ನವದೆಹಲಿ [ನ.28]: ಮನಸೋಇಚ್ಛೆ ಲಾಭಕ್ಕೆ ಔಷಧಗಳನ್ನು ಮಾರಾಟ ಮಾಡುವ ಫಾರ್ಮಾ ಕಂಪನಿಗಳ ವ್ಯವಹಾರಕ್ಕೆ ಶೀಘ್ರದಲ್ಲೇ ಬ್ರೇಕ್‌ ಬೀಳುವುದು ಖಚಿತವಾಗಿದೆ. ಬೆಲೆ ನಿಯಂತ್ರಣ ಪರಿಧಿಯಿಂದ ಹೊರಗಿರುವ ಔಷಧಗಳಿಗೆ ಗರಿಷ್ಠ ಶೇ.30ರಷ್ಟುಮಾತ್ರವೇ ಲಾಭ ನಿಗದಿಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ದೇಶೀಯ ಔಷಧ ಉದ್ಯಮ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಶೇ.80ರಷ್ಟುಔಷಧಗಳ ಬೆಲೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ.

ಔಷಧ ನಿಯಂತ್ರಣ ಪ್ರಾಧಿಕಾರ ಹಾಗೂ ಔಷಧ ಉದ್ಯಮದ ಪ್ರತಿನಿಧಿಗಳೊಂದಿಗೆ ಕಳೆದ ಶುಕ್ರವಾರ ನಡೆದ ಸಭೆಯಲ್ಲಿ ಗರಿಷ್ಠ ಶೇ.30ರಷ್ಟುಮಾತ್ರ ಲಾಭಕ್ಕೆ ಔಷಧಗಳನ್ನು ಮಾರಾಟ ಮಾಡಬೇಕು ಎಂಬ ವಿಚಾರಕ್ಕೆ ಸಹಮತ ವ್ಯಕ್ತವಾಗಿದೆ. ಬೆಲೆ ನಿಯಂತ್ರಣ ವ್ಯಾಪ್ತಿಯಲ್ಲಿರುವವು ಸೇರಿದಂತೆ ಎಲ್ಲ ರೀತಿಯ ಔಷಧಗಳಿಗೆ ಶೇ.100ರಷ್ಟುಲಾಭ ನಿಗದಿಗೊಳಿಸುವ ಪ್ರಸ್ತಾವವೂ ಸಭೆಯಲ್ಲಿ ಚರ್ಚೆಯಾಯಿತಾದರೂ, ಕೊನೆಯಲ್ಲಿ ಶೇ.30 ಲಾಭಕ್ಕೆ ಒಪ್ಪಿಗೆ ಕೊಡಲಾಗಿದೆ.

ಈ ಕ್ರಮದಿಂದ ಸನ್‌ ಫಾರ್ಮಾ, ಲುಪಿನ್‌, ಸಿಪ್ಲಾದಂತಹ ಕಂಪನಿಗಳು ಗರಿಷ್ಠ ಮಾರಾಟ ಬೆಲೆಯನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದಾಗಿ ಆ ಕಂಪನಿಗಳ ಲಾಭಕ್ಕೆ ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.

ಎಸ್ಪಿಜಿ ಕ್ಯಾತೆ : ಕಾಂಗ್ರೆಸ್‌ಗೆ ಅಮಿತ್‌ ಶಾ ತಿರುಗೇಟು...

ಔಷಧಗಳ ಬೆಲೆ ಇಳಿಕೆಗೆ ಒಪ್ಪಿಗೆ ಸೂಚಿಸಿದ್ದೇವೆ. ಕ್ಯಾನ್ಸರ್‌ ಔಷಧಗಳಿಗೆ ಶೇ.30ರಷ್ಟುಲಾಭ ನಿಗದಿಗೊಳಿಸಲಾಗಿತ್ತು. ಆದಾದ ಬಳಿಕ ಕ್ಯಾನ್ಸರ್‌ ಔಷಧಗಳ ಬೆಲೆಯಲ್ಲಿ ಶೆ.85ರಷ್ಟುಇಳಿಕೆಯಾಗಿತ್ತು. ಅದನ್ನೇ ಇತರೆ ಉತ್ಪನ್ನಗಳಿಗೂ ವಿಸ್ತರಿಸಬೇಕಾಗಿದೆ. ಹಂತಹಂತವಾಗಿ ಇದನ್ನು ಜಾರಿಗೆ ತರುತ್ತೇವೆ ಎಂದು ಭಾರತೀಯ ಔಷಧ ಉತ್ಪಾದಕರ ಸಂಘದ ಅಧ್ಯಕ್ಷ ದೀಪಾನಾಥ್‌ ರಾಯ್‌ ಚೌಧರಿ ತಿಳಿಸಿದ್ದಾರೆ.

ಶೇ.30ರಷ್ಟುಲಾಭದ ಮಿತಿಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ (ಔಷಧ ಅಂಗಡಿ) ಶೇ.20ರಷ್ಟುಹಾಗೂ ಸಗಟು ವ್ಯಾಪಾರಿಗಳಿಗೆ ಶೇ.10ರಷ್ಟುಪಾಲು ಸಿಗಲಿದೆ. ವಿಟಮಿನ್‌ ಡಿ ಔಷಧದಿಂದ ಆ್ಯಂಟಿಬಯೋಟಿಕ್ಸ್‌ವರೆಗೆ ಹಲವು ಔಷಧಗಳ ಬೆಲೆಯ ಮೇಲೆ ಪರಿಣಾಮವಾಗಲಿದೆ. ಭಾರತೀಯ ಔಷಧ ಮಾರುಕಟ್ಟೆ1 ಲಕ್ಷ ಕೋಟಿ ರು. ಮೊತ್ತದ್ದಾಗಿದ್ದು, ಅದರಲ್ಲಿ 10 ಸಾವಿರ ಕೋಟಿ ರು. ಮೊತ್ತದ ಔಷಧಗಳು ಬೆಲೆ ನಿಯಂತ್ರಣದಿಂದ ಹೊರಗಿವೆ.