Asianet Suvarna News Asianet Suvarna News

‘ಬಾಹ್ಯಾಕಾಶ ಮತ್ತು ಸಂರಕ್ಷಣೆ’: ಕನ್ನಡ ಭಾಷೆಯಲ್ಲಿ AICTE-VAANI ಯೋಜನೆಯಡಿ ಮುಂಬೈನಲ್ಲಿ ವಿಚಾರ ಸಂಕಿರಣ

ಕೆ.ಜೆ.ಸೋಮಯ್ಯ ತಾಂತ್ರಿಕ ವಿದ್ಯಾಲಯವು ಬಾಹ್ಯಾಕಾಶ ಮತ್ತು ಸಂರಕ್ಷಣೆ ಎಂಬ ವಿಷಯದಲ್ಲಿ ಕನ್ನಡ ಭಾಷೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣವು ಸೆಪ್ಟೆಂಬರ್ 19 ಮತ್ತು 20ರಂದು ಹೊರನಾಡಾದ ಮುಂಬೈನ ಸಯಾನ್ ನಲ್ಲಿರುವ ಸೋಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಹು ಯಶಸ್ವಿಯಾಗಿ ಜರುಗಿತು. 

Space and Conservation Seminar in Kannada language under AICTE VAANI project in Mumbai gvd
Author
First Published Sep 21, 2024, 6:56 PM IST | Last Updated Sep 21, 2024, 6:56 PM IST

ವರದಿ: ವಿದ್ಯಾ ರಾಮಕೃಷ್ಣ

ಮುಂಬೈ (ಸೆ.21): ಕೆ.ಜೆ.ಸೋಮಯ್ಯ ತಾಂತ್ರಿಕ ವಿದ್ಯಾಲಯವು ಬಾಹ್ಯಾಕಾಶ ಮತ್ತು ಸಂರಕ್ಷಣೆ ಎಂಬ ವಿಷಯದಲ್ಲಿ ಕನ್ನಡ ಭಾಷೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣವು ಸೆಪ್ಟೆಂಬರ್ 19 ಮತ್ತು 20ರಂದು ಹೊರನಾಡಾದ ಮುಂಬೈನ ಸಯಾನ್ ನಲ್ಲಿರುವ ಸೋಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಹು ಯಶಸ್ವಿಯಾಗಿ ಜರುಗಿತು. ಕನ್ನಡ ಭಾಷೆಯನ್ನು ಉನ್ನತ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯಗೊಳಿಸುವ ಮಹತ್ತ್ವದ ಉದ್ದೇಶದಿಂದ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯು (AICTE) ಹಮ್ಮಿಕೊಂಡಿರುವ VAANI (ವೈಬ್ರೆಂಟ್ ಅಡ್ವಕಸಿ ಫಾರ್ ಅಡ್ವಾನ್ಸ್ಮೆಂಟ್ ಅಂಡ್ ನರ್ಚರಿಂಗ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್) ಯೋಜನೆಯಡಿಯಲ್ಲಿ ಆಯೋಜಿತವಾಗಿದ್ದ ಈ ಸಂಕಿರಣಕ್ಕೆ ಆ ಸಂಸ್ಥೆಯ ಅನುದಾನ ಮತ್ತು ಮಾನ್ಯತೆಗಳು ದೊರೆತಿವೆ. 

ಸಂಕಿರಣದಲ್ಲಿ ಇಸ್ರೋ ಮತ್ತಿತರ ಸಂಸ್ಥೆಗಳ ವಿಜ್ಞಾನಿಗಳು, ನೌಕಾಪಡೆಯ ನಿವೃತ್ತ ಕಮೋಡೋರ್ ಹಾಗೂ  ಸೋಮಯ್ಯ ತಾಂತ್ರಿಕ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮೊದಲ ದಿನದ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರೊಡಗೂಡಿ ದೀಪ ಬೆಳಗಿಸಿ ಮಾತನಾಡಿದ ಸೋಮಯ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವಿವೇಕ್ ಸುನ್ನಪ್ಪವಾರ್ ಅವರು, ಕನ್ನಡದಲ್ಲಿ ನಡೆಯುತ್ತಿರುವ ಈ ಸಂಕಿರಣದ ಕುರಿತು ಅಭಿಮಾನ ವ್ಯಕ್ತಪಡಿಸಿ ಶುಭ ಕೋರಿದರು. ಎಲೆಕ್ಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ.ಜಯಶ್ರೀ ಖಾನಾಪುರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. 

ನಾನು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ, ಭ್ರಷ್ಟರ ವಿರುದ್ಧ ಹೋರಾಡುವೆ: ವಕೀಲ ದೇವರಾಜೇಗೌಡ

ಎರಡು ದಿನಗಳಲ್ಲಿ ಒಟ್ಟು ಐವರು ತಜ್ಞರು ಎಂಟು ಪ್ರತ್ಯೇಕ ಉಪನ್ಯಾಸಗಳಲ್ಲಿ ತಮ್ಮ ತಮ್ಮ ಕ್ಷೇತ್ರದ ವಿಚಾರಗಳನ್ನು ಕೂಲಂಕಷವಾಗಿ ಮಂಡಿಸಿದರು. ಹೈದರಾಬಾದಿನ ಧ್ರುವ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ನ ಏವಿಯಾನಿಕ್ಸ್ ವಿಭಾಗದಲ್ಲಿ ನಿರ್ವಾಹಕರಾಗಿರುವ ಅವಿನಾಶ್ ವೈದ್ಯ ಅವರು ಬಾಹ್ಯಾಕಾಶದ ಬಳಕೆಗಾಗಿ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ವಿನ್ಯಾಸಗೊಳಿಸುವಾಗ ಎದುರಿಸಬೇಕಾದ ತಾಂತ್ರಿಕ ಸವಾಲುಗಳು ಮತ್ತು ಆ ನಿಟ್ಟಿನಲ್ಲಿ ಆಗಿರುವ ಹೊಸ ಆವಿಷ್ಕಾರಗಳ ಕುರಿತು ಮಾತನಾಡಿದರು. ಬಾಹ್ಯಾಕಾಶಕ್ಕೆ ಮೊತ್ತ ಮೊದಲಿಗೆ ಕಳುಹಿಸಲಾದ ಸ್ಪುಟ್ನಿಕ್ ಕೃತಕ ಉಪಗ್ರಹದಲ್ಲಿನ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಇಂದಿನ ಸಾಧನಗಳೊಂದಿಗೆ ಹೋಲಿಸಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆದ ವೇಗದ ಬದಲಾವಣೆಗಳನ್ನು ಕುರಿತು ಹೇಳುತ್ತಾ, ಎಲೆಕ್ಟ್ರಾನಿಕ್ ಚಿಪ್, ಬ್ಯಾಟರಿ ಮತ್ತು ಇತರ ಸಾಧನಗಳ ಕುಗ್ಗಿದ ಗಾತ್ರ ಮತ್ತು ಹಿಗ್ಗಿದ ಕಾರ್ಯಕ್ಷಮತೆಯನ್ನು ಸೋದಾಹರಣವಾಗಿ ಅವರು ವಿವರಿಸಿದರು.

Space and Conservation Seminar in Kannada language under AICTE VAANI project in Mumbai gvd

ಹಿರಿಯ ಖಗೋಳ ಭೌತಶಾಸ್ತ್ರಜ್ಞರು ಹಾಗೂ ಟಿ.ಐ.ಎಫ್.ಆರ್.ನ ನಿವೃತ್ತ ವಿಜ್ಞಾನಿಯಾದ ಡಾ.ವಿಶ್ವನಾಥ ಪಾಲಹಳ್ಳಿ ಅವರು ಎರಡು ಉಪನ್ಯಾಸಗಳಲ್ಲಿ ಸೌರ ಮಂಡಲದ ಗ್ರಹಗಳು ಮತ್ತು ಉಪಗ್ರಹಗಳ ವೈಶಿಷ್ಟ್ಯಗಳು, ಬಹಿರ್ಗ್ರಹಗಳು (ಎಕ್ಸೋಪ್ಲಾನೆಟ್ಸ್) ಮತ್ತು ಅನ್ಯ ಗ್ರಹದ ಜೀವಿಗಳ (ಏಲಿಯನ್) ಕುರಿತು ಕುತೂಹಲಕರವಾದ ಮಾಹಿತಿಯನ್ನು ಹಂಚಿಕೊಂಡರು. ಕ್ಷುದ್ರಗ್ರಹಗಳು ಮತ್ತು ಅವುಗಳಿಂದ ಭೂಮಿಗೆ ಆಗುವ ಒಳಿತು, ಕೆಡಕುಗಳ ಕುರಿತೂ ಅವರು ಸುದೀರ್ಘವಾಗಿ ಚರ್ಚಿಸಿದರು. ಕನ್ನಡದ ಅಭಿಮಾನವನ್ನು ಕೇವಲ ಈ ಒಂದು ಗೋಷ್ಠಿಗೆ ಮೀಸಲಾಗಿರಿಸದೆ, ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಬರೆದು, ಪ್ರಕಟಿಸಿ, ಪ್ರಚಲಿತಕ್ಕೆ ತರುವ ಮೂಲಕ ಮಾತೃ ಭಾಷೆಯಲ್ಲಿ ಉನ್ನತ ಶಿಕ್ಷಣದ ಪರಿಕಲ್ಪನೆಯನ್ನು ರೂಢಿಗೆ ತರುವ ನಿಟ್ಟಿನಲ್ಲಿ ಮುಂದುವರೆಯಬೇಕೆಂದು ಅವರು ಕಿರಿಯರಿಗೆ ಈ ಸಂದರ್ಭದಲ್ಲಿ ಕಳಕಳಿಯಿಂದ ಮನವಿ ಮಾಡಿದರು.

ಇಸ್ರೋದ ನಿವೃತ್ತ ವಿಜ್ಞಾನಿ ಮತ್ತು ಅಸೋಸಿಯೇಟ್ ಡೈರೆಕ್ಟರ್ (ಕೃಷಿ) ಆದ ಡಾ. ಕೆ.ಆರ್.ಮಂಜುನಾಥ್ ಅವರು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಆದ ಅಭಿವೃದ್ಧಿ, ಈ ಕ್ಷೇತ್ರದಲ್ಲಿ ಭಾರತದ, ವಿಶೇಷವಾಗಿ ಇಸ್ರೋದ ಸಾಧನೆಗಳು ಮತ್ತು ಇವುಗಳಿಂದ ಉಂಟಾಗುವ ಪ್ರಚಂಡವಾದ ಧನಾತ್ಮಕ ಬದಲಾವಣೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಕೃತಕ ಉಪಗ್ರಹಗಳು ಭೂಮಿಗೆ ರವಾನಿಸುವ ದತ್ತಾಂಶದಿಂದ ಕೃಷಿ, ಪರಿಸರ, ಮೀನುಗಾರಿಕೆ, ಹವಾಮಾನ ವರದಿ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಬಹುದಾದ ಅಭಿವೃದ್ಧಿಯನ್ನು ಸೋದಾಹರಣವಾಗಿ ವಿವರಿಸಿದ ಅವರು ಒಂದೇ ಪ್ರದೇಶದಲ್ಲಿ ವಿವಿಧ ಬೆಳೆಯನ್ನು ಬೆಳೆಯುವ ಸಾಧ್ಯತೆಗಳ ಕುರಿತು ಮಾಹಿತಿ, ಉತ್ಪಾದನೆ ಹೆಚ್ಚಿಸುವ ಕುರಿತು ಸೂಕ್ತ ಮುನ್ಸೂಚನೆ, ಜಲಾನಯನ ಅಭಿವೃದ್ಧಿ, ಯಾವುದೇ ಒಂದು ಕೃಷಿ ಪ್ರದೇಶದ ಆರ್ಥಿಕತೆಯ ಅಂದಾಜು, ಮೀನುಗಾರಿಕೆಯಲ್ಲಿ ಉಪಯುಕ್ತ ಸಲಹೆ, ಸೂಚನೆಗಳು,  ಹವಾಮಾನ ವೈಪರೀತ್ಯ, ಸಮುದ್ರದಲ್ಲಿ ಗಡಿರೇಖೆಯ ಕುರಿತು ಮೀನುಗಾರರಿಗೆ ಸಮಯೋಚಿತವಾದ ಎಚ್ಚರಿಕೆ, ಪರಿಸರ ಮಾಲಿನ್ಯದ ಕುರಿತು ಮಾಹಿತಿ - ಹೀಗೆ ಹತ್ತು ಹಲವು ಬಗೆಗಳಲ್ಲಿ ಬಾಹ್ಯಾಕಾಶದ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ದೇಶದ ಪ್ರಗತಿಯಲ್ಲಿ ಉಂಟಾಗಿರುವ ಪ್ರಯೋಜನಗಳ ಮೇಲೆ ಬೆಳಕು ಚೆಲ್ಲಿದರು.

ಸೋಮಯ್ಯ ತಾಂತ್ರಿಕ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಡಾ.ಸಿದ್ಧಪ್ಪ ಭೂಸ್ನೂರ್ ಅವರು ತಮ್ಮ ಮೊದಲನೆಯ ಉಪನ್ಯಾಸದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಮೆಕ್ಯಾನಿಕಲ್ ಇಂಜಿನಿಯರುಗಳ ಪಾತ್ರ ಹಾಗೂ ಮಹತ್ತ್ವವನ್ನು ಕುರಿತು ವಿವರಣೆ ನೀಡಿದರು. ಎರಡನೆಯ ಉಪನ್ಯಾಸದಲ್ಲಿ ವಾಯು ಮತ್ತು ಭೂ ರಕ್ಷಣಾ ಪಡೆಗಳಲ್ಲಿಯ ಹೊಸ ಬೆಳವಣಿಗೆಗಳನ್ನು ಕುರಿತು ವಿವರವಾದ ಮಾಹಿತಿ ನೀಡಿದ ಅವರು, ಶಸ್ತ್ರಾಸ್ತ್ರ, ಮಿಲಿಟರಿ ವಾಹನ, ವಿಮಾನ ಮತ್ತು ನೌಕಾ ಹಡಗುಗಳು ಮತ್ತಿತರ ರಕ್ಷಣಾ ಸಾಧನಗಳನ್ನು ಕುರಿತು ಸಂಶೋಧನೆ, ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಹಾಗೂ ನಿರ್ವಹಣಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ಮೆಕ್ಯಾನಿಕಲ್ ತಂತ್ರಜ್ಞರ ಕಾರ್ಯ, ಅದರ ವಿಸ್ತಾರ ಮತ್ತು ರಕ್ಷಣಾ ಕ್ಷೇತ್ರಕ್ಕೆ ಅವರು ನೀಡುವ ಅಪಾರ ಕೊಡುಗೆಯನ್ನು ಸುದೀರ್ಘವಾಗಿ ವಿವರಿಸಿದರು.

ನೌಕಾಪಡೆಯ ನಿವೃತ್ತ ಕಮೋಡೋರ್ ಆದ ಶ್ರೀಕಾಂತ್ ಕೆಸ್ನೂರ್ ಅವರು ತಮ್ಮ ಮೊದಲ ಉಪನ್ಯಾಸದಲ್ಲಿ ಎನ್.ಡಿ.ಎ.ಯಲ್ಲಿ ತಮ್ಮ ಕಲಿಕೆಯ ಅವಧಿಯಲ್ಲಿನ ಮತ್ತು ಭಾರತೀಯ ನೌಕಾಪಡೆಯಲ್ಲಿಯ ವೃತ್ತಿ ಜೀವನದ ತಮ್ಮ ಅನುಭವಗಳನ್ನು ರಸವತ್ತಾಗಿ ಹಂಚಿಕೊಂಡರು. ಎರಡನೆಯ ಉಪನ್ಯಾಸದಲ್ಲಿ ಉನ್ನತ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನವೂ ಸೇರಿದಂತೆ ಭಾರತೀಯ ನೌಕಾಪಡೆಯಲ್ಲಿರುವ ಅಪಾರ ಅವಕಾಶಗಳ ಕುರಿತು ಯುವ ಜನತೆಗೆ ಮಾರ್ಗದರ್ಶನವಾಗುವ ವಿವರಗಳನ್ನು ಚರ್ಚಿಸಿದ ಅವರು, ನೌಕಾಪಡೆಯು ನಿರ್ವಹಿಸುವ ಮಹತ್ತರವಾದ ಹೊಣೆಗಳು, ಎದುರಿಸುವ ಸವಾಲುಗಳು, ಸಾಹಸಗಳು ಹಾಗೂ ನೌಕಾಪಡೆಯು ಸಾಧಿಸಿರುವ ತಾಂತ್ರಿಕ ಅಭಿವೃದ್ಧಿಗಳನ್ನು ಕುರಿತು ವಿವರವಾಗಿ ಮಾತನಾಡಿದರು. ತಮ್ಮ  ವೃತ್ತಿಜೀವನದ ಅವಧಿಯಲ್ಲಿ ಎರಡು ನೌಕೆಗಳ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿರುವ ಅವರು, ಯುದ್ಧವನ್ನು ತಡೆಗಟ್ಟಿ ಶಾಂತಿ ಸ್ಥಾಪಿಸುವ ಉದ್ದೇಶದಿಂದಲೇ ಸದಾ ಯುದ್ಧಕ್ಕೇ ಸಜ್ಜಾಗಿರಬೇಕಾದ ರಕ್ಷಣಾ ದಳದ ಕಾರ್ಯ ನೀತಿಯ ವಿಪರ್ಯಾಸವನ್ನು ಆಪ್ತವಾಗಿ ಹಂಚಿಕೊಂಡರು.

ಗಲಭೆಗೆ ಸರ್ಕಾರದ ವೈಫಲ್ಯವೇ ಕಾರಣ: ಕಾಂಗ್ರೆಸ್ ನಾಯಕರಿಗೆ ಆರ್.ಅಶೋಕ್ ತಿರುಗೇಟು

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎನ್.ಉಪಾಧ್ಯ, ಶಾ ಆಂಡ್ ಆಂಕರ್ ಕಚ್ಛಿ ತಾಂತ್ರಿಕ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ನಿವೃತ್ತ ಮುಖ್ಯಸ್ಥರು ಹಾಗೂ ಮುಂಬೈ ವಿವಿ ಕನ್ನಡ ವಿಭಾಗದ ಗೌರವ ಪ್ರಾಧ್ಯಾಪಕರೂ ಆದ ಡಾ.ಉಮಾ ರಾಮರಾವ್, ತೇರಣಾ ಎಂಜಿನಿಯರಿಂಗ್ ಕಾಲೇಜಿನ ಡಾ.ಭೂಸ್ನೂರ್, ಡಾ. ಮಂಠಾಳೆ, ಸೋಮಯ್ಯ ಸೈನ್ಸ್ ಕಾಲೇಜಿನ ಡಾ. ಸೀಮಾ ಸಾಂಬ್ರಾಣಿ, ಬಿ.ಎ.ಆರ್.ಸಿ. ಸಂಸ್ಥೆಯ ನಿವೃತ್ತ ವಿಜ್ಞಾನಿಗಳಾದ  ಡಾ.ವಿಠ್ಠಲ ಕಟ್ಟಿ ಮತ್ತು ಆರ್.ಪಿ. ಪ್ರಭು, ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕೇಶವ ಕಟ್ಟಿ, ವಿವಿಧ ಕನ್ನಡ ಸಂಸ್ಥೆಗಳ ಸದಸ್ಯರು, ವಿಜ್ಞಾನಿಗಳು, ತಂತ್ರಜ್ಞರು, ಕನ್ನಡ ವಿಭಾಗದ ವಿದ್ಯಾರ್ಥಿಗಳೂ ಸೇರಿದಂತೆ ನಗರದ ಮೂಲೆ ಮೂಲೆಗಳಿಂದ ಬಂದ ವಿವಿಧ ಹಿನ್ನೆಲೆಯುಳ್ಳ ಹಿರಿಕಿರಿಯ ಆಸಕ್ತ ಕನ್ನಡಿಗರು ಈ ಎರಡು ದಿನಗಳ ಸಂಕಿರಣದಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡರು. ಬೆಂಗಳೂರಿನ ಶ್ರೀಮತಿ ಪದ್ಮಶ್ರೀ ಮೂರ್ತಿ ಮತ್ತಿತರರು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ವಿಚಾರ ಸಂಕಿರಣದ ಮುಖ್ಯ ರೂವಾರಿಯಾದ ಡಾ.ವೃಚಾ ಚವಾಣ್ ಅವರು ಎರಡು ದಿನಗಳ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆಗೈದರು. ಭಾಗವಹಿಸಿದ ಎಲ್ಲರಿಗೂ ಡಾ.ವಿಶ್ವನಾಥ ಪಾಲಹಳ್ಳಿ ಅವರು ರಚಿಸಿರುವ ‘ಭವಿಷ್ಯದ ಭೂಮಿಗಳು’ ಎಂಬ ಖಗೋಳ ವಿಜ್ಞಾನದ ಕೃತಿಯನ್ನು ಹಾಗೂ ಎ.ಐ.ಸಿ.ಟಿ.ಇ.ಯ ವತಿಯಿಂದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Latest Videos
Follow Us:
Download App:
  • android
  • ios