ತಮಿಳುನಾಡಿನ ಕರೂರಿನಲ್ಲಿ 41 ಜನರ ಸಾವಿಗೆ ಕಾರಣವಾದ ನಟ ವಿಜಯ್‌ರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶದ ವೇಳೆ ಸಂಭವಿಸಿದ ಕಾಲ್ತುಳಿತ ತನಿಖೆಗೆ ಮದ್ರಾಸ್‌ ಹೈಕೋರ್ಟ್‌ ಎಸ್‌ಐಟಿ ರಚಿಸಿದೆ. ಹಿರಿಯ ಐಪಿಎಸ್‌ ಅಧಿಕಾರಿ ಅಸ್ರಾ ಗಾರ್ಗ್‌ ಅವರ ನೇತೃತ್ವದಲ್ಲಿ ತನಿಖಾ ದಳ ರಚಿಸಿ ಆದೇಶ ಹೊರಡಿಸಿದೆ.

ಚೆನ್ನೈ: ಸೆ.27ರಂದು ತಮಿಳುನಾಡಿನ ಕರೂರಿನಲ್ಲಿ 41 ಜನರ ಸಾವಿಗೆ ಕಾರಣವಾದ ನಟ ವಿಜಯ್‌ರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶದ ವೇಳೆ ಸಂಭವಿಸಿದ ಕಾಲ್ತುಳಿತ ತನಿಖೆಗೆ ಮದ್ರಾಸ್‌ ಹೈಕೋರ್ಟ್‌ ಎಸ್‌ಐಟಿ ರಚಿಸಿದೆ. ಹಿರಿಯ ಐಪಿಎಸ್‌ ಅಧಿಕಾರಿ ಅಸ್ರಾ ಗಾರ್ಗ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸಿ ಆದೇಶ ಹೊರಡಿಸಿದೆ.

ಈ ವೇಳೆ ನಟ ವಿಜಯ್‌ ಮತ್ತು ಟಿವಿಕೆ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ‘ಘಟನೆ ನಡೆಯುವಾಗ ವಿಜಯ್‌ ಸೇರಿ ಟಿವಿಕೆಯ ನಾಯಕರೆಲ್ಲರೂ ಕಾಲ್ಕಿತ್ತಿದ್ದರು. ಒಬ್ಬರಿಗಾದರೂ ಜವಾಬ್ದಾರಿ ಇರಲಿಲ್ಲ. ರಾಷ್ಟ್ರಪತಿ, ಪ್ರಧಾನಿ, ಸಿಎಂ ಸೇರಿ ಎಲ್ಲಾ ಪಕ್ಷಗಳು ಸಂತಾಪ ಸೂಚಿಸಿ, ರಕ್ಷಣೆಯಲ್ಲಿ ತೊಡಗಿಕೊಂಡರೂ ಸಹ ಟಿವಿಕೆಗೆ ಒಂದು ಸಂತಾಪ ಸೂಚಿಸಲೂ ಆಗಲಿಲ್ಲ’ ಎಂದು ಚಾಟಿ ಬೀಸಿತು.ಮತ್ತೊಂದು ಪೀಠ ಸಿಬಿಐ ತನಿಖೆ ಕೋರಿದ್ದ ಬಿಜೆಪಿ ನಾಯಕರ ಅರ್ಜಿ ತಿರಸ್ಕರಿಸಿ ಇದು ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತು.

ಈಗಾಗಲೇ ರಾಜ್ಯ ಸರ್ಕಾರ ಕಾಲ್ತುಳಿತಕ್ಕೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. 

ಲಂಡನ್‌: 165 ದೇಶಗಳ 8.5 ಕೋಟಿಗೂ ಹೆಚ್ಚು ಕ್ರೈಸ್ತರ ವ್ಯಾಪ್ತಿ ಹೊಂದಿರುವ ಬ್ರಿಟನ್‌ ಕ್ಯಾಂಟ್‌ಬರ್ರಿ ಚರ್ಚ್‌ನ 106ನೇ ಆರ್ಚ್‌ಬಿಷಪ್‌ ಆಗಿ ಸಾರಾ ಮುಲ್ಲಲ್ಲಿ (63) ಅವರನ್ನು ನೇಮಿಸಲಾಗಿದೆ. ಇಂಥ ನೇಮಕ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ.

ಸಾರಾ ಅವರನ್ನು ಆರ್ಚ್‌ಬಿಷಪ್‌ ಆಗಿ ಕಿಂಗ್‌ ಚಾರ್ಲ್ಸ್‌ III ಘೋಷಿಸಿರುವರಾದರೂ, 2026ರ ಜನವರಿಯಲ್ಲಿ ಚುನಾವಣೆ ನಡೆಯುವ ತನಕ ಅವರು ನಿಯೋಜಿತ ಆರ್ಚ್‌ಬಿಷಪ್‌ ಆಗಿರಲಿದ್ದಾರೆ. ಚುನಾವಣೆಯ ಬಳಿಕ ಮಾರ್ಚ್‌ನಲ್ಲಿ ಅಧಿಕೃತವಾಗಿ ಹುದ್ದೆ ಅಲಂಕರಿಸಲಿದ್ದಾರೆ.ಈ ಮೊದಲು ಕ್ಯಾಂಟಬರ್ರಿಯ ಆರ್ಚ್‌ಬಿಷಪ್‌ ಆಗಿದ್ದ ಜಸ್ಟಿನ್ ವೆಲ್ಬಿ ವಿರುದ್ಧ ಮಕ್ಕಳಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಅವರು ರಾಜೀನಾಮೆ ನೀಡಿದ್ದರು. ಅದರ ಜಾಗಕ್ಕೆ ಸಾರಾ ಬರಲಿದ್ದಾರೆ.

ಹೇಗೆ ಸಾಧ್ಯವಾಯಿತು?:ಬಿಷಪ್‌ನ ನಂತರದ ಸ್ಥಾನವಾಗಿರುವ ಆರ್ಚ್‌ಬಿಷಪ್‌ ಆಗಲು ಪಾದ್ರಿಯಾಗಿರುವುದು ಕಡ್ಡಾಯ. ರೋಮನ್‌ ಕ್ಯಾಥಲಿಕ್‌ ಸಂಸ್ಕೃತಿಯಲ್ಲಿ ಪುರುಷರಿಗಷ್ಟೇ ಪಾದ್ರಿಯಾಗಲು ಅವಕಾಶವಿರುವುದರಿಂದ, ಸಹಜವಾಗಿ ಮಹಿಳೆಯರು ಆರ್ಚ್‌ಬಿಷಪ್‌ ಹಂತಕ್ಕೆ ಬರುವುದು ಅಸಾಧ್ಯವಾಗಿತ್ತು. ಆದರೆ 2014ರಲ್ಲಿ ಇಂಗ್ಲೆಂಡ್‌ನ ಚರ್ಚ್‌ ಈ ನಿಯಮ ಬದಲಿಸಿ, ಮಹಿಳೆಯರಿಗೂ ಬಿಷಪ್‌ ಆಗಲು ಅವಕಾಶ ನೀಡಿತ್ತು. ಹೀಗಾಗಿ2018ರಲ್ಲಿ ಸಾರಾ ಲಂಡನ್‌ನಲ್ಲಿ ಬಿಷಪ್‌ ಆದ ಮೊದಲ ಮಹಿಳೆಯೆನಿಸಿಕೊಂಡರು.

ಸ್ಕೂಬಾ ಡೈವಿಂಗ್‌ ವೇಳೆ ಟೆಕ್ಕಿಯ ಜೀವ ಉಳಿಸಿದ ಆ್ಯಪಲ್‌ ವಾಚ್‌!

ಮುಂಬೈ: ನಿತ್ಯಜೀವನದಲ್ಲಿ ಅನೇಕ ವಿಧಗಳಲ್ಲಿ ಸಹಕಾರಿಯಾಗಿರುವ ಡಿಜಿಟಲ್‌ ಉಪಕರಣಗಳು ಕೆಲವೊಮ್ಮ ಜೀವರಕ್ಷಕವಾಗಬಹುದು ಎಂಬುದನ್ನು ಘಟನೆಯೊಂದು ಸಾಬೀತುಪಡಿಸಿದೆ. ಪುದುಚೆರಿಯಲ್ಲಿ ಸ್ಕೂಬಾ ಡೈವಿಂಗ್‌ ಮಾಡುತ್ತಿದ್ದ ವೇಳೆ ಅಪಾಯಕ್ಕೆ ಸಿಲುಕಿದ್ದ ತಮ್ಮನ್ನು ಆ್ಯಪಲ್‌ ವಾಚ್‌ ಹೇಗೆ ಕಾಪಾಡಿತು ಎಂಬುದನ್ನು ಮುಂಬೈನ ಟೆಕ್ಕಿಯೊಬ್ಬರು ವಿವರಿಸಿದ್ದಾರೆ.

ಕ್ಷಿತಿಜ್‌ ಜೊಡಾಪೆ ಎಂಬ ಟೆಕಿ ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ಸ್ಕೂಬಾಡೈವಿಂಗ್‌ ಮಾಡುತ್ತಿದ್ದ ವೇಳೆ ಅವರು ತೊಟ್ಟಿದ್ದ ಸಾಧನಗಳು ಕೈಕೊಟ್ಟು, ನೀರಿನಾಳದಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಅವರು ಹೇಳುವ ಪ್ರಕಾರ, 36 ಅಡಿ ಆಳದಲ್ಲಿದ್ದ ವೇಳೆ, ಕಟ್ಟಿಕೊಂಡಿದ್ದ ತೂಕದ ಬೆಲ್ಟ್‌(ವೆಯ್ಟ್‌ ಬೆಲ್ಟ್‌) ಸಡಿಲಗೊಂಡಿತು. ಪರಿಣಾಮವಾಗಿ ಕ್ಷಿತಿಜ್‌ ಮೇಲೆ ಬರತೊಡಗಿದರು. ನೀರಿನಾಳದಲ್ಲಿ ಒತ್ತಡ ಅಧಿಕವಿರುವ ಕಾರಣ, ಇದು ಮಾರಣಾಂತಿಕವಾಗುವ ಸಂಭಬವಿರುತ್ತದೆ. ಆ ಸಂದರ್ಭದಲ್ಲಿ ಕ್ಷಿತಿಜ್‌ಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ, ಅವರ ಕೈಲಿದ್ದ ವಾಚ್‌, ಕೊಂಚ ಮೆಲ್ಲಗೆ ಚಲಿಸುವಂತೆ ಎಚ್ಚರಿಕೆ ಸಂದೇಶಗಳನ್ನು ತೋರಿಸತೊಡಗಿದೆ. ಆದರೆ ಪರಿಸ್ಥಿತಿ ಅವರ ಕೈಮೀರಿ ಹೋಗಿತ್ತು.ಅಷ್ಟುಹೊತ್ತಿಗೆ ವಾಚ್‌ ಜೋರಾಗಿ ಸೈರನ್‌ ಮೊಳಗಿಸತೊಡಗಿತು. ಪರಿಣಾಮವಾಗಿ, ಕ್ಷಿತಿಜ್‌ ಅಪಾಯದಲ್ಲಿರುವುದು ತಿಳಿದು ಮಾರ್ಗರಕ್ಷಕ ಅವರತ್ತ ಧಾವಿಸಿದ್ದಾರೆ. ಒಟ್ಟಿನಲ್ಲಿ, ವಾಚ್‌ನಿಂದಾಗಿ ಕ್ಷಿತಿಜ್‌ ಬದುಕಲು ಸಾಧ್ಯವಾಯಿತು.

ತಮ್ಮೀ ಅನುಭವವನ್ನು ಆ್ಯಪಲ್‌ ಸಿಇಒ ಟಿಮ್‌ಕುಕ್‌ ಜತೆಗೂ ಕ್ಷಿತಿಜ್‌ ಹಂಚಿಕೊಂಡಿದ್ದು, ಅದಕ್ಕವರು ಪ್ರತಿಕ್ರಿಯಿಸಿದ್ದಾರೆ.ಕ್ಷಿತಿಜ್‌ರನ್ನು ಬದುಕಿಸಿದ ಆ್ಯಪಲ್‌ ಅಲ್ಟ್ರಾ ವಾಚ್‌ 2022ರಲ್ಲಿ ಬಿಡುಗಡೆಯಾಗಿತ್ತು. ಇದು ಮೊಳಗಿಸುವ ಶಬ್ದ 180 ಮೀ. ವರೆಗೆ ಕೇಳಿಸುತ್ತದೆ.