* ಮುಂಬೈ-ದುರ್ಗಾಪುರ ವಿಮಾನದಲ್ಲಿ ಮೇ 1ರಂದು ಘಟನೆ* ಸ್ಪೈಸ್‌ಜೆಟ್‌ ವಿಮಾನದಲ್ಲಿ ತೀವ್ರ ಟಬ್ರ್ಯುಲೆನ್ಸ್‌: 15 ಮಂದಿಗೆ ಗಾಯ!* ಕೆಲವರ ತಲೆ, ಬೆನ್ನುಮೂಳೆಗೆ ಹಾನಿ: ಆಸ್ಪತ್ರೆಯಲ್ಲಿ ಚಿಕಿತ್ಸೆ* ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ನವದೆಹಲಿ(ಮೇ.03): ಮುಂಬೈನಿಂದ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ತೀವ್ರ ಟಬ್ರ್ಯುಲೆನ್ಸ್‌ ಉಂಟಾಗಿ 15 ಮಂದಿ ಗಾಯಗೊಂಡಿರುವ ಆತಂಕಕಾರಿ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಸ್ತೃತ ತನಿಖೆಗೆ ಆದೇಶಿಸಿದೆ. ಗಾಯಗೊಂಡವರಲ್ಲಿ ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನು ಕೆಲವರು ಬೆನ್ನುಮೂಳೆ ಮತ್ತು ತಲೆಗೆ ಉಂಟಾದ ಹಾನಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ.

ಭಾನುವಾರ ಸಂಜೆ 5 ಗಂಟೆಗೆ ಮುಂಬೈನಿಂದ ಹೊರಟ ಸ್ಪೈಸ್‌ಜೆಟ್‌ನ ಎಸ್‌ಜಿ-945 ಬೋಯಿಂಗ್‌ 189 ಸೀಟುಗಳ ವಿಮಾನ, ರಾತ್ರಿ 7.15ರ ಸುಮಾರಿಗೆ ದುರ್ಗಾಪುರದಲ್ಲಿ ಲ್ಯಾಂಡಿಂಗ್‌ ಆಗುತ್ತಿತ್ತು. ಆ ಸಮಯದಲ್ಲಿ ತೀವ್ರ ಟಬ್ರ್ಯುಲೆನ್ಸ್‌ ಉಂಟಾಯಿತು. ಪ್ರಯಾಣಿಕರೆಲ್ಲ ಸೀಟ್‌ ಬೆಲ್ಟ್‌ ಕಟ್ಟಿಕೊಂಡಿದ್ದರು. ಹಾಗೇ ಕುಳಿತಿರಿ ಎಂದು ಪೈಲಟ್‌ ಹಾಗೂ ಸಿಬ್ಬಂದಿ ಸೂಚನೆ ನೀಡುತ್ತಿದ್ದರು. ಆದರೂ ತೀವ್ರ ಕುಲುಕಾಟದಿಂದ 12 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಸ್ಪೈಸ್‌ಜೆಟ್‌ ಸಂಸ್ಥೆ ತಿಳಿಸಿದೆ.

ಈ ಕುರಿತು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಡಿಜಿಸಿಎಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Scroll to load tweet…

ಏನಿದು ಟಬ್ರ್ಯುಲೆನ್ಸ್‌?

ವಿಮಾನವು ದಟ್ಟಮೋಡದೊಳಗೆ ಹೋದಾಗ, ಗಾಳಿಯ ಒತ್ತಡ ಅಥವಾ ವೇಗದಲ್ಲಿ ತೀವ್ರ ವ್ಯತ್ಯಾಸವಾದಾಗ ಹೀಗೆ ಅನೇಕ ಕಾರಣಗಳಿಂದ ವಿಮಾನವು ಗಡಗಡ ಅಲುಗಾಡಿದಂತಾಗಿ ಕೆಳಕ್ಕೆ ಕುಸಿದ ಅನುಭವವಾಗುತ್ತದೆ. ಅದನ್ನೇ ಟಬ್ರ್ಯುಲೆನ್ಸ್‌ ಎನ್ನಲಾಗುತ್ತದೆ. ಇಂತಹ ಟಬ್ರ್ಯುಲೆನ್ಸ್‌ಗಳು ವಿಮಾನಗಳ ಪ್ರತಿ ಪ್ರಯಾಣದಲ್ಲೂ ಸಾಮಾನ್ಯ. ಆದರೆ ಮುಂಬೈ-ದುರ್ಗಾಪುರ ವಿಮಾನದಲ್ಲಿ ಟಬ್ರ್ಯುಲೆನ್ಸ್‌ನಿಂದ ಪ್ರಯಾಣಿಕರು ಗಾಯಗೊಳ್ಳುವ ಮಟ್ಟಿಗೆ ಹಾನಿಯಾಗಿರುವುದು ಆತಂಕಕಾರಿಯಾಗಿದೆ.