಐಟಿಸಿ, ಟಿಸಿಎಸ್, ಟೈಟಾನ್, ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾ ಮತ್ತು ಎಲ್‌ಟಿಐಮಿಂಡ್‌ಟ್ರೀ ಮುಂತಾದ ಷೇರುಗಳು ಸೇರಿವೆ. ಅವರ ಪೋರ್ಟ್‌ಫೋಲಿಯೋ ಸುಮಾರು 24 ಷೇರುಗಳನ್ನು ಒಳಗೊಂಡಿದೆ, ಅದರಲ್ಲಿ ಅವರು ಪ್ರಸ್ತುತ ಕೇವಲ ನಾಲ್ಕು ಕಂಪನಿಗಳಲ್ಲಿ ಮಾತ್ರವೇ ನಷ್ಟ ಎದುರಿಸುತ್ತಿದ್ದಾರೆ. LTI ಮೈಂಡ್‌ಟ್ರೀ, ಟೈಟಾನ್, TCS ಮತ್ತು ನೆಸ್ಲೆ ಇಂಡಿಯಾದ ಷೇರುಗಳು ಮಾತ್ರವೇ ಕುಸಿತ ಕಂಡಿವೆ.
ಇವುಗಳ ಹೊರತಾಗಿ, ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್ ಮತ್ತು ವಿನೈಲ್ ಕೆಮಿಕಲ್ಸ್‌ನಂತಹ ಹಲವಾರು ಸಣ್ಣ ಕಂಪನಿಗಳ ಷೇರುಗಳನ್ನು ಸಹ ಕಾಂಗ್ರೆಸ್ ನಾಯಕ ಪೋರ್ಟ್‌ಫೋಲಿಯೋದಲ್ಲಿದೆ. ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್‌ನಲ್ಲಿ ಕಾರ್ಪೋರೇಟ್ ಪ್ರಕ್ರಿಯೆ ಕಾರಣದಿಂದಾಗಿ ಈ ಕಂಪನಿಯಲ್ಲಿನ ಷೇರುಗಳ ಸಂಖ್ಯೆಯು 5,200 ಕ್ಕೆ ಏರಿದೆ.
ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಆರಂಭವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಹಲವು ದಾಖಲೆಗಳನ್ನು ಮುರಿದು ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.
ಈ ನಡುವೆ ಭಾನುವಾರ ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪದಲ್ಲಿ ಸೆಬಿ ಮುಖ್ಯಸ್ಥರ ವಿರುದ್ಧದ ಆರೋಪಗಳಿಗೆ ಜೆಪಿಸಿ ತನಿಖೆಯನ್ನು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. "ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ಸಂರಕ್ಷಿಸುವ ಹೊಣೆಗಾರಿಕೆ ಹೊಂದಿರುವ ಸೆಕ್ಯುರಿಟೀಸ್ ರೆಗ್ಯುಲೇಟರ್‌ನ ಸಮಗ್ರತೆಯನ್ನು ಅದರ ಅಧ್ಯಕ್ಷರ ವಿರುದ್ಧದ ಆರೋಪಗಳಿಂದ ಗಂಭೀರವಾಗಿ ರಾಜಿ ಮಾಡಲಾಗಿದೆ" ಎಂದು ಅವರು ಹೇಳಿದ್ದಾರೆ. ಆದರೆ, ಹಿಂಡೆನ್‌ಬರ್ಗ್‌ನ ಆರೋಪಗಳು ಷೇರುಮಾರುಕಟ್ಟೆಯ ಮೇಲೆ ಯಾವುದೇ ರೀತಿಯಲ್ಲ ಪರಿಣಾಮ ಬೀರಲಿಲ್ಲ.
Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್ ನಾಯಕ!
ಕೇಡಿಯಾನೊಮಿಕ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಸುಶೀಲ್ ಕೇಡಿಯಾ ಮಾತನಾಡಿ, 18 ತಿಂಗಳ ಹಿಂದೆ ಅದಾನಿ ಗ್ರೂಪ್ ಬಗ್ಗೆ ದೊಡ್ಡ ಹಕ್ಕುಗಳನ್ನು ಮಾಡಿದಾಗ ಹಿಂಡೆನ್‌ಬರ್ಗ್ ಕಿರು-ಮಾರಾಟದ ಸಂಸ್ಥೆಯನ್ನು ಬಹಿರಂಗಪಡಿಸಲಾಯಿತು ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯಲ್ಲಿ ಏನೂ ಕಂಡುಬಂದಿಲ್ಲ. ಸೆಬಿಯು ಸೆಕ್ಯುರಿಟೀಸ್ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಶೋಧನಾ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿದೆ. ಈ ವರ್ಷದ ಆರಂಭದಿಂದಲೂ ಸೆನ್ಸೆಕ್ಸ್ ಶೇ.11ರಷ್ಟು ಮತ್ತು ನಿಫ್ಟಿ ಶೇ.12ರಷ್ಟು ರಿಟರ್ನ್ ನೀಡಿದೆ.