ಬ್ರಹ್ಮೋಸ್ 2 ಕ್ಷಿಪಣಿ ಮತ್ತು ಬಿ-2 ಬಾಂಬರ್ ಎರಡೂ ಶಕ್ತಿಶಾಲಿ ಆಯುಧಗಳಾಗಿದ್ದು, ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿವೆ. ಒಂದು ವೇಗದ ದಾಳಿಗೆ ಸೂಕ್ತವಾದರೆ, ಇನ್ನೊಂದು ರಹಸ್ಯ ಕಾರ್ಯಾಚರಣೆಗಳಿಗೆ ಪರಿಣಾಮಕಾರಿ. ಈ ಲೇಖನದಲ್ಲಿ, ಈ ಎರಡು ಆಯುಧಗಳ ವೆಚ್ಚ, ಉದ್ದೇಶ ಮತ್ತು ಪಾತ್ರಗಳನ್ನು ಹೋಲಿಸಲಾಗಿದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ರಕ್ಷಣಾ ತಂತ್ರಜ್ಞಾನದ ವಿಚಾರಕ್ಕೆ ಬಂದಾಗ, ಕೆಲವು ಜನರು ಭಾರತದ ಬ್ರಹ್ಮೋಸ್ 2 ಕ್ಷಿಪಣಿ ಉತ್ತಮವೇ, ಅಥವಾ ಅಮೆರಿಕಾದ ಬಿ-2 ಬಾಂಬರ್ ಉತ್ತಮವೇ? ಎಂದು ಪ್ರಶ್ನಿಸುತ್ತಾರೆ. ಆದರೆ, ಇದು ಒಂದು ರೀತಿಯಲ್ಲಿ ಮಿಂಚನ್ನು ಮೌನವಾದ ಸಾಗಾಣಿಕಾ ವಿಮಾನದ ಜೊತೆ ಹೋಲಿಕೆ ಮಾಡಿ ನೋಡಿದಂತಾಗುತ್ತದೆ! ಎರಡೂ ಅತ್ಯಂತ ಶಕ್ತಿಶಾಲಿ ವ್ಯವಸ್ಥೆಗಳೇನೋ ನಿಜ. ಆದರೆ, ಯುದ್ಧದಲ್ಲಿ ಅವೆರಡೂ ನಿರ್ವಹಿಸುವ ಪಾತ್ರಗಳು ಅತ್ಯಂತ ವಿಭಿನ್ನವಾಗಿವೆ. ಇಂದಿನ ರಕ್ಷಣಾ ಕಾರ್ಯತಂತ್ರಗಳನ್ನು ಅರ್ಥ ಮಾಡಿಕೊಳ್ಳಲು, ಮೊದಲಿಗೆ ನಾವು ಇವೆರಡೂ ಆಯುಧಗಳು ಎಷ್ಟು ವಿಭಿನ್ನವಾದವು ಎಂಬುದನ್ನು ತಿಳಿದುಕೊಳ್ಳಬೇಕು.
ಬ್ರಹ್ಮೋಸ್ - 2 ಮತ್ತು ಬಿ-2 ಬಾಂಬರ್: ಏನಿವು?
ಬ್ರಹ್ಮೋಸ್ 2 ಒಂದು ಹೈಪರ್‌ಸಾನಿಕ್ ಕ್ಷಿಪಣಿಯಾಗಿದ್ದು, ರಷ್ಯಾದ ಸಹಾಯದಿಂದ ಭಾರತದಲ್ಲೇ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು ಅಸಾಧಾರಣ ವೇಗವಾಗಿ ಸಾಗುವ ಸಲುವಾಗಿ ನಿರ್ಮಿಸಲಾಗಿದ್ದು, ಇದು ಬಹಳ ವೇಗವಾಗಿ, ಅಂದರೆ ದೆಹಲಿಯಿಂದ ಮುಂಬೈಗೆ ಕೇವಲ 20 ನಿಮಿಷಗಳಲ್ಲಿ ತಲುಪಬಲ್ಲದು.
ಅಂದರೆ, ಇದು ತನ್ನ ಗುರಿಯನ್ನು ಅತ್ಯಂತ ಹೆಚ್ಚಿನ ವೇಗ ಮತ್ತು ಶಕ್ತಿಯಿಂದ ಅಪ್ಪಳಿಸಿ, ಆ ಸ್ಫೋಟದಲ್ಲಿ ಸ್ವತಃ ನಾಶವಾಗುತ್ತದೆ.
ಇನ್ನು ಅಮೆರಿಕಾ ನಿರ್ಮಾಣದ ಬಿ-2 ಬಾಂಬರ್ ಒಂದು ಬೃಹತ್ತಾದ, ಸ್ಟೆಲ್ತ್ ವಿಮಾನವಾಗಿದೆ.
ಇದನ್ನು ರೇಡಾರ್ ಕಣ್ಣುಗಳನ್ನು ತಪ್ಪಿಸಿ, ವಿವಿಧ ಖಂಡಗಳ ಮೇಲೆ ರಹಸ್ಯವಾಗಿ ಸಾಗಿ ಹೋಗುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ.
ಬಿ-2 ಬಾಂಬರ್ ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ, ಅಪಾರ ಪ್ರಮಾಣದ ಬಾಂಬ್‌ಗಳನ್ನು ಒಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಒಂದು ಬಾರಿಗೆ ಆಗಸಕ್ಕೆ ಏರಿದರೆ, ಒಂದೇ ಹಾರಾಟದಲ್ಲಿ ಹಲವು ಗುರಿಗಳ ಮೇಲೆ ದಾಳಿ ನಡೆಸಬಲ್ಲದು.
ವೇಗ vs ಸ್ಟೆಲ್ತ್: ಎರಡು ವಿಭಿನ್ನ ಶಕ್ತಿಗಳು
ಬ್ರಹ್ಮೋಸ್ 2 ಕ್ಷಿಪಣಿಯ ಬಹುದೊಡ್ಡ ಶಕ್ತಿ ಎಂದರೆ ಅದರ ವೇಗ.
ಒಂದು ಬಾರಿ ಉಡಾವಣೆಗೊಂಡ ಬಳಿಕ, ಇದು ಎಷ್ಟು ವೇಗವಾಗಿ ಸಾಗುತ್ತದೆ ಎಂದರೆ, ಇದನ್ನು ತಡೆಯುವುದು ಬಹುತೇಕ ಅಸಂಭವ. ಬ್ರಹ್ಮೋಸ್ 2 ಕ್ಷಿಪಣಿಯನ್ನು ತಡೆಯುವುದು ಎಂದರೆ, ಸಾಗಿ ಬರುವ ಗುಂಡನ್ನು ಬರಿ ಕೈಯಲ್ಲಿ ಹಿಡಿಯಲು ಪ್ರಯತ್ನಿಸಿದಂತಾಗುತ್ತದೆ. ಇದು ಕ್ಷಿಪ್ರವಾಗಿ ಮುಖ್ಯ ಗುರಿಗಳಾದ ಶತ್ರುಗಳ ಮುಖ್ಯ ಕೇಂದ್ರಗಳು ಅಥವಾ ಕ್ಷಿಪಣಿ ನೆಲೆಗಳ ಮೇಲೆ ದಾಳಿ ನಡೆಸಲು ಅತ್ಯಂತ ಸೂಕ್ತವಾಗಿದೆ.
ಬಿ-2 ಬಾಂಬರ್‌ನ ಶಕ್ತಿ ಎಂದರೆ ಅದರ ಸ್ಟೆಲ್ತ್ ಸಾಮರ್ಥ್ಯ.
ಬಿ-2 ಬಾಂಬರ್ ಶತ್ರುಗಳ ಕಣ್ಣಿಗೆ ಬೀಳದ ರೀತಿಯಲ್ಲಿ ಶತ್ರು ಪ್ರದೇಶಗಳ ಮೇಲೆ ಹಾರಾಟ ನಡೆಸುತ್ತಾ, ಹಲವಾರು ಬಾಂಬ್‌ಗಳನ್ನು ಎಸೆದು, ಸುರಕ್ಷಿತವಾಗಿ ತನ್ನ ಸ್ಥಾನಕ್ಕೆ ಮರಳಿ ಹಾರಾಟ ನಡೆಸಬಲ್ಲದು. ಯೋಜನೆಯ ಸಂದರ್ಭದಲ್ಲಿ ಅದು ತನ್ನ ಗುರಿಗಳನ್ನು ಬೇಕಾದರೆ ಬದಲಾಯಿಸಬಲ್ಲದು.
ಇದನ್ನು ಸುದೀರ್ಘವಾದ, ಸಂಕೀರ್ಣವಾದ ಕಾರ್ಯಾಚರಣೆಗಳಿಗಾಗಿ ಅಭಿವೃದ್ಧಿ ಪಡಿಸಲಾಗಿದೆ.
ಯುದ್ಧದಲ್ಲಿ ವಿಭಿನ್ನ ಬಳಕೆ
ಬಿ-2 ಬಾಂಬರ್ ಅಂದಾಜು 40,000 ಪೌಂಡ್ ತೂಕದಷ್ಟು ಬಾಂಬ್‌ಗಳನ್ನು ಒಯ್ಯಬಲ್ಲದಾಗಿದ್ದು, ಇದು ಹಲವಾರು ಕ್ಷಿಪಣಿಗಳು ಜೊತೆಯಾಗಿ ಒಯ್ಯುವುದಕ್ಕಿಂತಲೂ ಹೆಚ್ಚಿನ ತೂಕವಾಗಿದೆ. ಬಿ-2 ಬಾಂಬರ್ ವಿಮಾನಗಳು ಹಲವಾರು ಗಂಟೆಗಳ ಕಾಲ ಗಾಳಿಯಲ್ಲೇ ಉಳಿದು, ಬಹುದೊಡ್ಡ ದಾಳಿಗಳನ್ನು ನಡೆಸಬಲ್ಲವು.
ಬ್ರಹ್ಮೋಸ್ 2 ಒಂದೇ ದಾಳಿಯ ಆಯುಧವಾಗಿದೆ. ಅಂದರೆ, ಇದನ್ನು ಒಂದು ಬಾರಿ ಉಡಾಯಿಸಿದರೆ, ಅದನ್ನು ಮರಳಿ ಕರೆಸಿಕೊಳ್ಳಲು ಸಾಧ್ಯವಿಲ್ಲ. ಸಮಯ ಕಡಿಮೆ ಇದ್ದು, ಕ್ಷಿಪ್ರ ಕ್ರಮ ಕೈಗೊಳ್ಳಬೇಕಾದ ಸಂದರ್ಭದಲ್ಲಿ ಇದು ಬಹಳಷ್ಟು ಪ್ರಯೋಜನಕಾರಿ.
ವೆಚ್ಚ ಮತ್ತು ಉದ್ದೇಶ
ಬಿ-2 ಬಾಂಬರ್ ವಿಪರೀತ ದುಬಾರಿ ವಿಮಾನವಾಗಿದ್ದು, ಪ್ರತಿಯೊಂದು ವಿಮಾನಕ್ಕೂ ತಲಾ ಅಂದಾಜು 2.1 ಬಿಲಿಯನ್ ಡಾಲರ್ (17,000 ಕೋಟಿ) ವೆಚ್ಚ ತಗಲುತ್ತದೆ. ಇದಕ್ಕೆ ನುರಿತ ಪೈಲಟ್‌ಗಳು, ದೊಡ್ಡದಾದ ಬೆಂಬಲ ತಂಡದ ಅಗತ್ಯವಿದ್ದು, ವಿಮಾನದ ನಿರ್ವಹಣೆಯೂ ಅತ್ಯಂತ ವೆಚ್ಚದಾಯಕವಾಗಿದೆ.
ಇದು ಜಗತ್ತಿನ ಎಲ್ಲೆಡೆಯೂ ತನ್ನ ಮಿಲಿಟರಿ ಸಾಮರ್ಥ್ಯ ಪ್ರದರ್ಶಿಸಲು ಬಯಸುವ ಅಮೆರಿಕಾದಂತಹ ದೇಶಕ್ಕೆ ಸೂಕ್ತವಾಗಿದೆ.
ಕ್ಷಿಪಣಿಗಳ ವೆಚ್ಚಕ್ಕೆ ಹೋಲಿಸಿದರೆ ಬ್ರಹ್ಮೋಸ್ 2 ದುಬಾರಿ ಕ್ಷಿಪಣಿಯಾಗಿದ್ದರೂ, ಬಿ-2 ಬಾಂಬರ್‌ಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದಾಯಕವಾಗಿದೆ. ಬ್ರಹ್ಮೋಸ್ 2 ಕ್ಷಿಪಣಿಯನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಪೈಲಟ್ ಅಗತ್ಯವಿಲ್ಲ. ಜೊತೆಗೆ, ಇದರ ಉಡಾವಣೆಯೂ ಬಹಳ ಸುಲಭವಾಗಿದೆ. ಬ್ರಹ್ಮೋಸ್ 2 ಕ್ಷಿಪಣಿಯನ್ನು ಭಾರತದ ಪ್ರದೇಶಗಳನ್ನು ಕ್ಷಿಪ್ರವಾಗಿ ಮತ್ತು ಸಮರ್ಥವಾಗಿ ರಕ್ಷಿಸುವ ಸಲುವಾಗಿ ನಿರ್ಮಿಸಲಾಗಿದೆ.
ಎರಡೂ ಶಕ್ತಿಶಾಲಿ ಆಯುಧಗಳೇ - ಆದರೆ ತಮ್ಮದೇ ವಿಧಾನದಲ್ಲಿ!
ಬ್ರಹ್ಮೋಸ್ 2 ಮತ್ತು ಬಿ-2 ಬಾಂಬರ್‌ಗಳಲ್ಲಿ ಯಾವುದು ಉತ್ತಮ ಎಂದು ಪ್ರಶ್ನಿಸುವುದೇ ತಪ್ಪು. ಅವೆರಡೂ ಪರಸ್ಪರ ಶತ್ರುಗಳಲ್ಲ. ಬದಲಿಗೆ, ಅತ್ಯಂತ ಭಿನ್ನವಾದ ಕಾರ್ಯವನ್ನು ನಿರ್ವಹಿಸುವ ಆಯುಧಗಳಾಗಿವೆ.
ಬ್ರಹ್ಮೋಸ್ 2 ಒಂದು ಚೂಪಾದ, ಬಹಳ ವೇಗವಾದ ಬಾಣದಂತಿದ್ದು, ಗುರಿಯ ಮೇಲೆ ವೇಗವಾಗಿ ಮತ್ತು ನಿಖರವಾಗಿ ದಾಳಿ ನಡೆಸುತ್ತದೆ.
ಆದರೆ ಬಿ-2 ಬಾಂಬರ್ ಮೌನವಾದ, ಶಕ್ತಿಶಾಲಿಯಾದ ವಿಮಾನವಾಗಿದ್ದು, ಹಲವಾರು ಬಾಂಬ್‌ಗಳನ್ನು ಹೊಂದಿ ದೀರ್ಘಾವಧಿಯ ಯೋಜನೆಗೆ ಸೂಕ್ತವಾಗಿದೆ. ಪ್ರತಿಯೊಂದು ಆಯುಧ ಅಥವಾ ಉಪಕರಣವೂ ಸಹ ತನ್ನ ದೇಶದ ಅವಶ್ಯಕತೆಗಳು ಮತ್ತು ಗುರಿಗಳನ್ನು ಪ್ರತಿನಿಧಿಸುತ್ತದೆ.
ಭಾರತ ಸ್ಮಾರ್ಟ್ ಆದ, ಕಡಿಮೆ ವೆಚ್ಚದಾಯಕವಾದ ತಂತ್ರಜ್ಞಾನವನ್ನು ಬಳಸಿಕೊಂಡು, ಕಡಿಮೆ ಸಮಯದಲ್ಲೇ ಬಲವಾದ ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಬಯಸುತ್ತದೆ.
ಆದರೆ, ಅಮೆರಿಕಾ ಹೆಚ್ಚು ದುಬಾರಿಯಾದ, ಹೈಟೆಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು, ಜಾಗತಿಕ ಮಿಲಿಟರಿ ಶಕ್ತಿಯಾಗುವ ಗುರಿ ಹೊಂದಿದೆ.
ಇಂದಿನ ಜಗತ್ತಿನಲ್ಲಿ, ಶಕ್ತಿಶಾಲಿಯಾಗಿ ಹೊರಹೊಮ್ಮಲು ಹಲವಾರು ಮಾರ್ಗಗಳಿವೆ. ಬ್ರಹ್ಮೋಸ್ 2 ಮತ್ತು ಬಿ-2 ಬಾಂಬರ್‌ಗಳು ವಿವಿಧ ದೇಶಗಳಿಗೆ ಶಕ್ತಿ ಹಲವು ರೂಪದಲ್ಲಿ ಲಭಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿವೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
