ಗುಜರಾತ್ ಗಲಭೆ: ತೀಸ್ತಾಗೆ ಹಣ ಬೇಕಾ ಎಂದು ಕೇಳಿದ್ದರಂತೆ ಸೋನಿಯಾ!
2002ರ ಗುಜರಾತ್ ಗಲಭೆ ಬಳಿಕ, ನರೇಂದ್ರ ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರ ಉರುಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಪ್ತ ಅಹಮದ್ ಪಟೇಲ್ ಯತ್ನಿಸಿದ್ದರು.
ನವದೆಹಲಿ (ಜು.20): ‘2002ರ ಗುಜರಾತ್ ಗಲಭೆ ಬಳಿಕ, ನರೇಂದ್ರ ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರ ಉರುಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಪ್ತ ಅಹಮದ್ ಪಟೇಲ್ ಯತ್ನಿಸಿದ್ದರು. ಇದಕ್ಕೆ ಅವರು 30 ಲಕ್ಷ ರು. ಹಣ ನೀಡಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಬಳಸಿಕೊಂಡಿದ್ದರು’ ಎಂದು ಇತ್ತೀಚೆಗಷ್ಟೇ ಕೋರ್ಚ್‌ಗೆ ಗುಜರಾತ್ ಎಸ್‌ಐಟಿ ಮಾಹಿತಿ ನೀಡಿತ್ತು. ಈಗ ಈ ಸಂಚಿನಲ್ಲಿ ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಭಾಗಿಯಾಗಿದ್ದರು ಎಂದು ತೀಸ್ತಾ ಅವರ ಮಾಜಿ ಆಪ್ತ ರಯೀಸ್ ಖಾನ್ ಪಠಾಣ್ ಗಂಭೀರ ಆರೋಪ ಮಾಡಿದ್ದಾರೆ.
ಝೀ ನ್ಯೂಸ್ ವಾಹಿನಿಗೆ ಸಂದರ್ಶನ ನೀಡಿರುವ ಪಠಾಣ್, ‘ಗುಜರಾತ್ ಗಲಭೆ ಬಳಿಕ ತೀಸ್ತಾ ಅವರು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆಗ ನಾನೂ ತೀಸ್ತಾ ಜತೆ ಹೋಗಿದ್ದೆ. ಈ ವೇಳೆ ನಿಮಗೆ ಹಣಕಾಸಿನ ತೊಂದರೆ ಏನಾದರೂ ಇದೆಯೇ ಎಂದು ಸ್ವತಃ ಸೋನಿಯಾ ಪ್ರಶ್ನಿಸಿದ್ದರು. ಈ ವೇಳೆ ‘ಇಲ್ಲ ಹಣದ ಯಾವುದೇ ಕೊರತೆ ಇಲ್ಲ. ಅಹ್ಮದ್ ಪಟೇಲ್ ಅವರ ಕಾರಣದಿಂದಾಗಿ ಹಣದ ಯಾವುದೇ ತೊಂದರೆ ಎದುರಾಗಿಲ್ಲ’ ಎಂದು ತೀಸ್ತಾ ಉತ್ತರಿಸಿದ್ದರು’ ಎಂದು ಪಠಾಣ್ ಹೇಳಿದ್ದಾರೆ.
ಗುಜರಾತ್ ಗಲಭೆ ಮಾಸ್ಟರ್‌ಮೈಂಡ್ ಸೋನಿಯಾ ಗಾಂಧಿ, ಬಿಜೆಪಿಯಿಂದ ಶಾಕಿಂಗ್ ಆರೋಪ!
ಈ ನಡುವೆ, ‘ತೀಸ್ತಾರನ್ನು ಅಹ್ಮದ್ ಪಟೇಲ್ ಕೂಡ ಭೇಟಿಯಾಗಿದ್ದರು. ಈ ವೇಳೆ ಆದ ಮಾತುಕತೆ ಅನ್ವಯ, ಮೊದಲಿಗೆ 5 ಲಕ್ಷ ನೀಡಲಾಗುವುದು. ಮೊದಲ ಕಂತು ನೀಡಿದ 48 ಗಂಟೆಗಳ ಬಳಿಕ 25 ಲಕ್ಷ ರು. ನೀಡಲಾಗುವುದು ಎಂಬ ಒಪ್ಪಂದ ಆಗಿತ್ತು. ಜೊತೆಗೆ ಹಣಕ್ಕೆ ಯಾವುದೇ ಕೊರತೆ ಇಲ್ಲ. ಉದ್ದೇಶವನ್ನು ಮಾತ್ರ ನೆನಪಿಟ್ಟುಕೊಳ್ಳಿ ಎಂದು ತೀಸ್ತಾಗೆ ಪಟೇಲ್ ತಿಳಿಸಿದ್ದರು. ಇದಕ್ಕೆ ನಾನೇ ಸಾಕ್ಷಿ’ ಎಂದೂ ರಯೀಸ್ ಹೇಳಿದ್ದಾರೆ.
ಮೋದಿ ವಿರುದ್ಧ ಸಂಚು ಹೂಡಿದ್ದ ಸೋನಿಯಾ ಆಪ್ತ: 2002ರ ಗುಜರಾತ್ ಗಲಭೆ ಪ್ರಕರಣದ ಬಳಿಕ ‘ಗಲಭೆಗೆ ಅಂದಿನ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರವೇ ಕಾರಣ ಎಂದು ಬಿಂಬಿಸಲು ಸಂಚು ನಡೆದಿತ್ತು. ಬಂಧಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರಮಾಪ್ತರಾಗಿದ್ದ ಕಾಂಗ್ರೆಸ್ ಮುಖಂಡ ದಿ. ಅಹ್ಮದ್ ಪಟೇಲ್ ಈ ಸಂಚು ರೂಪಿಸಿದ್ದರು’ ಎಂದು ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸ್ಫೋಟಕ ಹೇಳಿಕೆ ನೀಡಿದೆ. ಗಲಭೆ ಸಂಚಿನ ಕುರಿತಂತೆ ಬಂಧಿತ ತೀಸ್ತಾ ಜಾಮೀನು ಅರ್ಜಿ ವಿರೋಧಿಸಿ ಅಹಮದಾಬಾದ್ ಸೆಷನ್ಸ್ ಕೋರ್ಟಲ್ಲಿ ಎಸ್‌ಐಟಿ ಪ್ರಮಾಣಪತ್ರ ಸಲ್ಲಿಸಿದ್ದು, ಅದರಲ್ಲಿ ಈ ಅಂಶವಿದೆ. ಸೋಮವಾರ ವಿಚಾರಣೆ ನಡೆಯಲಿದೆ.
ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಭಾರಿ ಪ್ರತಿಭಟನೆ ಪ್ಲಾನ್!
ಇದರ ಬೆನ್ನಲ್ಲೇ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ‘ಸಂಚಿನ ನಿಜವಾದ ಸೂತ್ರಧಾರೆ ಸೋನಿಯಾ ಗಾಂಧಿ. ಅಹ್ಮದ್ ಪಟೇಲ್ ಕೇವಲ ಪಾತ್ರಧಾರಿ. ಅಂದಿನ ಗುಜರಾತ್ ಸರ್ಕಾರ ಅಸ್ಥಿರಗೊಳಿಸಿ, ಮೋದಿಗೆ ಕೆಟ್ಟಹೆಸರು ತರಲು ಸಂಚು ರೂಪಿಸಿದ್ದರು’ ಎಂದು ಬಿಜೆಪಿ ಕಿಡಿಕಾರಿದೆ. ಆದರೆ, ಆರೋಪ ತಳ್ಳಿಹಾಕಿರುವ ಕಾಂಗ್ರೆಸ್, ‘ಗಲಭೆ ಹೊಣೆಯಿಂದ ನುಣುಚಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೋದಿ ಈಗ ಹೊಸ ತಂತ್ರ ಹೆಣೆದಿದ್ದಾರೆ. ಇವು ಸಂಪೂರ್ಣ ಸುಳ್ಳು ಹಾಗೂ ಕಪೋಲಕಲ್ಪಿತ ಆರೋಪ. ಸೇಡು ತೀರಿಸಿಕೊಳ್ಳುವ ಭರದಲ್ಲಿ ಮೃತ ವ್ಯಕ್ತಿಯನ್ನೂ ಮೋದಿ ಪಾಳೆಯ ಬಿಡುತ್ತಿಲ್ಲ’ ಎಂದು ಕಿಡಿಕಾರಿದೆ. ಅಹ್ಮದ್ ಪಟೇಲ್ ಪುತ್ರಿ ಮುಮ್ತಾಜ್ ಪಟೇಲ್ ಕೂಡ, ‘ಇಷ್ಟುದಿನ ಸುಮ್ಮನಿದ್ದು ಈಗೇಕೆ ಪಟೇಲ್ ಹೆಸರು ಎಳೆದು ತರಲಾಗಿದೆ?’ ಎಂದು ಪ್ರಶ್ನಿಸಿದ್ದಾರೆ.