ನವದೆಹಲಿ(ಜ.10: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವೀಟರ್‌ ಖಾತೆಯನ್ನು ರದ್ದುಪಡಿಸಿರುವುದು ದೊಡ್ಡ ದೊಡ್ಡ ಟೆಕ್‌ ಕಂಪನಿಗಳಿಂದ ಪ್ರಜಾಪ್ರಭುತ್ವಕ್ಕಿರುವ ಅಪಾಯದ ಕುರಿತ ಎಚ್ಚರಿಕೆಯ ಗಂಟೆ’ ಎಂದು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ತೀಕ್ಷ$್ಣವಾಗಿ ಹೇಳಿದ್ದಾರೆ. ಟ್ವೀಟರ್‌ ಕ್ರಮಕ್ಕೆ ಇತರ ಕೆಲವು ಬಿಜೆಪಿ ನಾಯಕರೂ ಆಕ್ಷೇಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸೂರ್ಯ, ‘ಅನಿಯಂತ್ರಿತ ಬೃಹತ್‌ ಟೆಕ್‌ ಕಂಪನಿಗಳಿಂದ ಪ್ರಜಾಪ್ರಭುತ್ವಕ್ಕಿರುವ ಅಪಾಯವನ್ನು ಯಾರು ಇನ್ನೂ ಅರ್ಥಮಾಡಿಕೊಂಡಿಲ್ಲವೋ ಅವರಿಗೆಲ್ಲ ಇದು ಎಚ್ಚರಿಕೆಯ ಗಂಟೆಯಾಗಿದೆ. ಅವರು ಅಮೆರಿಕದ ಅಧ್ಯಕ್ಷರಿಗೇ ಹೀಗೆ ಮಾಡುತ್ತಾರೆಂದರೆ ಯಾರಿಗೆ ಬೇಕಾದರೂ ಮಾಡಬಹುದು. ಭಾರತ ಎಷ್ಟುಬೇಗ ಇದರ ಬಗ್ಗೆ ಗಮನಹರಿಸಿದರೂ ಪ್ರಜಾಪ್ರಭುತ್ವಕ್ಕೆ ಅಷ್ಟೇ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಖಾತೆ ರದ್ದು

ಐವರನ್ನು ಬಲಿ ತೆಗೆದುಕೊಂಡ ಬುಧವಾರ ಮಧ್ಯರಾತ್ರಿಯ ಹಿಂಸಾಚಾರದ ನಂತರ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಕಂಪನಿಗಳು ಟ್ರಂಪ್‌ ಅವರ ಖಾತೆಗಳನ್ನು ರದ್ದುಪಡಿಸಿದ್ದವು. ಅದಕ್ಕೂ ಮೊದಲೇ ಯೂಟ್ಯೂಬ್‌ ಕಂಪನಿ ಟ್ರಂಪ್‌ರ ವಿಡಿಯೋಗಳನ್ನು ಡಿಲೀಟ್‌ ಮಾಡಿತ್ತು. ಈಗ @realDonaldTrump ಟ್ವೀಟರ್‌ ಖಾತೆಯೂ ರದ್ದುಗೊಂಡಂತಾಗಿದ್ದು, ಟ್ರಂಪ್‌ ಅವರ ಪ್ರಮುಖ ಸಾಮಾಜಿಕ ಅಭಿವ್ಯಕ್ತಿ ಮಾಧ್ಯಮಗಳೆಲ್ಲ ಬಂದ್‌ ಆದಂತಾಗಿದೆ.