ಪುಲ್ವಾಮಾ ಎನ್‌ಕೌಂಟರ್: ಇಬ್ಬರು ಜೆಇಎಂ ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ
ಹತ್ಯೆಗೀಡಾದ ಭಯೋತ್ಪಾದಕರಲ್ಲೊಬ್ಬ ಈ ತಿಂಗಳ ಆರಂಭದಲ್ಲಿ ಪೊಲೀಸ್ ಪೇದೆ ರಿಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ
ಶ್ರೀನಗರ (ಮೇ 30): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರಲ್ಲೊಬ್ಬ ಈ ತಿಂಗಳ ಆರಂಭದಲ್ಲಿ ಪೊಲೀಸ್ ಪೇದೆ ರಿಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದರು. ಪುಲ್ವಾಮಾದ ಗುಂಡಿಪೋರಾ ಗ್ರಾಮದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಕುಲ್ಗಾಂ ಪೊಲೀಸರು ನೀಡಿದ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಅವರು ಹೇಳಿದರು.
"ಶೋಧನಾ ಕಾರ್ಯಾಚರಣೆಯ ಸಮಯದಲ್ಲಿ, ಜಂಟಿ ಶೋಧ ತಂಡವು ಶಂಕಿತ ಸ್ಥಳದ ಕಡೆಗೆ ಸಮೀಪಿಸುತ್ತಿದ್ದಂತೆ, ನಜೀರ್ ಅಹ್ಮದ್ ಮಿರ್ ಅವರ ವಸತಿ ಗೃಹದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಶೋಧ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದರು, ಇದು ಎನ್‌ಕೌಂಟರ್‌ಗೆ ಕಾರಣವಾಯಿತು" ಎಂದು ಅವರು ತಿಳಿಸಿದರು.
"ಕತ್ತಲೆ ಆವರಿಸಿದ್ದರಿಂದ ಯಾವುದೇ ಹಾನಿ ತಪ್ಪಿಸಲು, ರಾತ್ರಿ ಸಮಯದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಬೆಳ್ಳಂಬೆಳಗ್ಗೆ ಪುನರಾರಂಭಿಸಲಾಗಿತ್ತು ಎಂದು ವಕ್ತಾರರು ಹೇಳಿದರು. "ನಂತರದ ಎನ್‌ಕೌಂಟರ್‌ನಲ್ಲಿ, ಅಬಿದ್ ಹುಸೇನ್ ಶಾ ಮತ್ತು ಸಾಕಿಬ್ ಆಜಾದ್ ಸೋಫಿ ಎಂದು ಗುರುತಿಸಲಾದ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಅವರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜೆಇಎಂ ಜೊತೆ ಸಂಬಂಧ ಹೊಂದಿದ್ದರು" ಎಂದು ಅವರು ಹೇಳಿದರು.
ಇದನ್ನೂ ಓದಿ: ಪಾಕ್ ಜೊತೆ ಮಾತುಕತೆ ನಡೆಸದೆ ಕಾಶ್ಮೀರದಲ್ಲಿ ಶಾಂತಿ ಸಾಧ್ಯವಿಲ್ಲ, ಫಾರೂಖ್ ಅಬ್ದುಲ್ಲಾ!
ಪೊಲೀಸ್ ದಾಖಲೆಗಳ ಪ್ರಕಾರ, ಹತ್ಯೆಗೀಡಾದ ಇಬ್ಬರೂ ಭಯೋತ್ಪಾದಕರು ಪೊಲೀಸ್ ಮೇಲಿನ ದಾಳಿಗಳು ಮತ್ತು ನಾಗರಿಕ ದೌರ್ಜನ್ಯಗಳು ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುಂಪುಗಳ ಭಾಗವಾಗಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
"ಕೊಲ್ಲಲ್ಪಟ್ಟ ಭಯೋತ್ಪಾದಕ ಅಬಿದ್ ಶಾ 2022 ರ ಮೇ 13 ರಂದು ಪುಲ್ವಾಮಾದ ಗಡೂರ ಪ್ರದೇಶದಲ್ಲಿನ ತನ್ನ ವಸತಿ ಗೃಹದಲ್ಲಿ ಇತ್ತೀಚೆಗೆ ನಿರಾಯುಧ ಪೊಲೀಸ್ ಪೇದೆ ರಿಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ" ಎಂದು ಅವರು ಹೇಳಿದರು.
ಭಯೋತ್ಪಾದಕ ನೇಮಕಾತಿ ನಿಯಂತ್ರಣ: ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ವಿಜಯ್ ಕುಮಾರ್ ಅವರು ಯಾವುದೇ ಹಾನಿಯಾಗದಂತೆ ವೃತ್ತಿಪರ ರೀತಿಯಲ್ಲಿ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯನ್ನು ನಡೆಸಿದ ಪಡೆಗಳನ್ನು ಅಭಿನಂದಿಸಿದ್ದಾರೆ. ಇತ್ತೀಚೆಗೆ ಪುಲ್ವಾಮಾದಲ್ಲಿ ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ತಟಸ್ಥಗೊಳಿಸಿದ ಜಂಟಿ ತಂಡವನ್ನು ಅವರು ಶ್ಲಾಘಿಸಿದರು.
ಇದನ್ನೂ ಓದಿ: ಲಡಾಖ್‌ನಲ್ಲಿ ಭಾರೀ ರಸ್ತೆ ಅಪಘಾತ, ನದಿಗುರುಳಿದ 26 ಯೋಧರಿದ್ದ ಸೇನಾ ವಾಹನ, 7 ಸಾವು!
ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಕುಮಾರ್, ಯುವಕರು ಶಸ್ತ್ರಾಸ್ತ್ರಗಳನ್ನು ಹಿಡಿಯುವುದನ್ನು ತಡೆಯುವಲ್ಲಿ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಸ್ಥಳೀಯ ಭಯೋತ್ಪಾದಕ ನೇಮಕಾತಿಯನ್ನು ತಡೆಯಲು ಬಹು ಆಯಾಮದ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಯುವಕರನ್ನು ಭಯೋತ್ಪಾದನೆಯತ್ತ ಪ್ರೇರೇಪಿಸುವ ಮತ್ತು ಆಮಿಷ ಒಡ್ಡುವವರನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆ (PSA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. "ನಾವು ಹೊಸ ನೇಮಕಾತಿಗಳನ್ನು ತಾಂತ್ರಿಕ ಕಣ್ಗಾವಲು ಮೂಲಕ ಟ್ರ್ಯಾಕ್ ಮಾಡುತ್ತಿದ್ದೇವೆ ಮತ್ತು ಅವರನ್ನು ಮರಳಿ ಕರೆತರುತ್ತಿದ್ದೇವೆ" ಎಂದು ಐಜಿಪಿ ಹೇಳಿದರು.