ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೂತನವಾಗಿ ನೇಮಕಗೊಂಡಿರುವ ರಾಜ್ಯ ಉಸ್ತುವಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಬೆಂಬಲಿಸುವಂತೆ ಮತ್ತು ಪಕ್ಷಾಂತರಿಗಳಿಂದ ದೂರವಿರುವಂತೆ ಸೂಚನೆ ನೀಡಿದ್ದಾರೆ. ಮುಂಬರುವ ಚುನಾವಣೆಗಳ ಫಲಿತಾಂಶಕ್ಕೆ ರಾಜ್ಯ ನಾಯಕರೇ ಹೊಣೆಗಾರರೆಂದು ಅವರು ಹೇಳಿದರು.

ಪಿಟಿಐ ನವದೆಹಲಿ (ಫೆ.20): ‘ನಿಮ್ಮ ನೇತೃತ್ವದಲ್ಲಿ ರಾಜ್ಯಗಳಲ್ಲಿ ನಡೆಯಲಿರುವ ಮುಂದಿನ ಚುನಾವಣಾ ಫಲಿತಾಂಶಕ್ಕೆ ನೀವೇ ಉತ್ತರದಾಯಿಗಳು. ಸಂಕಷ್ಟದ ಸಮಯದಲ್ಲಿ ಪಲಾಯನ ಮಾಡುವ ಪಕ್ಷಾಂತರಿಗಳಿಂದ ದೂರವಿರಿ, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಬೆಂಬಲಿಸಿ’ ಎಂದು ನೂತನವಾಗಿ ನೇಮಕಗೊಂಡಿರುವ ಕಾಂಗ್ರೆಸ್ ರಾಜ್ಯ ಘಟಕದ ಉಸ್ತುವಾರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿನ ಪಕ್ಷದ ಕಚೇರಿ ಇಂದಿರಾ ಭವನದಲ್ಲಿ ಬುಧವಾರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಎಲ್ಲ ರಾಜ್ಯಾಧ್ಯಕ್ಷರನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷ ಸಂಘಟನೆ ಕುರಿತು ಪಾಠ ಮಾಡಿದರು. ಕಾಂಗ್ರೆಸ್‌ ಸಿದ್ಧಾಂತಕ್ಕೆ ಬದ್ಧರಾಗಿರುವವರು ಮತ್ತು ಕೆಟ್ಟ ಪರಿಸ್ಥಿತಿಯಲ್ಲೂ ಪಕ್ಷದ ಜತೆಗೆ ಗಟ್ಟಿಯಾಗಿ ನಿಂತವರಿಗೆ ಪ್ರೋತ್ಸಾಹ ನೀಡುವ ಅಗತ್ಯದ ಕುರಿತು ತಿಳಿಹೇಳಿದರು.

ಕಳೆದ ವಾರವಷ್ಟೇ ಸಂಘಟನಾತ್ಮಕವಾಗಿ ಪಕ್ಷದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ಇದೀಗ ಸದ್ಯದಲ್ಲೇ ಇನ್ನಷ್ಟು ಬದಲಾವಣೆ ಕುರಿತು ಸುಳಿವು ನೀಡಿದರು. ಕೆಲವರ ನೇಮಕ ಈಗಾಗಲೇ ಆಗಿದೆ, ಇನ್ನೂ ಕೆಲವರ ಬದಲಾವಣೆ ಆಗಬೇಕಿದೆ ಎಂದು ಈ ಸಂದರ್ಭದಲ್ಲಿ ಖರ್ಗೆ ತಿಳಿಸಿದರು.

ಇದನ್ನೂ ಓದಿ: ಖರ್ಗೆ ನಿಲುವಿಗೆ ವಿರುದ್ಧವಾಗಿ ಕುಂಭಮೇಳದಲ್ಲಿ ರಾಹುಲ್, ಪ್ರಿಯಾಂಕ ಭಾಗಿ! Political Updates | Suvarna News

ಬೂತ್‌ಗೆ ಭೇಟಿ ನೀಡಿ:

ರಾಜ್ಯಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ವಿಚಾರದಲ್ಲಿ ಹಾಗೂ ಮುಂದಿನ ಚುನಾವಣೆ ಫಲಿತಾಂಶಗಳಿಗೆ ರಾಜ್ಯದ ಅಧ್ಯಕ್ಷರೇ ಉತ್ತರದಾಯಿಗಳಾಗಲಿದ್ದೀರಿ. ಪಕ್ಷವನ್ನು ರಾಜ್ಯದ ಮುಖ್ಯಕಚೇರಿಯಿಂದ ಬೂತ್‌ಮಟ್ಟದ ವರೆಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಂಘಟನಾತ್ಮಕವಾಗಿ ಬಲಪಡಿಸುವುದು ನಿಮ್ಮ ಕೆಲಸ. ಈ ಕೆಲಸಕ್ಕಾಗಿ ನೀವು ಬೂತ್‌ಗಳಿಗೂ ಭೇಟಿ ನೀಡಬೇಕಾಗುತ್ತದೆ. ಕಠಿಣ ಪರಿಶ್ರಮಪಡಬೇಕಾಗುತ್ತದೆ, ಕಾರ್ಯಕರ್ತರ ಜತೆಗೆ ಸಂವಾದ ನಡೆಸಬೇಕಾಗುತ್ತದೆ ಎಂದರು.

ಇಂಡಿಯನ್‌ ನ್ಯಾಷನಲ್ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನಂಥ ಸಹ ಸಂಘಟನೆಗಳೂ ನಮಗೆ ಮುಖ್ಯವಾಗಿವೆ. ಪಕ್ಷ ಸಂಘಟನೆಯಲ್ಲಿ ಅವರನ್ನೂ ತೊಡಗಿಸಿಕೊಳ್ಳಿ ಎಂದು ಇದೇ ವೇಳೆ ಸಲಹೆ ಹೇಳಿದರು.

ಪದಾಧಿಕಾರಿಗಳು ತಳಮಟ್ಟದ ವರೆಗೆ ಹೋದಾಗ ಸಂಘಟನೆಗೆ ಹೊಸಬರನ್ನು, ನಂಬಿಕಸ್ಥ ಮತ್ತು ಸೈದ್ಧಾಂತಿಕವಾಗಿ ಬಲಿಷ್ಠರಾಗಿರುವವರನ್ನು ನಿಮ್ಮ ಜತೆಗೆ ಕರೆದುಕೊಂಡು ಬರಲು ಸಾಧ್ಯವಾಗುತ್ತದೆ. ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಆದರೆ ಅವಕಾಶಗಳಿಂದ ವಂಚಿತರಾಗಿರುವ ಪಕ್ಷ ನಿಷ್ಠ ವ್ಯಕ್ತಿಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಅಗತ್ಯವಿದೆ ಎಂದರು.

ಇದನ್ನೂ ಓದಿ: ಖರ್ಗೆ ನಿಲುವಿಗೆ ವಿರುದ್ಧವಾಗಿ ಕುಂಭಮೇಳದಲ್ಲಿ ರಾಹುಲ್, ಪ್ರಿಯಾಂಕ ಭಾಗಿ! Political Updates | Suvarna News

ಅನೇಕ ಬಾರಿ ಪಕ್ಷ ಬಲಪಡಿಸುವ ಆತುರಾತುರವಾಗಿ ಹಲವರನ್ನು ಸೇರ್ಪಡೆ ಮಾಡಲಾಗುತ್ತದೆ. ಈ ವೇಳೆ ಬರುವವರು ಸೈದ್ಧಾಂತಿಕವಾಗಿ ದುರ್ಬಲರಾಗಿರಬಹುದು ಮತ್ತು ಕಷ್ಟದ ಸಮಯದಲ್ಲಿ ಪಕ್ಷದಿಂದ ದೂರಸರಿಯಬಹುದು. ಅಂಥವರಿಂದ ನಾವು ದೂರಇರಬೇಕು ಎಂದು ಇದೇ ವೇಳೆ ಹೇಳಿದರು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಹಿರಿಯ ನಾಯಕರಾದ ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್‌, ಜೈರಾಂ ರಮೇಶ್‌, ಎಲ್ಲ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಈ ವೇಳೆ ಉಪಸ್ಥಿತರಿದ್ದರು.