ಗೋವಾದಲ್ಲಿ ಪ್ರವಾಸಿಗರಿಗೆ ಸುಗಮ ಸಂಚಾರಕ್ಕಾಗಿ ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ.
ಪಣಜಿ: ಗೋವಾದಲ್ಲಿ ಪ್ರವಾಸಿಗರ ಸುಗಮ ಸಂಚಾರಕ್ಕಾಗಿ ಪೊಲೀಸರು ವಿಶೇಷ ಕ್ಯೂಆರ್ ಕೋಡ್ ಪರಿಚಯಿಸಲು ಮುಂದಾಗಿದ್ದು, 12 ಗಂಟೆ ಕಾಲ ಮಾನ್ಯವಾಗಿರುವ ಈ ಕ್ಯೂಆರ್ ಕೋಡ್ ನೆರವಿನಿಂದ ಪದೇ ಪದೇ ಪೊಲೀಸರಿಗೆ ವಾಹನಗಳ ದಾಖಲೆ ತೋರಿಸಬೇಕಾದ ಅಗತ್ಯವಿರುವುದಿಲ್ಲ. ಈ ಕ್ರಮ ಜಾರಿಗೆ ತಂದ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಗೋವಾ ಪಾತ್ರವಾಗಲಿದೆ.
ಗೋವಾಕ್ಕೆ ಪ್ರವಾಸಿಗರ ಅನುಕೂಲಕ್ಕಾಗಿ ಈ ಕ್ಯೂರ್ ಕೋಡ್ ತಂದಿದ್ದು, ಇದರ ಮೂಲಕ ನೀವು ಒಮ್ಮೆ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ನಂತರ, ನಿಮ್ಮ ಪ್ರಯಾಣದಲ್ಲಿ ಪೊಲೀಸರಿಗೆ ಪದೇ ಪದೇ ತೋರಿಸುವ ಅಗತ್ಯವಿರುವುದಿಲ್ಲ. 12 ಗಂಟೆ ಈ ಕ್ಯೂಆರ್ ಕೋಡ್ ಮಾನ್ಯವಾಗಿರಲಿದ್ದು, ಪೊಲೀಸರು ಪದೇ ಪದೇ ತಪಾಸಣೆಗೆ ಮುಂದಾದರೆ , ಪ್ರವಾಸಿಗರು ಕ್ಯೂ ಆರ್ ಕೋಡ್ ತೋರಿಸಿದರೆ ಸಾಕು. ಇದುವರೆಗೆ 4 ಸಾವಿರ ಕ್ಯೂಆರ್ ಕೋಡ್‌ಗಳನ್ನು ಪೊಲೀಸರು ನೀಡಿದ್ದಾರೆ. ಗೋವಾದ ಪಡ್ರೆ ಕಾನ್ಸಿಕಾವೊ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.
ಅಸಂಘಟಿತ ವಲಯದವರೂ ಸೇರಿದಂತೆ ಸಾರ್ವತ್ರಿಕ ಪಿಂಚಣಿ ಸ್ಕೀಂ ಜಾರಿಗೆ ಕೇಂದ್ರದ ಚಿಂತನೆ
ನವದೆಹಲಿ: ಅಸಂಘಟಿತ ವಲಯದವರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಅನ್ವಯವಾಗುವಂತೆ ‘ಸಾರ್ವತ್ರಿಕ ಪಿಂಚಣಿ ಯೋಜನೆ’ಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಪ್ರಸ್ತುತ, ಕಟ್ಟಡ ನಿರ್ಮಾಣಗಾರರು, ಮನೆಕೆಲಸಗಾರರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ದೊಡ್ಡ ಉಳಿತಾಯ ಯೋಜನೆಗಳಿಂದ ಲಾಭವಾಗುತ್ತಿಲ್ಲ. ಹಾಗಾಗಿ ಇವರನ್ನೂ ಒಳಗೊಂಡಂತೆ ಹೊಸ ಯೋಜನೆ ಜಾರಿಗೆ ಮೋದಿ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಸಾರ್ವತ್ರಿಕ ಪಿಂಚಣಿ ಯೋಜನೆಯಡಿ ಜನ ಸ್ವಯಂಪ್ರೇರಿತರಾಗಿ ಉಳಿತಾಯ ಮಾಡಬಹುದಾಗಿದೆ. ಇದಕ್ಕೆ ಸರ್ಕಾರ ತನ್ನ ಯಾವುದೇ ಪಾಲು ನೀಡುವುದಿಲ್ಲ. ಜನರು ಪಾವತಿ ಮಾಡಿದ ಹಣಕ್ಕೆ ಅನುಗುಣವಾಗಿ ಅವರಿಗೆ ನಿವೃತ್ತ ವಯಸ್ಸಿನಲ್ಲಿ ಪಿಂಚಣಿ ಹಣ ಸಿಗಲಿದೆ. ದೇಶದ ಪ್ರತಿ ಪ್ರಜೆಗೂ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.
‘ಹೊಸ ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಕೆಲವು ಯೋಜನೆಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದೆ. ಯೋಜನಾ ಪ್ರಸ್ತಾವನೆ ಪೂರ್ಣಗೊಂಡ ನಂತರ, ಸಂಬಂಧಪಟ್ಟವರ ಜೊತೆ ಸಮಾಲೋಚಿಸಿ ಜಾರಿಗೆ ತರಲಾಗುವುದು’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ ಮೊದಲಾದವನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಯಾವೆಲ್ಲ ಹಳೆಯ ಯೋಜನೆಗಳನ್ನು ವಿಲೀನಗೊಳಿಸಲಾಗುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
