ಶಾರುಖ್ ಖಾನ್ ನನಗೆ ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ರು ಎಂದ ಅಸ್ಸಾಂ ಸಿಎಂ..!
ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಮತ್ತು ಅವರ ಚಿತ್ರ 'ಪಠಾಣ್' 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆಯನ್ನು ಕೇಸರಿ ಬಿಕಿನಿಯಲ್ಲಿ ತೋರಿಸಿದ್ದಕ್ಕಾಗಿ ವಿರೋಧ ಎದುರಿಸುತ್ತಿದೆ. ವಿಶ್ವಹಿಂದೂ ಪರಿಷತ್ ಸೇರಿದಂತೆ ಹಲವು ಮುಖಂಡರು ಚಿತ್ರ ನಿಷೇಧಕ್ಕೆ ಆಗ್ರಹಿಸಿದ್ದಾರೆ.
ಗುವಾಹಟಿ (ಜನವರಿ 22, 2023): ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರಮಂದಿರದಲ್ಲಿ ಹಿಂಸಾಚಾರದ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ಯಾರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಆದರೆ, ಒಂದು ದಿನದ ಬಳಿಕ, ಶಾರುಖ್ ಖಾನ್ ಅವರೊಂದಿಗೆ ಪಠಾಣ್ ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರದಲ್ಲಿ ಹಿಂಸಾಚಾರದ ಕುರಿತು ಭಾನುವಾರ ಮಾತನಾಡಿದ್ದೇನೆ, ಅವರ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ನಟ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಅಸ್ಸಾಂ ಸಿಎಂ ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್‌ನೊಂದಿಗೆ ಮಾತನಾಡಿರುವುದನ್ನು ದೃಢೀಕರಿಸಿದ ಹಿಮಂತ ಬಿಸ್ವಾ ಶರ್ಮಾ, ಬಾಲಿವುಡ್ ನಟ ಶಾರುಖ್ ಖಾನ್ (@iamsrk) ನನಗೆ ಕರೆ ಮಾಡಿದರು ಮತ್ತು ನಾವು ಇಂದು ನಸುಕಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ತಮ್ಮ ಚಿತ್ರದ ಪ್ರದರ್ಶನವಾಗುವ ಥಿಯೇಟಟರ್‌ಗೆ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ನಾವು ವಿಚಾರಣೆ ನಡೆಸುತ್ತೇವೆ ಮತ್ತು ಅಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಮಗಳೊಂದಿಗೆ ಪಠಾಣ್ ಚಿತ್ರ ವೀಕ್ಷಿಸಿ ಎಂದು ಶಾರುಖ್ ಖಾನ್‌ಗೆ ಮಧ್ಯಪ್ರದೇಶ ಸ್ಪೀಕರ್ ಸವಾಲು..!
ಶಾರುಖ್ ಯಾರೆಂಬುದೇ ನನಗೆ ಗೊತ್ತಿಲ್ಲ: ಅಸ್ಸಾಂ ಸಿಎಂ
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಕುರಿತಾಗಿ ವಿವಾದಗಳು ಉಂಟಾಗಿರುವ ಬೆನ್ನಲ್ಲೇ, ‘ಶಾರುಖ್ ಖಾನ್ ಯಾರೆಂಬುದೇ ನನಗೆ ಗೊತ್ತಿಲ್ಲ. ಅವರ ಸಿನಿಮಾ ‘ಪಠಾಣ್’ ಬಗ್ಗೆ ನನಗೇನು ತಿಳಿದಿಲ್ಲ’ ಎಂದು ಶನಿವಾರ ಅಸ್ಸಾಂ ಸಿಎಂ ಹೇಳಿದ್ದರು. ಶುಕ್ರವಾರ ಸಿನಿಮಾ ಬಿಡುಗಡೆಯಾದ ವೇಳೆ ಬಜರಂಗ ದಳದ ಕಾರ್ಯಕರ್ತರು ಥಿಯೇಟರ್ನಲ್ಲಿ ನಡೆಸಿದ ದಾಂಧಲೆಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮಸ್ಯೆ ಕುರಿತಾಗಿ ಶಾರುಖ್ ಖಾನ್ ನನಗೆ ಯಾವುದೇ ಕರೆ ಮಾಡಿಲ್ಲ. ಅವರು ಕರೆ ಮಾಡಿದರೆ, ವಿಷಯವೇನು ಎಂಬುದನ್ನು ನಾನು ಪರಿಶೀಲಿಸುತ್ತೇನೆ. ಈ ವಿಷಯದಲ್ಲಿ ಯಾವುದಾದರೂ ಕಾನೂನಿಗೆ ವಿರುದ್ಧವಾದ ಘಟನೆಗಳು ಜರುಗಿದ್ದರೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಹ ಹೇಳಿದ್ದರು.
ಪಠಾಣ್ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಬಜರಂಗದಳದ ಪ್ರತಿಭಟನೆಯ ಬಗ್ಗೆ ಕೇಳಿದ್ದಕ್ಕೆ ಹಿಮಂತ ಬಿಸ್ವ ಶರ್ಮಾ ಅವರು ಶನಿವಾರ ಸುದ್ದಿಗಾರರಿಗೆ ಈ ರೀತಿ ಹೇಳಿದ್ದರು. ಶುಕ್ರವಾರ ಅಸ್ಸಾಂನ ಗುವಾಹಟಿ ನಗರದ ನರೇಂಗಿಯಲ್ಲಿ ಚಿತ್ರ ಪ್ರದರ್ಶನಗೊಳ್ಳಲಿರುವ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ ಭಜರಂಗದಳದ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನು ಎತ್ತಿದ್ದರು. ಬಲಪಂಥೀಯ ಗುಂಪಿನ ಸ್ವಯಂಸೇವಕರು ಚಿತ್ರದ ಪೋಸ್ಟರ್‌ಗಳನ್ನು ಹರಿದು ಸುಟ್ಟು ಹಾಕಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಈ ಬಗ್ಗೆ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ಹಿಂದೂಗಳ ಬಳಿಕ ಪಠಾಣ್‌ಗೆ ಮುಸ್ಲಿಂ ಸಂಘಟನೆಗಳಿಂದಲೂ ವಿರೋಧ
ಅಲ್ಲದೆ, ಶಾರುಖ್ ಖಾನ್ ಬಾಲಿವುಡ್ ಸೂಪರ್‌ಸ್ಟಾರ್ ಎಂದು ಮಾಧ್ಯಮದವರು ಹೇಳಿದಾಗ, ರಾಜ್ಯದ ಜನರು ಅಸ್ಸಾಮಿಗಳ ಬಗ್ಗೆ ಕಾಳಜಿ ವಹಿಸಬೇಕೇ ಹೊರತು ಹಿಂದಿ ಚಿತ್ರಗಳ ಬಗ್ಗೆ ಅಲ್ಲ ಎಂದೂ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.
ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಮತ್ತು ಅವರ ಚಿತ್ರ 'ಪಠಾಣ್' 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆಯನ್ನು ಕೇಸರಿ ಬಿಕಿನಿಯಲ್ಲಿ ತೋರಿಸಿದ್ದಕ್ಕಾಗಿ ವಿರೋಧ ಎದುರಿಸುತ್ತಿದೆ. ವಿಶ್ವಹಿಂದೂ ಪರಿಷತ್ ಸೇರಿದಂತೆ ಹಲವು ಮುಖಂಡರು ಚಿತ್ರ ನಿಷೇಧಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಸಿನಿಮಾಕ್ಕೆ ಮುಗಿಯದ ಗೋಳು; ಪಠಾಣ್‌ಗೂ ಕಾಡುತ್ತಿದೆ ನಿಷೇಧದ ಭೀತಿ!