ಭೋಪಾಲ್[ಡಿ.02]: ವಿದ್ಯುತ್‌ ಇಲ್ಲದ್ದಕ್ಕೆ ಮೊಬೈಲ್‌ ಟಾಚ್‌ರ್‍ ಹಾಗೂ ಕ್ಯಾಂಡಲ್‌ ಬೆಳಕಿನಿಂದ ಬರೋಬ್ಬರಿ 35 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಶಸ್ತ್ರ ಚಿಕಿತ್ಸೆ ಬಳಿಕ ಸ್ಟೆ್ರಚರ್‌, ಬೆಡ್‌ಶೀಟ್‌ ಕೂಡ ಇಲ್ಲದೇ, ಮಹಿಳೆಯರನ್ನು ನೆಲದಲ್ಲಿಯೇ ಮಲಗಿಸಲಾಗಿದ್ದು, ಸರಿಯಾದ ಆರೈಕೆ ಕೂಡ ಮಾಡಿಲ್ಲ ಎಂದು ದೂರಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಆದರೆ ಸಂಜೆ 5 ಗಂಟೆಗೆ ಬಂದ ವೈದ್ಯರು ವಿದ್ಯುತ್‌ ಇಲ್ಲದಿದ್ದರೂ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಆರಂಭಿಸುವಾಗ ವಿದ್ಯುತ್‌ ಇತ್ತು, ಬಳಿಕ ಕೈಕೊಟ್ಟಿತು ಎಂದು ವೈದ್ಯ ನರೇಂದ್ರ ಸಿಂಗ್‌ ತಿಳಿಸಿದ್ದಾರೆ.

ಈ ಆರೋಪವನ್ನು ವೈದ್ಯ ನರೇಂದ್ರ ಸಿಂಗ್‌ ತಳ್ಳಿ ಹಾಕಿದ್ದು, ನಾವು ಶಸ್ತ್ರ ಚಿಕಿತ್ಸೆ ಆರಂಭಿಸುವ ವೇಳೆ ವಿದ್ಯುತ್‌ ಇತ್ತು. ಬಳಿಕ ವಿದ್ಯುತ್‌ ಕೈ ಕೊಟ್ಟರೂ, ನಮ್ಮ ಉಪಕರಣಗಳು ಸ್ವಯಂ ಪ್ರಕಾಶಿತವಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದೆವು. ರಕ್ತಸ್ರಾವವಾಗುತ್ತಿದ್ದರಿಂದ ಶಸ್ತ್ರ ಚಿಕಿತ್ಸಾ ಕೊಠಡಿಯಿಂದ ಹೊರಬಂದ ಬಳಿಕ ಹೊಲಿಗೆ ಹಾಕಲಾಗಿದೆ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ್‌ ಅವಾಧಿಯ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು, ಶಸ್ತ್ರ ಚಿಕಿತ್ಸೆಯ ವೇಳೆ ಏಳೆಂಟು ನಿಮಿಷಗಳ ಕಾಲ ವಿದ್ಯುತ್‌ ಕೈ ಕೊಟ್ಟಾಗ ಟಾಚ್‌ರ್‍ ಬಳಸಿದ್ದಾರಷ್ಟೇ. ಅಲ್ಲದೇ ಶಸ್ತ್ರ ಚಿಕಿತ್ಸೆ ಬಳಿಕ ಸರಿಯಾದ ಆರೈಕೆ ಸಿಗದ ಬಗ್ಗೆ ವಿವರಣೆ ಕೇಳಲಾಗಿದೆ ಎಂದು ಹೇಳಿದ್ದಾರೆ.