ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನಲ್ಲೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹೋರಾಟದ ಹೀರೋ ಸೋನಮ್ ವಾಂಗ್ಚುಕ್ ಸಿಜೆಪಿ ನೆರವಿಗೆ ಧಾವಿಸಿದ್ದಾರೆ

ನವದೆಹಲಿ (ಅ.10) ದೆಹಲಿಯಲ್ಲಿ ಸಿಜೆಪಿ ಆಯೋದಿಸಿದ ಪ್ರತಿಭಟನೆಗೆ ದೆಹಲಿ ಪೊಲೀಸರು ಅವಕಾಶ ನೀಡಿಲ್ಲ. ಇತ್ತ ಪ್ರತಿಭಟನೆಗೆ ಮುಂದಾಗ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಸೇರಿದಂತೆ ಸಿಜೆಪಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ಸಂಜಯ್ ಸಿಂಗ್, ಮನೀಶ್ ಸಿಸೋಡಿಯಾ,ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಸಿಜೆಪಿ ಬೆಂಬಲಕ್ಕೆ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಧಾವಿಸಿದ್ದಾರೆ. ಇದೀಗ ಮತ್ತೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದಾರೆ.

ಭಾನುವಾರದ ಗಡುವು ನೀಡಿದ ಸೋನಂ ವಾಂಗ್ಚುಕ್

ಸಿಜೆಪಿ ಹೋರಾಟಗಾರರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಸೋನಂ ವಾಂಗ್ಚುಕ್ ಸರ್ಕಾರಕ್ಕೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಒಳಗೆ ಸಿಜೆಪಿ ಹೋರಾಟಗಾರರನ್ನು ಬಿಡುಗಡೆ ಮಾಡದಿದ್ದಲ್ಲಿ, ಪ್ರತಿಭಟನಾ ಮೆರವಣಿಗೆ ಹಾಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸೋನಂ ವಾಂಗ್ಚುಕ್ ಹೇಳಿದ್ದಾರೆ. ಭಾರತದ ಯುವ ಜನತೆ ಒಂದಾಗಿದ್ದಾರೆ. ಹೋರಾಟ ಮುಂದುವರಿಯಲಿದೆ. ಸರ್ಕಾರ ಹೋರಾಟಗಾರರ ಬಿಡುಗಡೆ ಮಾಡದಿದ್ದರೆ, ಪ್ರತಿಭಟನಾ ಮೆರವಣಿಗೆ ಅಥವಾ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಸೋನಂ ವಾಂಗ್ಚುಕ್ ಎಚ್ಚರಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ವಿರುದ್ದ ಹೋರಾಟದಲ್ಲಿ ವಾಂಗ್ಚುಕ್ ಸಕ್ಸಸ್

ಕಾಕ್ರೋಚ್ ಜನತಾ ಪಾರ್ಟಿ ಧರ್ಮೇಂದ್ರ ಪ್ರಧಾನ್ ವಿರುದ್ಧ ಹೋರಾಟ ಆರಂಭಿಸಿತ್ತು. ಆದರೆ ಈ ಹೋರಾಟವನ್ನು ತೀವ್ರಗೊಳಿಸಿದ ಕೀರ್ತಿ ಸೋನಂ ವಾಂಗ್ಚುಕ್‌ಗೆ ಸಲ್ಲಲಿದೆ. ಉಪವಾಸ ಸತ್ಯಾಗ್ರಹ ತೀವ್ರಗೊಳ್ಳುತ್ತಿದ್ದಂತೆ ದೇಶಾದ್ಯಂತ ಸಿಜೆಪಿಗೆ ಬೆಂಬಲ ವ್ಯಕ್ತವಾಗಿತ್ತು. ಸೋನಂ ವಾಂಗ್ಚುಕ್ ಬೆಂಬಲಿಸಿ ಹಲವು ಕಡೆಗಳಲ್ಲಿ ಹೋರಾಟಗಾರರು ಉಪವಾಹಸ ಸತ್ಯಾಗ್ರಹ ಕೈಗೊಂಡಿತ್ತು. ಇತ್ತ ಸರ್ಕಾರ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿತ್ತು. ಕೊನೆಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು.

ಇದೀಗ ಸೋನಂ ವಾಂಗ್ಚುಕ್ ಮಧ್ಯಪ್ರವೇಶದಿಂದ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಸಿಜೆಪಿ ಹೋರಾಟಗಾರರಲ್ಲಿ ಕೇಳಿಬರುತ್ತಿದೆ. ಸದ್ಯ ಸೋನಂ ಎಚ್ಚರಿಕೆ ಸಂದೇಶ ನೀಡಿದ್ದಾರೆ.