Rahul Gandhi In America: ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಸಮುದಾಯದೊಂದಿಗೆ ರಾಹುಲ್‌ ಗಾಂಧಿ ಅವರ ಸಂವಾದದಲ್ಲಿ ಖಲಿಸ್ತಾನಿ ಬೆಂಬಲಿಗರು ಪಾಲ್ಗೊಂಡಿದ್ದು ಮಾತ್ರವಲ್ಲದೆ, ಖಲಿಸ್ತಾನಿ ಜಿಂದಾಬಾದ್‌  ಎಂದು ಘೋಷಣೆ ಕೂಗಿ ಅವರ ಬಾವುಟವನ್ನೂ ಹಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್‌ ಗಾಂಧಿ 'ದ್ವೇಷದ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯೋಣ' ಎಂದಿದ್ದಾರೆ.

ವಾಷಿಂಗ್ಟನ್‌ (ಮೇ.31): ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ಖಲಿಸ್ತಾನಿಗಳ ಬಿಸಿ ತಟ್ಟಿದೆ. ರಾಹುಲ್‌ ಗಾಂಧಿಯವರ 'ಮೊಹಬ್ಬತ್‌ ಕೀ ದುಖಾನ್‌' ಕಾರ್ಯಕ್ರಮಕ್ಕೆ ಆಗಮಿಸಿದ್ದ ಖಲಿಸ್ತಾನಿಗಳು, 'ಖಲಿಸ್ತಾನ್‌ ಜಿಂದಾಬಾದ್‌' ಎನ್ನುವ ಘೋಷಣೆ ಮೊಳಗಿಸಿದ್ದಲ್ಲದೆ, ಖಲಿಸ್ತಾನಿ ಧ್ವಜವನ್ನೂ ಹಾರಿಸಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬುಧವಾರ ರಾಹುಲ್‌ ಗಾಂಧಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಹಾಲ್‌ನಲ್ಲಿ ಕುಳಿತುಕೊಂಡ ಕೆಲ ವ್ಯಕ್ತಿಗಳು ಖಲಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆಯನ್ನು ಕೂಗಿದ್ದಾರೆ. ಅದಲ್ಲದೆ, ಕೆಲವರು ಖಲಿಸ್ತಾನಿ ಧ್ವಜಗಳನ್ನೂ ಹಾರಿಸಿದ್ದಾರೆ. ಖಲಿಸ್ತಾನಿಗಳು ಈ ಆಟಾಟೋಪ ಮಾಡುವ ವೇಳೆ ರಾಹುಲ್‌ ಗಾಂದಿ ಮಾತ್ರ ಸುಮ್ಮನೆ ನಗುತ್ತಾ ನಿಂತಿದ್ದರು. ದ್ವೇಷದ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕು ಎಂದು ಈ ವೇಳೆ ಅವರು ಹೇಳಿದ್ದಾರೆ. ಆದರೆ, ಎಲ್ಲೂ ಖಲಿಸ್ತಾನಿಗಳನ್ನು ಈ ಹಂತದಲ್ಲಿ ಟೀಕೆ ಮಾಡುವ ಮಾತನ್ನು ರಾಹುಲ್‌ ಆಡಿಲ್ಲ. ಇನ್ನು ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಅವರು ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿಗೆ ಬೆದರಿಕೆ ಹಾಕುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ಘಟನೆಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 'ಸಿಖ್ ಫಾರ್ ಜಸ್ಟೀಸ್' ನಾಯಕ ಗುರುಪತ್ವಂತ್ ಸಿಂಗ್ ಪನ್ನು ಅವರು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು, ರಾಹುಲ್ ಗಾಂಧಿ ಅಮೆರಿಕದಲ್ಲಿ ಎಲ್ಲೇ ಹೋದರೂ ಖಲಿಸ್ತಾನಿಯೇ ಆತನ ಮುಂದೆ ನಿಲ್ಲುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಇನ್ನು ಮುಂದಿನ ಸರದಿ ಪ್ರಧಾನಿ ಮೋದಿಯದ್ದಾಗಿದ್ದು, ಜೂನ್‌ 22 ರಂದು ಅವರು ಅಮರಿಕಕ್ಕೆ ಬಂದಾಗಲೂ ಖಲಿಸ್ತಾನಿ ಪ್ರತಿಭಟನೆ ಎದುರಿಸುತ್ತಾರೆ ಎಂದಿದ್ದಾನೆ. 

ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ: ಭಾರತೀಯ ವಲಸಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಜನರನ್ನು ಬೆದರಿಸುವುದು ಮಾತ್ರವಲ್ಲದೆ, ದೇಶದ ಏಜೆನ್ಸಿಗಳನ್ನು 'ದುರುಪಯೋಗ' ಮಾಡುತ್ತಿದೆ ಎಂದು ಆರೋಪಿಸಿದರು. ಮಂಗಳವಾರ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರಾಜಕೀಯದ ಎಲ್ಲಾ ವಿಧಾನಗಳನ್ನು ನಿಯಂತ್ರಿಸುತ್ತಿದೆ ಎಂದು ಹೇಳಿದರು. ‘ಭಾರತ್ ಜೋಡೋ ಯಾತ್ರೆ’ ಆರಂಭಿಸುವ ಮುನ್ನವೇ ರಾಜಕೀಯದಲ್ಲಿ ಹಳೆ ಕಾಲದ ಜೀವನ ಕ್ರಮ ಕೈಗೂಡುತ್ತಿಲ್ಲ ಎಂದು ತಮಗೆ ಅರಿವಾಯಿತು ಎಂದು ಹೇಳಿದ್ದಾರೆ.

ಬಿಜೆಪಿ ಜನರಿಗೆ ಬೆದರಿಕೆ ಹಾಕುತ್ತಿದೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಜನರೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ಎಲ್ಲಾ ವಿಧಾನಗಳನ್ನು ಬಿಜೆಪಿ-ಆರ್‌ಎಸ್‌ಎಸ್ ನಿಯಂತ್ರಿಸಿದ್ದರಿಂದ 'ಭಾರತ್ ಜೋಡೋ ಯಾತ್ರೆ' ಪ್ರಾರಂಭಿಸಲಾಯಿತು. "ರಾಜಕೀಯವಾಗಿ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿದೆ ಎಂದು ನಾವು ಅರಿತುಕೊಂಡಿದ್ದೇವೆ. ಆದ್ದರಿಂದ ನಾವು ಭಾರತದ ದಕ್ಷಿಣದ ತುದಿಯಿಂದ ಶ್ರೀನಗರಕ್ಕೆ ಪಾದಯಾತ್ರೆ ಮಾಡಲು ನಿರ್ಧರಿಸಿದೆವು. ಈ ಯಾತ್ರೆಯನ್ನು ಪ್ರೀತಿ, ಗೌರವ ಮತ್ತು ನಮ್ರತೆಯ ಮನೋಭಾವದಿಂದ ಮಾಡಲಾಗಿದೆ ಎಂದು ಗಾಂಧಿ ಹೇಳಿದರು.

Scroll to load tweet…

ನೂತನ ಸಂಸತ್‌ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ

ಇನ್ನು ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್‌ ಗಾಧಿ, ಮೋದಿ ತಾವು ದೇವರಿಗಿಂತ ದೊಡ್ಡವರು ಅಂದುಕೊಂಡಿದ್ದಾರೆ. ಬಹುಶಃ ದೇವರೇನಾದರೂ ಇವರ ಎದುರು ಬಂದರೆ, ಈ ಬ್ರಹ್ಮಾಂಡ ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನೂ ಅವರು ವಿವರಿಸುತ್ತಾರೆ. ಬಹುಶಃ ದೇವರಿಗೆ ತಾನೇ ಸೃಷ್ಟಿ ಮಾಡಿದ ಬ್ರಹ್ಮಾಂಡದ ಬಗ್ಗೆ ಗೊಂದಲ ಮೂಡಲು ಪ್ರಾರಂಭವಾಗುತ್ತಿದೆ. ಇಂಥ ತಮಾಷೆ ವಿಷಯ ಹೌದು, ಆದರೆ, ಇದು ಇಂದು ಆಗುತ್ತಿದೆ. ಮೋದಿ ಜೊತೆ ಇರುವವರು ತಮಗೆ ಎಲ್ಲಾ ಗೊತ್ತು ಅಂತಾ ಭಾವಿಸಿದ್ದಾರೆ. ಆದರೆ, ಎಲ್ಲರಿಗೂ ಎಲ್ಲದೂ ಗೊತ್ತಿರೋದಿಲ್ಲ. ಯಾಕೆಂದರೆ, ನಿಮಗೆ ಅದು ಅರ್ಥವೇ ಆಗೋದಿಲ್ಲ. ಯಾಕೆಂದರೆ, ಕೇಳಿಸಿಕೊಂಡರೆ ಮಾತ್ರವೇ ಅರ್ಥವಾಗುತ್ತದೆ. ಕೇಳಿಸಿಕೊಳ್ಳುವ ವ್ಯವಧಾನವೇ ಮೋದಿಗಿಲ್ಲ' ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಹುಲ್‌ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್‌: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!