ಅಯೋಧ್ಯೆ ರಾಮಮಂದಿರದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ ಅಬ್ದುಲ್‌ ರೆಹಮಾನ್‌ಗೆ ಫರೀದಾಬಾದ್‌ನಲ್ಲಿ ಸ್ಲೀಪರ್‌ಸೆಲ್‌ಗಳ ಬೆಂಬಲವಿರುವ ಶಂಕೆ ವ್ಯಕ್ತವಾಗಿದೆ. ಸರ್ಬಿಯಾ ಸಂಸತ್ತಿನಲ್ಲಿಯೂ ಹೊಗೆ ಬಾಂಬ್ ದಾಳಿ ನಡೆದಿದೆ.

ಫರಿದಾಬಾದ್‌: ಅಯೋಧ್ಯೆ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಅಬ್ದುಲ್‌ ರೆಹಮಾನ್‌ಗೆ, ಫರೀದಾಬಾದ್‌ನಲ್ಲಿ ಸ್ಲೀಪರ್‌ಸೆಲ್‌ಗಳ ಬೆಂಬಲ ಸಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಆಯಾಮದಲ್ಲೂ ತನಿಖೆ ನಡೆಸಿವೆ.

ಈ ನಡುವೆ ತನಿಖೆ ವೇಳೆ, ಹರ್ಯಾಣದಲ್ಲಿ ತನಗೆ ಗ್ರೆನೇಡ್‌ ನೀಡಿದ ವ್ಯಕ್ತಿ ಯಾರು? ಆತನ ಹೆಸರು ಏನು? ಎಂಬ ಮಾಹಿತಿ ಇಲ್ಲ ಎಂದು ಅಬ್ದುಲ್‌ ಹೇಳಿದ್ದಾನೆ. ಉತ್ತರಪ್ರದೇಶದ ಫೈಜಾಬಾದ್‌ ಮೂಲದ ಅಬ್ದುಲ್‌, ಭಾನುವಾರ ಫರೀದಾಬಾದ್‌ನಲ್ಲಿ ವ್ಯಕ್ತಿಯೊಬ್ಬನಿಂದ ಗ್ರೆನೇಡ್‌ ಪಡೆದು ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆತನಿಗೆ ಐಸಿಸ್‌ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಂಟಿರುವ ಅನುಮಾನ ಇದೆ.

ಭಾರತದ ಮಾದರಿಯಲ್ಲಿ ಸರ್ಬಿಯಾ ಸಂಸತಲ್ಲೂ ಹೊಗೆ ಬಾಂಬ್‌ ದಾಳಿ!
ಬೆಲ್‌ಗ್ರೇಡ್‌: 2 ವರ್ಷದ ಹಿಂದೆ ಭಾರತದ ಸಂಸತ್‌ ಒಳಗೆ ಮೈಸೂರು ಮೂಲದ ಮನೋರಂಜನ್‌ ನಡೆಸಿದ್ದ ಹೊಗೆ ಬಾಂಬ್‌ ದಾಳಿ ಮಾದರಿಯಲ್ಲಿಯೇ ಮಂಗಳವಾರ ಸರ್ಬಿಯಾದ ಸಂಸತ್‌ ಮೇಲೆ ವಿಪಕ್ಷಗಳ ಸಂಸದರು ಹೊಗೆ ಬಾಂಬ್‌ ದಾಳಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ. ಅಲ್ಲಿನ ಆಡಳಿತ ಪಕ್ಷವು ವಿಶ್ವ ವಿದ್ಯಾಲಯಗಳಿಗೆ ಹೆಚ್ಚಿನ ಅನುದಾನವನ್ನು ನೀಡುವ ಮಸೂದೆಯನ್ನು ಅಂಗೀಕರಿಸಲು ಸಿದ್ಧವಾಗಿತ್ತು. ಈ ವೇಳೆ ವಿಪಕ್ಷ ಸಂಸದರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಇದು ತೀವ್ರ ಸ್ವರೂಪಕ್ಕೆ ತೆರಳಿ ಹೊಗೆ ಬಾಂಬ್‌ಗಳನ್ನು ಎಸೆದು, ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. 

ದಾಳಿಯಿಂದಾಗಿ ದಟ್ಟವಾದ ಕಪ್ಪುಬಣ್ಣದ ಹೊಗೆ ಆವರಿಸಿದೆ. ಇದೇ ವೇಳೆ ಕೆಲ ಕಿಡಿಗಳು ಸಹ ಎಬ್ಬಿವೆ. ಆಕ್ರೋಶ ಭರಿತ ಸಂಸದರು ಮೊಟ್ಟೆ, ನೀರಿನ ಬಾಟಲಿಗಳನ್ನು ಎಸೆದಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಇದರಿಂದಾಗಿ ಓರ್ವ ಸಂಸದರು ತೀವ್ರವಾಗಿ ಗಾಯಗೊಂಡು, ಇನ್ನು ಇಬ್ಬರು ಸಂಸದರು ಗಾಯಗೊಂಡಿದ್ದಾರೆ.